ಬೃಹನ್ಮಠದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಡಾ. ಬಸವಕುಮಾರ ಸ್ವಾಮೀಜಿ
ಚಿತ್ರದುರ್ಗ, ಮೇ 15 – ದಂಪತಿಗಳ ಬದುಕಿನಲ್ಲಿ ಸಾಮರಸ್ಯವೇ ಪ್ರಧಾನವಾಗಬೇಕು. ನಾನೆಚ್ಚು, ನೀನು ಕಡಿಮೆ ಎಂದರೆ ಅದು ಸಾರವತ್ತಾದ ಸಂಸಾರವಾಗಲು ಸಾಧ್ಯವಿಲ್ಲ. ಅನ್ಯೋನ್ಯತೆಯೇ ಇಲ್ಲಿ ಪ್ರಧಾನ ಅಂಶವಾಗಬೇಕು ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹಿತ ನುಡಿದರು.
ಬೃಹನ್ಮಠದ ಆವರಣದಲ್ಲಿನ ಅನುಭವ ಮಂಟ ಪದಲ್ಲಿ ಆಯೋಜಿಸಲಾಗಿದ್ದ 34ನೇ ವರ್ಷದ ಐದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸ ವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಶ್ರೀ ಬೃಹನ್ಮಠದ ಸಾಮಾಜಿಕ ಕಾರ್ಯಗಳಲ್ಲಿ ಈ ಸರಳ, ಸಾಮೂಹಿಕ ವಿವಾಹವೂ ಒಂದು. ಇದು ಎಷ್ಟೋ ಬಡಜನರ ಪಾಲಿಗೆ ಆಶಾಕಿರಣವಾಗಿದೆ. ಅಲ್ಲದೇ ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಕ್ರಮವೂ ಶ್ಲ್ಯಾಘನೀಯ ಎಂದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತ ನಾಡಿ, ಜೀವನ ಸುಖವಾಗಿ ನಡೆಯಲು ಎಲ್ಲರಲ್ಲೂ ನಂಬಿಕೆ ಅಗತ್ಯ. ಅದು ಇರದೇ ಹೋದರೆ ಸಂಸಾರ ವಿಘಟನೆಯ ಹಾದಿ ಹಿಡಿಯುತ್ತದೆ. ಕುಟುಂಬ ಅಂದರೆ ತೊಂದರೆ, ತಾಪತ್ರಯ, ಸಮಸ್ಯೆ ಇರು ವುದು ಸಹಜ. ಅವುಗಳನ್ನು ತಾಳ್ಮೆ, ಸಹನೆಯಿಂದ ಪರಿಹರಿಸಿಕೊಂಡು ಸಾಗಬೇಕು ಎಂದು ತಿಳಿಸಿದರು.
ಈ ವೇದಿಕೆಯಲ್ಲಿ ಬಡವರು ಮಾತ್ರ ಮದುವೆ ಮಾಡಿಕೊಂಡಿಲ್ಲ. ಸಿರಿವಂತರೂ ಇಲ್ಲಿ ತಮ್ಮ ಕಲ್ಯಾಣ ಮಹೋತ್ಸವ ನೆರವೇರಿಸಿಕೊಂಡು ಹೋಗಿರುವ ಉದಾಹರಣೆ ಇದೆ. ಅಂತಹ ಸಾಮಾಜಿಕ ಹೊಣೆಗಾರಿಕೆ ಶ್ರೀಮಠದ್ದಾಗಿದೆ. ಎಂತಹ ಸಂದರ್ಭದಲ್ಲಿಯೂ ಸಾಮೂಹಿಕ ಕಲ್ಯಾಣ ಮಹೋತ್ಸವಗಳು ನಿಂತಿರುವ ಉದಾಹರಣೆ ಇಲ್ಲ ಎಂದು ಸ್ವಾಮೀಜಿ ನುಡಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಬೃಹನ್ಮಠದ ಖಾಸಾಮಠ ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾವುದಕ್ಕೆ ಕೊರತೆಯಾದರೂ ಸಹ ವಿಶ್ವಾಸಕ್ಕೆ ಭಂಗ ಬರಬಾರದು. ಪರಸ್ಪರ ಪ್ರೀತಿ-ವಿಶ್ವಾಸ ಸಹ ಬಾಳ್ವೆಯಿಂದ ಬದುಕು ಹಸನಾಗಲು ಸಾಧ್ಯವಿದೆ. ಅಂತಹ ದಾರಿಯಲ್ಲಿ ನೂತನ ದಂಪತಿಗಳು ಸಾಗಬೇಕು ಎಂದು ಸಲಹೆ ನೀಡಿದರು.
ಜಮುರಾ ಕಲಾವಿದ ಉಮೇಶ ಪತ್ತಾರ ಮತ್ತು ಸಂಗಡಿಗರು ವಚನ ಗಾಯನ ಮತ್ತು ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿ ಪದಗಳನ್ನು ಹಾಡಿದರು.