ಪುಟ್ಟರಾಜ ಗವಾಯಿಗಳ ಅಭಿಮಾನಿ ಭಕ್ತರ ಸಮಾವೇಶದಲ್ಲಿ ಕಿರುವಾಡಿ ಗಿರಿಜಮ್ಮ
ದಾವಣಗೆರೆ, ಮೇ 14- ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಮತ್ತು ಪುಟ್ಟರಾಜ ಗವಾಯಿಗಳು ಸಂಗೀತದ ಮೂಲಕ ಕೊಟ್ಟ ಜ್ಞಾನವನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಶ್ರೀಮತಿ ಕಿರುವಾಡಿ ಗಿರಿಜಮ್ಮ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಪಂ. ಪುಟ್ಟರಾಜ ಸೇವಾ ಸಮಿತಿಯಿಂದ ನಡೆದ ಪುಟ್ಟರಾಜ ಗವಾಯಿಗಳ ಅಭಿಮಾನಿ ಭಕ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪಂಡಿತ ಪುಟ್ಟರಾಜ ಗವಾಯಿ ಅವರ ಸಂಗೀತದಲ್ಲಿ ಅಪಾರ ಜ್ಞಾನ ಅಡಗಿದೆ. ಅವರ ಸಂಗೀತ ಮನಸ್ಸಿಗೆ ಮುದ ನೀಡುವುದರ ಜತೆಗೆ ಮನಸ್ಸನ್ನು ಅರಳಿಸುತ್ತದೆ ಎಂದು ಹೇಳಿದರು.
ನಾನು ಕಿರುವಾಡಿ ಮನೆತನದ ಸೊಸೆಯಾದ ಕಾರಣ ಪುಟ್ಟರಾಜ ಗವಾಯಿ ಅವರನ್ನು ಹತ್ತಿರದಿಂದ ನೋಡುವ ಭಾಗ್ಯ ದೊರೆತಿತ್ತು. ಅವರು ನಮ್ಮ ಮನೆಗೆ ಪೂಜೆಗೆ ಬರುತ್ತಿದ್ದಾಗ, ಕಣ್ಣು ಇಲ್ಲದಿದ್ದರೂ ಗವಾಯಿಗಳು ಕೈಗೊಳ್ಳುತ್ತಿದ್ದ ಪೂಜೆ, ಪುನಸ್ಕಾರವು ದೈವಾಂಶಸಂಭೂತರೇ ಮಾಡುತ್ತಿರುವಂತೆ ಭಾಸವಾಗುತ್ತಿತ್ತು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿ ಸಿದ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಬಿ ವಿನಾಯಕ ಮಾತನಾಡಿ, ಸಾರ್ವ ಜನಿಕರು ನಮಗೆ ಆರ್ಥಿಕವಾಗಿಲ್ಲ ದಿದ್ದರೂ ಮಾನಸಿಕವಾಗಿ ಬೆಂಬಲಿಸಿ ದರೆ, ಪುಟ್ಟರಾಜ ಗವಾಯಿಗಳವರ ಕುರಿತು ಮತ್ತಷ್ಟು ಕಾರ್ಯಕ್ರಮ ರೂಪಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಭಾರೀ ಬಿಸಿಲಿನಲ್ಲೂ ರಾಜ್ಯದ ವಿವಿಧ ಭಾಗಗಳಿಂದ ಈ ಸಮಾ ವೇಶದಲ್ಲಿ ಭಕ್ತರು ಪಾಲ್ಗೊಂಡಿರುವ ಬಗ್ಗೆ ಶ್ಲ್ಯಾಘಿಸಿದ ವಿನಾಯಕ,
ಇದು ಪುಟ್ಟರಾಜ ಗವಾಯಿಗಳವರ ಮೇಲಿನ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ಚನ್ನವೀರ ಸ್ವಾಮಿ ಹಿರೇಮಠ ಪ್ರಾಸ್ತಾವಿಕ ಮಾತ ನಾಡಿ, ಪುಟ್ಟರಾಜ ಗವಾಯಿಗಳ `ಸಾವಿರದ ಸಾಹಿತ್ಯ’ವನ್ನು ಅಭಿಯಾನದ ಮೂಲಕ ರಾಜ್ಯದ ಮನೆ-ಮನೆಗೆ ತಲುಪಿಸುತ್ತಾ ಗವಾಯಿಗಳ ಸಾಧನೆಯನ್ನು ಪಸರಿಸುವ ಕಾರ್ಯವನ್ನು ಸಮಿತಿ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಅಣಬೇರು ಮಂಜಣ್ಣ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮ ದೇವಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶಪ್ಪ, ಶಿವಬಸಯ್ಯ ಚರಂತಿಮಠ, ಪಿ.ಎಂ ಕೊಟ್ರಯ್ಯ ಇತರರು ಇದ್ದರು.