ನೇರಳೆ ತಾಕಿನಲ್ಲಿ ಪಾರಂಪರಿಕ ಬೀಜದ ಸಂತೆ

ನೇರಳೆ ತಾಕಿನಲ್ಲಿ ಪಾರಂಪರಿಕ ಬೀಜದ ಸಂತೆ

ದಾವಣಗೆರೆ, ಮೇ 12 – ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಭಾನುವಾರದಂದು ಪಾರಂಪರಿಕ ಬೀಜದ ವಿಶಿಷ್ಟ ಸಂತೆಗೆ ಸಾಕ್ಷಿಯಾಯಿತು.

ಕೇಂದ್ರದಲ್ಲಿರುವ ಜಂಬುನೇರಳೆ ತಾಕಿನ ನೆರಳಿನಲ್ಲಿ ದೂರದ ರಾಜ್ಯಗಳಿಂದ ಬಂದಿದ್ದ ಪಾರಂಪ ರಿಕ ಬೀಜ ಮಾರಾಟಗಾರರು ಹಾಗೂ ದೂರದ ಊರು ಗಳಿಂದ ಬಂದ ಖರೀದಿದಾರರು ಸಂಗಮಿಸಿದ್ದರು.

ಹರಿಯಾಣ, ತಮಿಳುನಾಡು, ಅಸ್ಸಾಂ, ಒಡಿಶಾ ಗಳಿಂದಲೂ ಮಾರಾಟಗಾರರು ಆಗಮಿಸಿದ್ದರು. ತಮ್ಮ ಸ್ಥಳೀಯ ಪರಂಪರೆಯ ಬಿತ್ತನೆ ಬೀಜಗಳನ್ನು ಮಾರಾಟ ಮಾಡಿದರು.

ಹರಿಯಾಣದ ಸೋನಿಪತ್‌ನಿಂದ ಬಂದಿದ್ದ ಕೃಷಿಕ ರಾಜೇಶ್ ಅವರು 3 ಅಡಿ ಹೀರೇಕಾಯಿ ಫಲ ನೀಡುವ ಬೀಜ, 5 ಅಡಿ ಉದ್ದನೆಯ ಸೋರೆಕಾಯಿ ಬೀಜಗಳನ್ನು ಮಾರಾಟಕ್ಕೆ ತಂದಿದ್ದರು. ಒಂದೂಕಾಲು ಅಡಿ ಉದ್ದ ಬೆಳೆಯುವ ಮೆಣಸಿನ ಕಾಯಿ ಬೀಜವನ್ನೂ ತಂದಿದ್ದರು.

ಹಾವೇರಿ ಜಿಲ್ಲೆ ಇಟಗಿಯ ಭೂಮಿಕಾ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘದವರು ವಿವಿಧ ರೀತಿ ರಾಗಿ ಬೀಜಗಳನ್ನು ಮಾರಾಟಕ್ಕೆ ತಂದಿದ್ದರು.

ಹೈಬ್ರಿಡ್‌ನಲ್ಲಿ ಅಷ್ಟೇ ಅಲ್ಲದೇ, ಜವಾರಿಯಲ್ಲೂ ಬೃಹತ್ ಗಾತ್ರದ ಇಳುವರಿ ಪಡೆಯಬಹುದು ಎಂಬುದನ್ನು ಹಲವಾರು ರೈತರು ತಿಳಿಸಿದರು.

ಕೊಂಡಜ್ಜಿಯ ನಾಗರಾಜ ಅವರು ವಿವಿಧ ರೀತಿಯ ನಿಂಬೆಹಣ್ಣುಗಳ ಸಸಿಗಳನ್ನು ಮಾರಾಟಕ್ಕೆ ತಂದಿದ್ದರು. ಇದರಲ್ಲಿ ಸೀಡ್‌ಲೆಸ್‌ ನಿಂಬೆಹಣ್ಣೂ ಸೇರಿತ್ತು. ಬೀಜ ಮೇಳದಲ್ಲಿ ಬೀಜ ರಹಿತ ನಿಂಬೆಯ ಮಾರಾಟ ಮತ್ತೊಂದು ವಿಶೇಷವೂ ಆಗಿತ್ತು.

ಪುತ್ತೂರಿನ ಪಾಂಡುರಂಗ ಭಟ್ ಅವರು ಬಿದಿರು ಅಕ್ಕಿಯನ್ನು ಮಾರಾಟಕ್ಕೆ ತಂದಿದ್ದರು. ಈ ಅಕ್ಕಿ 60 ವರ್ಷಗಳಿಗೆ ಒಮ್ಮೆ ಮಾತ್ರ ಸಿಗುತ್ತದೆ. ಈಗ ಮಾರಲು ತಂದಿರುವ ಭತ್ತ 12 ವರ್ಷ ಹಳೆಯದು. ಸರಿಯಾಗಿ ದಾಸ್ತಾನಿಟ್ಟರೆ ಈ ಅಕ್ಕಿ ಕೆಡುವುದಿಲ್ಲ ಎಂದು ಹೇಳಿದರು.

ಕುಂಬಳೂರಿನ ಆಂಜನೇಯ ಅವರು 120 ವಿಧದ ಭತ್ತ ಸೇರಿದಂತೆ ಹಲವು ಕಾಳುಗಳ ಬೀಜಗಳನ್ನು ಪ್ರದರ್ಶನಕ್ಕೆ ತಂದಿದ್ದರು.

error: Content is protected !!