ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್
ಹೊನ್ನಾಳಿ, ಏ.28- ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲಿಯೂ ಬಿಜೆಪಿ – ಕಾಂಗ್ರೆಸ್ ಅಭ್ಯರ್ಥಿಗಳು ಬೇಡ. ಇಬ್ಬರ ಜಗಳದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ಲಿಸಲು ಶ್ರಮಿಸೋಣ ಎಂಬ ಸಂಕಲ್ಪವನ್ನು ಜನರು ಮಾಡಿದ್ದಾರೆ. ನಾನು ಹೋದ ಕಡೆಗಳಲ್ಲಿ ಅದ್ಭುತ ಸ್ಪಂದನೆ ಸಿಗುತ್ತಿದೆ. ಪ್ರತಿಯೊಬ್ಬ ಸ್ವಾಭಿಮಾನಿಯೂ ಬದಲಾವಣೆ ಬಯಸುತ್ತಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿ ಸೇರಿದಂತೆ, ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ನಾನು ನಿಸ್ವಾರ್ಥಿ. ಜನರ ಸೇವೆ ಮಾಡಲು ಬಂದಿರುವವನು. ಚುನಾವಣೆಯಲ್ಲಿ ಗೆಲ್ಲಲಿ, ಸೋಲಲಿ. ಇದೇ ರೀತಿ ನಿಮ್ಮ ಜೊತೆ ಇರುತ್ತೇನೆ. ಸಂಪರ್ಕದಲ್ಲಿರುತ್ತೇನೆ. ನನ್ನ ಕೈಯಲ್ಲಿ ಅಧಿಕಾರ ಕೊಟ್ಟರೆ ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಹೇಳಿದರು.
ಗ್ರಾಮೀಣ ಭಾಗದ ಶಾಲೆಗಳನ್ನು ನೋಡಿದರೆ ಬೇಸರವಾಗುತ್ತದೆ. ಮೂಲಭೂತ ಸೌಲಭ್ಯಗಳಿಲ್ಲ, ಗುಣಮಟ್ಟದ ಶಿಕ್ಷಣಕ್ಕೆ ನೆರವಿಲ್ಲ. ಇಲ್ಲಿನ ಶಾಲೆಯ ಮೇಲ್ಛಾವಣಿಯ ಹೆಂಚುಗಳು ಒಡೆದು ಹೋಗಿವೆ. ನನ್ನ ಮೊದಲ ಆದ್ಯತೆ ಶಿಕ್ಷಣ ಸುಧಾರಣೆಗೆ. ಶಿಕ್ಷಣದ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಕಾಲ ಮೇಲೆ ನಿಂತುಕೊಳ್ಳಬೇಕು. ಸಮಾಜದಲ್ಲಿ ಘನತೆ, ಗೌರವದಿಂದ ಬದುಕಲು ಜೀವನ ಕಟ್ಟಿಕೊಳ್ಳಬೇಕು ಎಂಬುದು ನನ್ನ ಕನಸು. 650 ಕಿಲೋಮೀಟರ್ ಪಾದಯಾತ್ರೆ ಮಾಡಿದಾಗ ಹಳ್ಳಿಗಳೆಂದರೆ ಯಾಕೆ ನಿರ್ಲಕ್ಷ್ಯಿಸಲಾಗುತ್ತಿದೆ ಎಂಬ ಪ್ರಶ್ನೆ ಕಾಡಿತ್ತು. ಬಸ್ ವ್ಯವಸ್ಥೆ ಇಲ್ಲ. ಇದನ್ನು ಮಾಡದಿರುವುದಕ್ಕೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯೇ ಕಾರಣ ಎಂದು ಆರೋಪಿಸಿದರು.
ಕಳೆದ 30 ವರ್ಷಗಳಿಂದಲೂ ಜನಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಮತ ಹಾಕಿಯೇ ಹಾಕುತ್ತೇವೆ ಎಂಬುದು ಗೊತ್ತು. ಚುನಾವಣೆ ಬಂದಾಗ ಹಬ್ಬದ ರೀತಿ ಮಾಡುತ್ತಾರೆ. ಯೋಗ್ಯವಲ್ಲದ ವ್ಯಕ್ತಿಗಳು ಟಿಕೆಟ್ ತೆಗೆದುಕೊಂಡು ಬಂದು ಪಕ್ಷದ ತತ್ವ, ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆ. ಮೂರು ದಶಕಗಳಿಂದ ಜನರನ್ನು ಶೋಷಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಸಿಗದಿದ್ದರೆ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟ. ಹಳ್ಳಿ ಮತ್ತು ನಗರ ಪ್ರದೇಶಗಳ ಜನರಿಗೂ ಒಳ್ಳೆಯ ಶಿಕ್ಷಣ ಸಿಗಬೇಕು. ಶ್ರೀಮಂತರ ಮಕ್ಕಳು ಡಾಕ್ಟರ್, ಎಂಜಿನಿಯರ್ ಸೇರಿದಂತೆ ಒಳ್ಳೆಯ ಕೆಲಸಕ್ಕೆ ಸೇರುತ್ತಾರೆ. ಬಡವರ ಮಕ್ಕಳು ಕೂಲಿ, ಆಟೋ ಡ್ರೈವರ್ ಸೇರಿದಂತೆ ಇತರೆ ಕೆಲಸ ಮಾಡಿಕೊಂಡು ಬದುಕಬೇಕಾಗುತ್ತದೆ. ಇಲ್ಲಿ ಬಡತನ ಎನ್ನೋದು ಮುಂದುವರೆಯುತ್ತಿದೆ. ಶಾಸಕರು, ಸಂಸದರು ಶಿಕ್ಷಣದ ಬಗ್ಗೆ ಕಾಳಜಿ ವಹಿಸಿಲ್ಲ ಎಂದರು.
ಈ ಬಾರಿ ಯುವ ನಾಯಕನನ್ನು ಬೆಳೆಸಬೇಕು ಎಂಬ ತೀರ್ಮಾನ ಮಾಡಿರುವ ಜನರ ನಿರ್ಧಾರಕ್ಕೆ ಚಿರಋಣಿಯಾಗಿರುತ್ತೇನೆ ಎಂದರು.