ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಪರ ಎಸ್ಸೆಸ್ ಭರ್ಜರಿ ರೋಡ್ ಷೋ
ದಾವಣಗೆರೆ, ಮೇ 2 – ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 18, 7, 8 ಮತ್ತು 10ನೇ ವಾರ್ಡ್ಗಳಲ್ಲಿ ವ್ಯಾಪ್ತಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ|| ಪ್ರಭಾ ಮಲ್ಲಿಕಾ ರ್ಜುನ್ ಪರವಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಭರ್ಜರಿ ರೋಡ್ ಷೋ ನಡೆಸಿದರು.
ನಂತರ ಎಸ್ಸೆಸ್ ಮಾತನಾಡಿ, ಭಾರತ ದೇಶ ಸರ್ವಜನಾಂಗದ ಶಾಂತಿಯ ತೋಟ ಇಂತಹ ತೋಟವನ್ನು ಹಾಳು ಮಾಡುವ ಜನರನ್ನು ದೂರವಿಡಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ ಎಂದು ತಿಳಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರವು ಸಹ ಭಾರತ ದೇಶ ಇದ್ದಂತೆ ಇಲ್ಲಿ ಎಲ್ಲಾ ಜಾತಿ ಧರ್ಮದವರು ಇದ್ದಾರೆ. ಈ ಭಾಗದಲ್ಲಿ ನಮಗೆ ಯಾವ ರೀತಿ ಸದಾ ಬೆಂಬಲ ನೀಡುತ್ತಾ ಉತ್ತಮ ವಾತಾವರಣಕ್ಕೆ ಸಹಕಾರಿ ಯಾಗಿದ್ದಿರಿ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ರೂ.122 ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸಲಾಗುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ವಿನಾಯಕ ಪೈಲ್ವಾನ್, ಬ್ಲಾಕ್ ಅಧ್ಯಕ್ಷ ಅಯೂಬ್ ಪೈಲ್ವಾನ್, ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ, ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಮಾಜಿ ಸದಸ್ಯ ಪಿ.ಎನ್.ಚಂದ್ರಶೇಖರ್, ಮಾಜಿ ಮೇಯರ್ ಅನಿತಾಬಾಯಿ, ಮಾಜಿ ಸದಸ್ಯ ಪಿ.ಎನ್.ಚಂದ್ರಶೇಖರ್, ಡೂಡಾ ಮಾಜಿ ಅಧ್ಯಕ್ಷ
ಮಾಲತೇಶ್ ರಾವ್, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ, ಮಾಜಿ ಉಪಾಧ್ಯಕ್ಷ ಎಸ್.ಎನ್.ಚಂದ್ರಪ್ಪ, ಮಾಜಿ ಸದಸ್ಯ ಬಾಬುರಾವ್ ಸಾಳಂಕಿ, ವಾರ್ಡ್ ಅಧ್ಯಕ್ಷರುಗಳಾದ ಪರಮೇಶ್, ಶಂಭು, ವಿಶ್ವನಾಥ, ಡಿಶ್ ಮಂಜುನಾಥ್, ಸತೀಶ್, ಕ್ಯಾಪ್ಟನ್ ನಾಗರಾಜ್, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ಉದ್ಯಮಿಗಳಾದ ಅಥಣಿ ವೀರಣ್ಣ, ಎಸ್.ಕೆ.ವೀರಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.