ದಾವಣಗೆರೆ, ಏ.29- ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವಂತೆ ಚಿತ್ರದುರ್ಗ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ಬಕ್ಕೇಶ್ ಕರೆ ನೀಡಿದರು.
ತ್ಯಾವಣಿಗಿ, ಹೊಸಳ್ಳಿ, ಕಣಿವೆ ಬಿಳಚಿ, ಚಿರಡೋಣಿ, ನಲ್ಕುದುರೆ, ವೆಂಕಟೇಶ್ವರ ಕ್ಯಾಂಪ್, ಕಬ್ಬಳ, ಕಾಶೀಪುರ ಗ್ರಾಮಗಳಲ್ಲಿ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ಮತ ಯಾಚಿಸಿ, ಮತದಾರರನ್ನುದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಇನ್ನಷ್ಟು ಅಭಿವೃದ್ಧಿಗೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಲೋಕಸಭೆಗೆ ಕಳುಹಿಸಬೇಕೆಂದರು.
ಇಡೀ ದೇಶಕ್ಕೆ ಮಾದರಿ ಆಗುವಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುವಂತಹ ಜಾಣತನವನ್ನು ಪ್ರಭಾ ಮಲ್ಲಿಕಾರ್ಜುನ್ ಅವರು ಹೊಂದಿದ್ದು, ದಾವಣಗೆರೆ ಕ್ಷೇತ್ರದ ಮತದಾರರ ಹಿತವನ್ನು ಕಾಪಾಡುವರು ಎಂದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ತರುವ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಬಂದ ತಕ್ಷಣ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ದಾವಣಗೆರೆ ಲೋಕಸಭಾ ಕ್ಷೇತ್ರವೊಂದಕ್ಕೆ ಮಾರ್ಚ್ ಅಂತ್ಯಕ್ಕೆ ಸುಮಾರು ಒಂದು ಸಾವಿರದ ನೂರಾ ಹದಿನೇಳು ಕೋಟಿಯಷ್ಟು ಹಣವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದರು.
ಇನ್ನು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಪಂಚ ನ್ಯಾಯ ಪಚ್ಚೀಸ್ ಗ್ಯಾರೆಂಟಿ’ ಭರವಸೆಗಳನ್ನು ನೀಡಲಾಗಿದ್ದು, ಯುವ ನ್ಯಾಯದಡಿ ಯುವಕರಿಗೆ ಉದ್ಯೋಗ, ಮಹಿಳಾ ನ್ಯಾಯದಡಿ ಪ್ರತಿ ಮಹಿಳೆಗೆ 1 ಲಕ್ಷ ರೂ., ರೈತ ನ್ಯಾಯದಡಿ ಸ್ವಾಮಿನಾಥನ್ ಆಯೋಗವನ್ನು ಜಾರಿಗೊಳಿಸುವುದು, ನರೇಗಾ ಕೂಲಿ ಹಣವನ್ನು ರೂ. 400 ಕ್ಕೆ ಹೆಚ್ಚಿಸುವುದೂ ಸೇರಿದಂತೆ ಹಲವು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದು, ಅದರಂತೆ ನಾವುಗಳು ಜಾರಿಗೆ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಮೇಕಾ ಮುರುಳಿಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಜಬೀವುಲ್ಲಾ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೋವಿಂದಸ್ವಾಮಿ, ಲೋಹಿತ್, ನಂದಿಗಾವಿ ರಾಜಣ್ಣ, ಬಾಪೂಜಿ ಬ್ಯಾಂಕ್ ಡಿ.ವಿ. ರವೀಂದ್ರ, ಸತೀಶ್ ಪಾಟೀಲ್, ಕೋಗಲೂರು ಶಿವಣ್ಣ, ಮಾರನಿ ಮುರುಳಿಕೃಷ್ಣ, ಕಣಿವೆ ಬಿಳಚಿ ಡಿ.ಮಂಜಣ್ಣ, ವೆಂಕಟೇಶಪುರ ವೈಟ್ಲ ಮೋಹನ್, ಶಿವನಾರಾಯಣ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.