ದಾವಣಗೆರೆ, ಮೇ 7 – ದಾವಣಗೆರೆ ಲೋಕಸಭಾ ಕ್ಷೇತ್ರದೆ ಲ್ಲೆಡೆ ಕಾಂಗ್ರೆಸ್ಗೆ ಉತ್ತಮ ಬೆಂಬಲ ಸಿಗುತ್ತಿದೆ. ಈ ಬಾರಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಐ.ಎಂ.ಎ. ಹಾಲ್ ನಲ್ಲಿರುವ ಮತಗಟ್ಟೆಯಲ್ಲಿ ಕುಟುಂಬ ದವರ ಜೊತೆ ಮತದಾನ ಮಾಡಿದ ನಂತರ ಮಾತನಾಡಿದ ಅವರು, ಕ್ಷೇತ್ರದ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಉತ್ತಮ ಬೆಂಬಲ ಕಂಡುಬರುತ್ತಿದೆ ಎಂದರು.
ಗ್ಯಾರಂಟಿಗಳ ಕಾರಣದಿಂದ ಜನ ಹೆಚ್ಚು ಬೆಂಬಲಿಸುತ್ತಿದ್ದಾರೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಅದರಲ್ಲೂ, ಶೇ.99ರಷ್ಟು ಮಹಿಳೆ ಯರು ನಮ್ಮ ಅಭ್ಯರ್ಥಿಗೆ ಆಶೀ ರ್ವಾದ ಮಾಡುವ ಸಂಪೂರ್ಣ ವಿಶ್ವಾಸ ಇದೆ ಎಂದು ತಿಳಿಸಿದರು.
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ನಮಗೆ ಮೋಸ ಆಗಿದೆ. ಆ ಮೋಸವು ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ. ಈ ಬಾರಿ ಕಾರ್ಯಕರ್ತರು ಸಂಘಟಿತವಾಗಿ ಕೆಲಸ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ಕಾಂಗ್ರೆಸ್ನವರು ಭ್ರಷ್ಟಾಚಾರದ ಹಣ ಹರಿಸುತ್ತಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಮಲ್ಲಿಕಾರ್ಜುನ್, ನಮ್ಮಲ್ಲಿ ಭ್ರಷ್ಟಾಚಾರವಿಲ್ಲ. ಅವರಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಹೇಳಿದರು.
ಅಹಂಕಾರದ ಕಾರಣದಿಂದ ಬಿಜೆಪಿಯಲ್ಲಿರುವ ಒಳ್ಳೆಯ ಕಾರ್ಯಕರ್ತರು ದೂರ ಸರಿದಿದ್ದಾರೆ. ಅವರು ಈ ಬಾರಿ ಕಾಂಗ್ರೆಸ್ಗೆ ಬೆಂಬಲಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ಗೆ 15ರಿಂದ 18 ಸ್ಥಾನ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.
ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಎಂಟು ಕ್ಷೇತ್ರಗಳಲ್ಲಿ ಒಳ್ಳೆಯ ಮತದಾನವಾಗುತ್ತಿದೆ. ಕಾರ್ಯಕರ್ತರು, ಶಾಸಕರು, ಶಾಮನೂರು ಕುಟುಂಬದ ಅಭಿಮಾನಿಗಳು ಕಾಂಗ್ರೆಸ್ ಗೆಲ್ಲಿಸಲು ತೀರ್ಮಾನಿಸಿ ಕೆಲಸ ಮಾಡಿದ್ದಾರೆ. ಉತ್ತಮ ಸ್ಪಂದನೆ ಸಿಗುತ್ತಿದೆ ಎಂದರು.
ಮತದಾನದ ನಂತರ ಮಾತನಾಡಿದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಪ್ರಭಾ ಮಲ್ಲಿಕಾರ್ಜುನ್ ಅವರು 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದರು.
ಕಾಂಗ್ರೆಸ್ನವರು ದುಡ್ಡಿನ ಹೊಳೆ ಹರಿಸುತ್ತಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿದ ಆರೋಪ ತಳ್ಳಿ ಹಾಕಿದ ಅವರು, ಸಿದ್ದೇಶ್ವರ ಏನು ಮಾಡುತ್ತಿದ್ದಾರೆ? ಕತ್ತೆ ಕಾಯುತ್ತಿದ್ದಾರೆಯೇ? ಎಂದು ಕೇಳಬೇಕಾಗುತ್ತದೆ ಎಂದರು.
ಮಲ್ಲಿಕಾರ್ಜುನ್ ಅವರ ಮಕ್ಕಳಾದ ಸಮರ್ಥ ಹಾಗೂ ಶ್ರೇಷ್ಠ ಅವರೂ ಮತ ಚಲಾಯಿಸಿದರು.