ದಾವಣಗೆರೆ, ಮೇ 12 – ದಾವಣಗೆರೆಯಲ್ಲಿ ಹೆಚ್ಚು ರಸಗೊಬ್ಬರ ಬಳಕೆಯಾಗುತ್ತಿದ್ದು, ಇದು ಅನಾರೋಗ್ಯಕರವಾಗಿದೆ. ರಸಗೊಬ್ಬರದ ಬಳಕೆಯು ಮಣ್ಣಿಗೆ ವಿಷ ಹಾಕಿದಂತೆ ಎಂದು ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಯ ಕೃಷ್ಣ ಪ್ರಸಾದ್ ಹೇಳಿದರು.
ಬೆಂಗಳೂರಿನ ಕೃಷಿ ತಂತ್ರಜ್ಞಾನಗಳ ಅನ್ವಯಿಕ ಸಂಸ್ಥೆ ಹಾಗೂ ಬೆಂಗಳೂರಿನ ಸಹಜ ಸಮೃದ್ಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದು ಆಯೋಜಿಸಲಾಗಿದ್ದ ಪಾರಂಪರಿಕ ಬೀಜ ಮೇಳದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಅಂಗಡಿಯಲ್ಲಿ ಬಿತ್ತನೆ ಬೀಜಗಳನ್ನು ತಂದರೆ ಒಳ್ಳೆಯದು ಎಂಬುದು ಬರೀ ಭ್ರಮೆ. ಪಾರಂಪರಿಕ ಬೀಜಗಳಲ್ಲಿ ಹೆಚ್ಚು ಉಪಯುಕ್ತತೆ ಇದೆ ಎಂದು ಹೇಳಿದರು.
ತಮಿಳುನಾಡಿನ ವೆಲ್ಲೂರಿನಲ್ಲಿ ಪಾರಂಪರಿಕ ಬೀಜಗಳ ಬಳಕೆಯಿಂದ ಕ್ರಾಂತಿಯೇ ಆಗಿದೆ. ದಾವಣಗೆರೆಯಲ್ಲೂ ಈ ಕಾರ್ಯಕ್ರಮದ ಮೂಲಕ ಅದೇ ರೀತಿಯ ಕ್ರಾಂತಿಗೆ ದಾರಿಯಾಗಲಿ ಎಂದು ಆಶಿಸಿದರು.
ಭಾರತ್ ಬೀಜ್ ಸ್ವರಾಜ್ ಮಂಚ್ ರಾಷ್ಟ್ರೀಯ ಸಂಚಾಲಕರಾದ ಛತ್ತೀಸ್ಘಡದ ಜಾಕೋಬ್ ನೆಲ್ಲಿ ತಾನಂ ಮಾತನಾಡಿ, ಪಾರಂಪರಿಕ ಬೀಜಗಳೆಂದರೆ ಸಂಪ್ರದಾಯದಂತೆ ಸ್ಥಿರವಾಗಿರುತ್ತವೆ ಎಂದು ಭಾವಿಸುವುದು ತಪ್ಪು. ಈ ಬೀಜಗಳು ಪರಿವರ್ತನೆ ಹೊಂದುತ್ತಿರುತ್ತವೆ. ಉತ್ತಮ ಇಳುವರಿ ನೀಡುವ ಹೆಚ್.ಎಂ.ಟಿ. ಭತ್ತ ಇದಕ್ಕೊಂದು ಉದಾಹರಣೆ ಎಂದರು.
ಪಾರಂಪರಿಕ ಬಿತ್ತನೆ ಬೀಜಗಳಲ್ಲಿನ ವೈವಿಧ್ಯತೆಗಳನ್ನು ಹಂಚಿಕೊಂಡು ಉಳಿಸುವ ಜೊತೆಗೆ ಇನ್ನಷ್ಟು ವಿಸ್ತರಿಸಬೇಕಿದೆ ಎಂದೂ ಅವರು ಹೇಳಿದರು.
ಪಾರಂಪರಿಕ ಬೀಜಗಳಿಗೆ ಅಂತರರಾಷ್ಟ್ರೀಯ ಕಾನೂನುಗಳು, ಹಕ್ಕುಸ್ವಾಮ್ಯ ಕಾಯ್ದೆಗಳು ಸೇರಿದಂತೆ ಹಲವು ಸವಾಲುಗಳಿವೆ. ಸಾರ್ವಜನಿಕರ ಹಣದಿಂದ ಕಾರ್ಯನಿರ್ವಹಿಸುವ ವಿಶ್ವವಿದ್ಯಾಲಯಗಳೂ ಸಹ ಬೀಜಗಳ ಮೇಲೆ ಹಕ್ಕು ಸ್ವಾಮ್ಯ ಹೊಂದಲು ಮುಂದಾಗುತ್ತಿರುವುದು ವಿಷಾದಕರ ಎಂದವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರಿನ ಬೀಜ ಸಂರಕ್ಷಕಿ ಪದ್ಮಾವತಮ್ಮ, ಸಿದ್ಧ ಬೀಜಗಳೇ ಬೇಕು ಎಂಬ ಮನೋಭಾವದಿಂದ ಹೊರ ಬರಬೇಕು. ಮುಂದಿನ ಪೀಳಿಗೆಗೆ ಒಳ್ಳೆಯ ಫಲವತ್ತಾದ ಭೂಮಿ ಬಿಟ್ಟು ಹೋಗಬೇಕು ಎಂದರೆ ಪಾರಂಪರಿಕ ಕೃಷಿ ಪದ್ಧತಿಗಳನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಐಕಾಂತಿಕ ಸಂಸ್ಥೆಯ ರಾಘವ ಪ್ರಾಸ್ತಾವಿಕವಾಗಿ ಮಾತನಾಡಿ, ಪಾರಂಪರಿಕ ಬಿತ್ತನೆ ಬೀಜ ಬಳಸಿದರೆ ಕೃಷಿಕರು ಹಾಗೂ ಕೈತೋಟ ನಿರ್ವಹಿಸುವವರಿಗೆ ಅರ್ಧ ಕೆಲಸ ಕಡಿಮೆಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷ ಟಿ.ಎನ್. ದೇವರಾಜ ಮಾತನಾಡಿ, ಪಾರಂಪರಿಕ ಬೀಜಗಳಿಂದ ಆದಾಯ, ಆರೋಗ್ಯ ಹಾಗೂ ಆನಂದ ಸಾಧ್ಯ. ಮಧ್ಯ ಕರ್ನಾಟಕದಿಂದ ಆರಂಭವಾಗಿರುವ ಈ ಅಭಿಯಾನ ಮುಂದಿನ ದಿನಗಳಲ್ಲಿ ಕರ್ನಾಟದಾದ್ಯಂತ ಹರಡಲಿ ಎಂದು ಆಶಿಸಿದರು.
ವೇದಿಕೆಯ ಮೇಲೆ ಬೆಂಗಳೂರಿನ ಕೈತೋಟ ಪರಿಣಿತ ರಾಜೇಂದ್ರ ಹೆಗಡೆ ಉಪಸ್ಥಿತರಿದ್ದರು.
ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಎಂ.ಜಿ. ಬಸವನಗೌಡ ಸ್ವಾಗತಿಸಿದರು. ಟಿ.ಜಿ. ಅವಿನಾಶ್ ನಿರೂಪಿಸಿದರೆ, ಜಬಿವುಲ್ಲಾ ವಂದಿಸಿದರು.