ಹಳೇಪೇಟೆ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ

ಹಳೇಪೇಟೆ ವೀರಭದ್ರೇಶ್ವರ ಸ್ವಾಮಿ ಗುಗ್ಗುಳ

ಕೆಂಡ ತುಳಿದ ಸಚಿವ ಎಸ್ಸೆಸ್ಸೆಂ, ಪುತ್ರ, ಪುತ್ರಿ

ವಿಶೇಷ ಪೂಜೆ ಸಲ್ಲಿಸಿದ ಪ್ರಭಾ ಮಲ್ಲಿಕಾರ್ಜುನ್ 

ದಾವಣಗೆರೆ, ಏ.22- ಹಳೆಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಹಿನ್ನೆಲೆ ಯಲ್ಲಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಗುಗ್ಗುಳ ಹಾಗೂ ಅಗ್ನಿ ಕುಂಡ ನಡೆಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್   ಕೆಂಡ ತುಳಿದರು.

ಸಚಿವರೊಂದಿಗೆ ಪುತ್ರ ಸಮರ್ಥ್ ಹಾಗೂ ಪುತ್ರಿ ಶ್ರೇಷ್ಠ ಕೆಂಡ ತುಳಿದರು. ಈ ಸಂದರ್ಭದಲ್ಲಿ ಸಚಿವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜನರ ಒಲವು ಕಾಂಗ್ರೆಸ್ ಪರ ಇದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಬಡವರಿಗೆ, ಮಹಿಳೆಯರಿಗೆ ಅನುಕೂಲ ಆಗಿವೆ.  ಮಹಿಳೆಯರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವು ಕೆಲಸ ಮಾಡಿದ್ದೇವೆ,  ವೋಟ್ ಕೊಡಿ ಎಂದು  ಕೇಳುತ್ತಿದ್ದೇವೆ. ನಮ್ಮ ಯೋಜನೆಗಳಿಂದ ಆರ್ಥಿಕವಾಗಿ ಜನರು ಸುಧಾರಣೆಯಾಗುತ್ತಾರೆ ಎಂದರು.

ನಾವು ಯಾರನ್ನು ಆಪರೇಷನ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ. ಆ ಪಕ್ಷದಲ್ಲಿ ಗೌರವ ಇಲ್ಲದ ಕಾರಣಕ್ಕಾಗಿ ಬೇಸತ್ತು ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು.

ಬಿಜೆಪಿಯಲ್ಲಿ ಒಡಕಿದೆ. ಹಿರಿಯ ಮುಖಂಡರಿಗೂ ಅಭ್ಯರ್ಥಿ ಬಗ್ಗೆ ಅಸಮಾ ಧಾನವಿದೆ. ಈಗಾಗಲೇ ಯಡಿಯೂರಪ್ಪ ಬಂದು ರಾಜೀ ಸಂಧಾನ ಮಾಡಿ ಹೋಗಿದ್ದಾರೆ. ಜಾತಿಗೆ ಒಬ್ಬರಂತೆ ಮುಖಂಡರನ್ನು ಕರೆಸುತ್ತಿದ್ದಾರೆ ಎಂದು ಎಸ್ಸೆಸ್ಸೆಂ ಕುಟುಕಿದರು.

ಸಿದ್ದೇಶ್ವರ ಅವರು ಸಂಸದರಾಗಿ ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ. ಈಗ ಚುನಾವಣೆ ಸಮಯದಲ್ಲಿ ಮೋದಿ ಫೋಟೋ ಇಟ್ಟು ಕೊಂಡು ಮತ ಕೇಳುತ್ತಾರೆ. ಆದರೆ ವೈಯಕ್ತಿಕ ವಾಗಿ ಅವರದ್ದು ಶೂನ್ಯ ಅಭಿವೃದ್ಧಿ ಎಂದರು.

ಅವರ ಆಡಳಿತಾವಧಿಯಲ್ಲಿ ಜಿಲ್ಲೆಯಲ್ಲಿ ಮಂತ್ರಿಯಾಗಲೂ ಯಾರನ್ನೂ ಬಿಡಲಿಲ್ಲ. ಅವರು ದುಡ್ಡಿನ ಭ್ರಮೆಯಲ್ಲಿ ಗೆಲ್ಲುತ್ತೇವೆ ಎಂದು ಕೊಂಡಿದ್ದಾರೆ. ಆದರೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

error: Content is protected !!