ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ : ಗಾಯತ್ರಿ

ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ : ಗಾಯತ್ರಿ

ಮಾಯಕೊಂಡ, ಏ.30- ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಅವರ ಕಾರ್ಯ ವೈಖರಿ ಮತ್ತು ಅಭಿವೃದ್ಧಿ ನೋಡಿ ಕಾಂಗ್ರೆಸ್‌ಗೆ ನಡುಕ ಉಂಟಾಗಿದೆ. ಸಿದ್ದೇಶ್ವರ ಅವರ ದೂರದೃಷ್ಟಿ, ಸಮಾಜಮುಖಿ ಕೆಲಸ ನೋಡಿ ಜನ ಅವರನ್ನು 4 ಬಾರಿ ಸಂಸದರಾಗಿ ಆಯ್ಕೆ ಮಾಡಿದ್ದಾರೆ. ಈ ಬಾರಿ ಸಿದ್ದೇಶ್ವರ ಅವರ ಬದಲಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಲೋಕ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ತಿಳಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣ ಮತ್ತು ತ್ಯಾವಣಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳಲಗೆರೆ, ಕೋಟೆಹಾಳು, ಚಿರಡೋಣಿ, ಕಣಿವೆಬಿಳಚಿ, ಬಸವಾಪಟ್ಟಣ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮತ್ತೊಂದು ಹೆಸರೇ ಮೋದಿ ಜೀ, ದಾವಣಗೆರೆ ಅಭಿವೃದ್ಧಿಗೆ ಇನ್ನೊಂದು ಹೆಸರೇ ಜಿಎಂಎಸ್. ಅಂದರೆ ಜಿ.ಎಂ.ಸಿದ್ದೇಶ್ವರ. ಕಾಂಗ್ರೆಸ್ ಅಭ್ಯರ್ಥಿಗೆ  ಇಷ್ಟು ವರ್ಷ ಗ್ರಾಮೀಣ ಭಾಗದಲ್ಲಿ ತಮ್ಮ ಪತಿ, ಮಾವನವರು ಮಾಡಿರುವ ಕೆಲಸ ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಾವು ಮೋದಿ ಜೀ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಳ್ಳುತ್ತಿದ್ದೇವೆ. ನಮ್ಮ ಮನೆಯವರಾದ ಜಿ.ಎಂ.ಸಿದ್ದೇಶ್ವರ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಂಡು ಮತ ಕೇಳುತ್ತಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಜಿಲ್ಲೆಗೆ 1071 ಕೋಟಿ ಅನುದಾನ, ಇಎಸ್ಐ ಆಸ್ಪತ್ರೆ ಮೇಲ್ದರ್ಜೆಗೆ, 12ಕೋಟಿ, ಅಮೃತ್ ಸರೋವರ್ ಯೋಜನೆಗೆ 7.35 ಕೋಟಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಕೋಟ್ಯಂತರ ರೂಪಾಯಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದು, ಜಿ.ಎಂ.ಸಿದ್ದೇಶ್ವರ ಅವರು. ತ್ಯಾವಣಗಿ, ಬಸವಾಪಟ್ಟಣ ಪಂಚಾಯಿತಿ ವ್ಯಾಪ್ತಿಗೆ 2.75 ಕೋಟಿ ರೂಪಾಯಿ ಅನುದಾನ ತಂದು ರೈತ ಸಂಪರ್ಕ ಕೇಂದ್ರ ಹಾಗೂ ಬೀಜೋತ್ಪಾದನಾ ಕೇಂದ್ರದ ಬಲವರ್ಧನೆ ಮಾಡಿದ್ದು ಜಿ.ಎಂ.ಸಿದ್ದೇಶ್ವರ ಅವರು ಎಂಬುದನ್ನು ನೀವು ಮರೆಯಬಾರದು ಎಂದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ, ತ್ಯಾವಣಗಿ, ಬಸವಾಪಟ್ಟಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜನ್ ಅವರ ಕೊಡುಗೆ ಏನು ಎಂಬುದನ್ನು ನೀವೇ ಯೋಚನೆ ಮಾಡಿ. ನೀವು ಕಾಂಗ್ರೆಸ್‌ಗೆ ಮತ ಹಾಕಿದರೆ ನಿಮ್ಮ ಊರು, ಕ್ಷೇತ್ರ ಅಭಿವೃದ್ಧಿ ಶೂನ್ಯವಾಗುತ್ತೆ ಎಂದರು.

ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ದೇಶ ಸುರಕ್ಷತೆಯಿಂದ ಇರಬೇಕು ಅಂದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ದಾವಣಗೆರೆ ಲೋಕಸಭಾ ಕ್ಷೇತ್ರ ಅಭಿವೃದ್ಧಿಯಾಗಬೇಕು ಅಂದರೆ ಗಾಯತ್ರಿ ಸಿದ್ದೇಶ್ವರ ಅವರು ಸಂಸದರಾಗಬೇಕು ಎಂದರು.

ಮಾಜಿ ಶಾಸಕ ಬಸವರಾಜ್ ನಾಯ್ಕ್ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದ ಲಂಬಾಣಿ ಸಮುದಾಯದ ಪ್ರತಿಯೊಬ್ಬರೂ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರ ನಿಲ್ಲಬೇಕು.  ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ, ದೆಹಲಿಗೆ ಕಳುಹಿಸಬೇಕು ಎಂದರು ಕರೆ ನೀಡಿದರು.

ಸಂಗಮೇಶ್ ದ್ರಾಕ್ಷಾಯಿಣಿ ನಿರಾಣಿ, ಪ್ರೇಮ, ಮಾಗನೂರು ಪ್ರಭಣ್ಣ, ಅಣಬೇರು ಜೀವನಮೂರ್ತಿ, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಜಿ.ಎಸ್.ಶ್ಯಾಮ್, ಮಂಡಲದ ಅಧ್ಯಕ್ಷ ದೇವೇಂದ್ರಪ್ಪ, ಹನುಮಂತನಾಯ್ಕ,  ಮಂಜಾನಾಯ್ಕ್, ಹನುಮಂತಪ್ಪ, ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.

error: Content is protected !!