ಹತ್ತಿಪ್ಪತ್ತು ವರ್ಷದ ಶ್ರಮಕ್ಕೆ ನ್ಯಾಯ ಸೂಚಿಸುವಂತೆ ರೈತರ ಒತ್ತಾಯ
ದಾವಣಗೆರೆ, ಮೇ 16- ಜಿಲ್ಲಾಡಳಿತದ ಅಧಿಕಾ ರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಬರ ಮತ್ತು ಉಷ್ಣಾಘಾ ತಕ್ಕೆ ಒಣಗಿ ನಾಶವಾದ ಬೆಳೆಗಳ ಸಮೀಕ್ಷೆ ನಡೆಸುವಂತೆ ಆಗ್ರಹಿಸಿ ಜಿಲ್ಲಾ ರೈತರ ಒಕ್ಕೂಟ, ಕುಕ್ಕುವಾಡ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಸಂಘದವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ರೈತ ಮುಖಂಡರು ಮಾತನಾಡಿ, ಜಿಲ್ಲೆಯ ಕುಕ್ಕುವಾಡ ಗ್ರಾಮದ ಸಕ್ಕರೆ ಕಂಪನಿ ವ್ಯಾಪ್ತಿಯಲ್ಲಿ ರೈತರು ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಬೆಳೆಸಿರುವ ಅಡಿಕೆ ಮತ್ತು ತೆಂಗಿನ ತೋಟಗಳು ಸೇರಿದಂತೆ ವಾರ್ಷಿಕ ಬೆಳೆ ಕಬ್ಬು ಭೀಕರ ಬರಕ್ಕೆ ಒಣಗಿ ನಾಶವಾಗಿವೆ ಎಂದು ಹೇಳಿದರು.
ರೈತರ ಪಟ್ಟು, ಮಣಿಯದ ಜಿಲ್ಲಾಧಿಕಾರಿ..
- ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮನವಿ ಸ್ವೀಕರಿಸಿ, ಬೆಳೆ ಹಾನಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಆದೇಶ ನೀಡಬೇಕು. ಈ ಮನವಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇನೆ ಎಂದಾಗ, `ಬಿ.ಎಂ. ಸತೀಶ್ ಅವರು, ನೀವೇ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಅಧ್ಯಕ್ಷರಿದ್ದೀರಿ, ಆದ್ದರಿಂದ ನೀವೇ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂದು ಮನವಿ ಮಾಡಿದರು.
- ಬೇಗ ಬೆಳೆ ಸಮೀಕ್ಷೆ ಮಾಡಿದರೆ, ಮಳೆಯಾದ ಕೆಲವಡೆ ಬೇಗ ಬಿತ್ತನೆ ಮಾಡಲು ಅನುಕೂಲ ಆಗಲಿದೆ ಎಂದು ಮನವರಿಕೆ ಮಾಡಿದಾಗ, `ಜಿಲ್ಲಾಧಿಕಾರಿಗಳು ಸರ್ಕಾರದಿಂದ ಸೂಚನೆ ಬಂದ ಮೇಲೆಯೇ ಕ್ರಮವಹಿಸುವುದಾಗಿ ತಿಳಿಸಿದರು.
ನೀರಿಲ್ಲದೆ, ಬಿರು ಬಿಸಿಲಿನ ಝಳ ಮತ್ತು ಉಷ್ಣಾಘಾತಕ್ಕೆ ಬೆಳೆ ಕಳೆದುಕೊಂಡ ರೈತರು ತೀವ್ರ ಆರ್ಥಿಕ ನಷ್ಟ ಎದುರಿಸುತ್ತಿದ್ದು, ಜಾನುವಾರುಗಳಿಗೂ ಮೇವು-ನೀರು ಇಲ್ಲದೆ ರೈತರ ಬದುಕು ಸಂಕಷ್ಟಕ್ಕೀಡಾಗಿದೆ ಎಂದು ಹೇಳಿದರು. ಒಂದೆಡೆ ಅವೈಜ್ಞಾನಿಕ ಭದ್ರಾ ವೇಳಾಪಟ್ಟಿ ಮತ್ತೊಂದೆಡೆ ಕೊಳವೆಬಾವಿ ಬತ್ತಿ ಹೋಗಿದ್ದರಿಂದ ರೈತನ ಬದುಕು ಕಾದ ಹೆಂಚಿನ ಮೇಲೆ ಇದ್ದಂತೆ ಆಗಿದೆ. ಆದ್ದರಿಂದ ತಕ್ಷಣವೇ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡುವಂತೆ ಆಗ್ರಹಿಸಿದರು.
ಸತ್ತ ಜಾನುವಾರುಗಳ ನಷ್ಟ, ಬಿತ್ತನೆಗೆ ಬಳಕೆಯಾದ ವೆಚ್ಚ ಸೇರಿದಂತೆ ಒಣಗಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಬೆಳೆಗಳ ನಾಶದ ಅಂದಾಜಿನ ಜತೆಗೆ ಬೋರ್ವೆಲ್ ರಿಚಾರ್ಜ್ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್, ಬಲ್ಲೂರು ರವಿಕುಮಾರ, ರಾಘವೇಂದ್ರ ನಾಯ್ಕ್, ಹದಡಿ ಜಿ.ಸಿ. ನಿಂಗಪ್ಪ, ಕುಕ್ಕುವಾಡದ ರುದ್ರೇಗೌಡ್ರು, ಡಿ.ಬಿ. ಶಂಕರ್, ಕೆ.ಸಿ. ಶಿವಕುಮಾರ, ಕೆ.ಜಿ. ರವಿಕುಮಾರ, ಬಲ್ಲೂರು ಬಸವರಾಜು, ಮುದಹದಡಿ ದಿಳ್ಳಪ್ಪ, ಶಂಭುಲಿಂಗನಗೌಡ್ರು, ನಾಗರಸನಹಳ್ಳಿ ಚನ್ನಪ್ಪ, ಕೊಳೇನಹಳ್ಳಿ ಕೆ. ಶರಣಪ್ಪ, ಗುತ್ನಾಳ ಮಂಜುನಾಥ, ತುರ್ಚಘಟ್ಟದ ಶ್ರೀನಿವಾಸ ಮತ್ತು ಮುಖಂಡರು ಇದ್ದರು.