ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
ದಾವಣಗೆರೆ, ಏ. 23 – ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ಕುಟುಂಬಗಳಿಗೆ ತಿಂಗಳಿಗೆ 13-15 ಸಾವಿರ ರೂ. ಸಿಗಲಿದೆ. ಇದರಿಂದ ಆರ್ಥಿಕ ಬೆಳವಣಿಗೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ನಗರದ ರೇಣುಕ ಮಂದಿರದಲ್ಲಿ ಆಯೋಜಿಸಲಾಗಿದ್ದ ಹೆಚ್.ಎಸ್. ನಾಗರಾಜ್ ಮತ್ತು ಅಭಿಮಾನಿಗಳ ಕಾಂಗ್ರೆಸ್ ಸೇರ್ಪಡೆ ಹಾಗೂ ಲೋಕಸಭಾ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ತಿಂಗಳಿಗೆ 5-6 ಸಾವಿರ ರೂ. ದೊರೆಯಲಿದೆ. ಪ್ರತಿ ವರ್ಷಕ್ಕೆ ಬಡ ಕುಟುಂಬಗಳಿಗೆ 1 ಲಕ್ಷ ರೂ. ನೀಡುವು ದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಬಡ ಕುಟುಂಬಗಳಿಗೆ ತಿಂಗಳಿಗೆ ಒಟ್ಟು 13-15 ಸಾವಿರ ರೂ. ಸಿಗಲಿದೆ ಎಂದು ಸಚಿವರು ಹೇಳಿದರು.
ಬಡ ಕುಟುಂಬಗಳಿಗೆ ಹೆಚ್ಚಿನ ಹಣ ತಲುಪಿದರೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ. ಕುಟುಂಬದ ಬೇರೆ ಅಭಿವೃದ್ಧಿ ಕಾರ್ಯಗಳೂ ಸಾಧ್ಯವಾಗುತ್ತವೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿಯಾಗುತ್ತದೆ ಎಂದವರು ಹೇಳಿದರು.
ಪಕ್ಷಕ್ಕೆ ಸೇರಿರುವ ನಾಗರಾಜ್, ಹರಿಹರದ ಕಡೆ ಹೆಚ್ಚು ಗಮನ ಹರಿಸಬೇಕು. ಕಾಂಗ್ರೆಸ್ ನಾಯಕರಾದ ಎಸ್. ರಾಮಪ್ಪ, ವಾಗೀಶ ಸ್ವಾಮಿ ಹಾಗೂ ನಂದಿಗಾವಿ ಶ್ರೀನಿವಾಸ್ ಜೊತೆಗೂಡಿ ಸಂಘಟನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಚ್.ಎಸ್. ನಾಗರಾಜ್, ನಮ್ಮ ತಂದೆ ಹೆಚ್. ಶಿವಪ್ಪ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಕಟವರ್ತಿಗಳಾಗಿದ್ದರು. ಆದರೆ, ಜನತಾ ಬಜಾರ್ ಚುನಾವಣೆಯಲ್ಲಿ ನಮ್ಮ ಕಾರಣದಿಂದಾಗಿ ಅವರು ದೂರವಾದರು. ಈಗ ಕಾಂಗ್ರೆಸ್ಗೆ ಮರಳಿರುವುದು ಮತ್ತೆ ಮನೆಗೆ ಬಂದಂತಹ ಭಾವನೆ ತಂದಿದೆ ಎಂದರು.
ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಪ್ರೀತಿ ವಿಶ್ವಾಸ ದಿಂದ ನೋಡುವ ಮನೋಭಾವ ಇಲ್ಲ. ಕಾರ್ಯಕರ್ತರ ಬಗ್ಗೆ ಸೌಜನ್ಯವೂ ಇಲ್ಲ. ಮುಖಂಡರನ್ನು ಬಳಸಿಕೊಂಡು ಹೊರ ಹಾಕಲಾಗುತ್ತಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಎಸ್. ರಾಮಪ್ಪ ಮಾತನಾಡಿ, ದೇಶದಲ್ಲೀಗ ಕಾಂಗ್ರೆಸ್ ಪರ ವಾತಾವರಣ ಇದೆ. ಪ್ರಭಾ ಮಲ್ಲಿಕಾರ್ಜುನ್ ಅವರು ಸಂಸತ್ತಿಗೆ ತೆರಳಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ವಾಗೀಶ ಸ್ವಾಮಿ ಮಾತನಾಡಿ, ಗ್ಯಾರಂಟಿ ಯೋಜನೆಗಳು ಈಗ ಜನಪ್ರಿಯವಾಗಿವೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ಸಚಿವ ಮಲ್ಲಿಕಾರ್ಜುನ್ ಮೇಲಿನ ಭರವಸೆಯಿಂದ ಪಕ್ಷಕ್ಕೆ ಸೇರಿದ್ದೇವೆ ಎಂದರು.
ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಮಾತನಾಡಿ, ದಾವಣಗೆರೆ ನಗರ ಪಾಲಿಕೆಯ ಬಿಜೆಪಿಯ 6 ಹಾಗೂ ಜೆಡಿಎಸ್ನ 1 ಸದಸ್ಯರು ಕಾಂಗ್ರೆಸ್ಗೆ ಬೆಂಬಲಿಸುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಖ ನೋಡುವ ಬದಲು, ಅಭ್ಯರ್ಥಿಯನ್ನು ಪರಿಗಣಿಸಿ ಮತ ಚಲಾಯಿಸಬೇಕು ಎಂದರು.
ಕಾಂಗ್ರೆಸ್ ಸೇರಿದ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, ಪ್ರಭಾ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಜಿಲ್ಲೆಯಲ್ಲಿ ಎಲ್ಲೆಡೆ ಕಾಂಗ್ರೆಸ್ ಅಲೆ ಇದೆ ಎಂದು ಹೇಳಿದರು.
ಟಿ.ಜಿ. ರವಿಕುಮಾರ್ ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಹೀಗಾಗಿ ಆ ಪಕ್ಷದಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಕಾಂಗ್ರೆಸ್ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ವೇದಿಕೆಯ ಮೇಲೆ ಕಾಂಗ್ರೆಸ್ ಮುಖಂಡರಾದ ಡಿ.ಬಸವರಾಜ್, ಅರಸಿಕೆರೆ ಕೊಟ್ರೇಶ್, ಬಿ.ಹೆಚ್. ವೀರಭದ್ರಪ್ಪ, ಎಸ್.ಎಲ್.ಆನಂದಪ್ಪ, ಹೆಚ್.ಕೆ ಬಸವರಾಜ್, ಅನಿತಾ ಬಾಯಿ ಮಾಲತೇಶ್ ಜಾಧವ್, ರುದ್ರಮ್ಮ, ಎಸ್.ಕೆ.ಚಂದ್ರಶೇಖರ್, ತೆಲಗಿ ಈರಣ್ಣ, ಕೆಪಿಸಿಸಿ ಉಪಾಧ್ಯಕ್ಷ ಮುಜಾಮಿಲ್, ಬುತ್ತಿ ಹುಸೇನ್, ಕೋಳಿ ಇಬ್ರಾಹಿಂ, ಡೋಲಿ ಚಂದ್ರು, ವಕೀಲರಾದ ಪ್ರಕಾಶ್ ಪಾಟೀಲ್, ಜಯಕುಮಾರ್, ಈಶಣ್ಣ, ಮೋತಿ ರಾಜೇಂದ್ರ, ನೀಲಗಿರಿಯಪ್ಪ, ಮಟ್ಟಿಕಲ್ ಪ್ರತಾಪ್, ಫಜು, ಅಸ್ಗರ್, ಬಸವರಾಜ್, ಗಣೇಶ್, ಚಮನ್ ಸಾಬ್, ಚಂದ್ರಣ್ಣ, ನಾಗರಾಜ್, ರಾಜನಾಯ್ಕ್, ಹಾಲೇಶ್, ಅಣಜಿ ಚಂದ್ರಶೇಖರ್, ಉಮೇಶ್ ನಾಯಕ್, ಆಂಜನೇಯ ಗುರೂಜಿ, ಕೆ.ಪಿ. ಕಲ್ಲಿಂಗಪ್ಪ, ಬಾತಿ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.