ತ್ಯಾಜ್ಯ ವಿಲೇವಾರಿ ಘಟಕದಿಂದ ಸಮಸ್ಯೆ

ತ್ಯಾಜ್ಯ ವಿಲೇವಾರಿ ಘಟಕದಿಂದ ಸಮಸ್ಯೆ

ಆವರಗೊಳ್ಳ ಗ್ರಾಮಸ್ಥರಿಂದ ಪ್ರತಿಭಟನೆ, ಡಂಪಿಂಗ್ ಯಾರ್ಡ್‌ ಸ್ಥಳಾಂತರಕ್ಕೆ ಆಗ್ರಹ

ದಾವಣಗೆರೆ, ಮೇ 13-  ಆವರಗೊಳ್ಳದ ತ್ಯಾಜ್ಯ ವಿಲೇವಾರಿ ಘಟಕವನ್ನು  ಬೇರೆಡೆಗೆ ಸ್ಥಳಾಂತರ ಮಾಡಬೇಕು, ಇಲ್ಲವೇ ವೈಜ್ಞಾನಿಕವಾಗಿ ಸಂಸ್ಕರಣೆಯಾಗುವ ಪಾಲಿಕೆಯ ಕಸ ತರಬಾರದು ಎಂದು ಒತ್ತಾಯಿಸಿ, ಆವರಗೊಳ್ಳ ಗ್ರಾಮಸ್ಥರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಆವರಗೊಳ್ಳದ ಬಳಿ ಡಂಪಿಂಗ್ ಯಾರ್ಡ್‌ಗೆ ಬೆಂಕಿ ಬಿದ್ದು 10 ದಿನ ಕಳೆದರೂ ಬೆಂಕಿ ನಂದಿಸಲು ಕ್ರಮ ಕೈಗೊಂಡಿಲ್ಲ. ತ್ಯಾಜ್ಯವನ್ನು ಸಂಸ್ಕರಿಸಲಾಗದೇ ಪಾಲಿಕೆಯವರೇ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಅಡಿಕೆ, ತೆಂಗು ಹಾಗೂ ಭತ್ತದ ಬೆಳೆಯ ಮೇಲೆ ಬೂದಿ ಬಿದ್ದು ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ಹೊತ್ತು ದುರ್ನಾತದ ಜತೆಗೆ ಸೊಳ್ಳೆ ಉತ್ಪತ್ತಿ ಹೆಚ್ಚಾಗಿರುವ ಕಾರಣ ಗ್ರಾಮಸ್ಥರಿಗೆ ಅಸ್ತಮಾ, ಜ್ವರ ಸೇರಿದಂತೆ, ಇತರೆ ರೋಗ-ರುಜಿನ ಬಾಧಿಸುತ್ತಿದೆ. ನಾಯಿಗಳ ಹಾವಳಿಯಿಂದ ರೈತರು ಹೊಲ-ಗದ್ದೆಗಳಿಗೆ ನೀರು ಹಾಯಿಸಲು ಹೋಗಲು ಭಯ ಪಡುವಂತಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ ಅವರು ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು.

ಡಂಪಿಂಗ್ ಯಾರ್ಡ್‌ನಲ್ಲಿ ಬಿದ್ದಿರುವ ಬೆಂಕಿ ನಂದಿಸಲು ಈಗಿನಿಂದಲೇ ವ್ಯವಸ್ಥೆ ಮಾಡಲಾಗಿದೆ. ಹಾನಿಯಾಗಿರುವ ಬೆಳೆಯ ಸಮೀಕ್ಷೆ ನಡೆಸಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರು ಆರೋಗ್ಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು.  ನೀತಿ ಸಂಹಿತೆ ಮುಗಿದ ಬಳಿಕ ಸಚಿವರೊಂದಿಗೆ ಚರ್ಚಿಸಿ ಈ ಘಟಕವನ್ನು ಸ್ಥಳಾಂತರಿಸಬೇಕೋ ಅಥವಾ ಪರ್ಯಾಯ ವ್ಯವಸ್ಥೆ ಮಾಡಬೇಕೋ ಎನ್ನುವುದನ್ನು ತೀರ್ಮಾನಿಸಲಾಗುವುದು ಎಂದು ಮನವೋಲಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಮಹಾನಗರ ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಸದಸ್ಯರಾದ ಎಸ್.ಟಿ. ವೀರೇಶ್, ಶಿವಾನಂದ್ ಮತ್ತಿತರರು ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಆಯುಕ್ತೆ ರೇಣುಕಾ, ತ್ಯಾಜ್ಯದ ಸಮಸ್ಯೆ ಪರಿಹಾರಕ್ಕೆ ಸರ್ಕಾರ 21 ಕೋಟಿ ರೂ. ಬಿಡುಗಡೆ ಮಾಡಿದೆ ಎಂದರು.

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಬಿ.ಎಂ. ಷಣ್ಮುಖಯ್ಯ, ಜಿ.ಟಿ. ವೀರಣ್ಣ ಕೆ.ಸಿ. ಸಿದ್ದೇಶ್, ಶಿವಪುತ್ರಪ್ಪ, ಬೆಲ್ಲದ ಚಂದ್ರಪ್ಪ, ಪಿ. ವೀರಭದ್ರಪ್ಪ, ಎಸ್.ವೀರಯ್ಯ, ದಳಪತಿ ವೀರಯ್ಯ, ದೊಡ್ಡಪ್ಪ, ಅಂಗಡಿ ವೀರಣ್ಣ ಮತ್ತಿತರರಿದ್ದರು. ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಗಮಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

error: Content is protected !!