ಕಾಂಗ್ರೆಸ್ನಿಂದ ಬೃಹತ್ ರೋಡ್ ಶೋ
ದಾವಣಗೆರೆ, ಏ. 18 – ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ ಮತ ಯಾಚಿಸಿದರು.
ಪ್ರಭಾ ಅವರ ಪತಿ – ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಮಾವ – ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ರೋಡ್ ಶೋನಲ್ಲಿ ಜೊತೆಯಾದರು.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಿಂದ ಆರಂಭವಾದ ರೋಡ್ ಶೋಗೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಚಾಲನೆ ನೀಡಿದರು. ಅವರು ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಪೂಜೆ ಹಾಗೂ ದರ್ಗಾದಲ್ಲಿ ನಮನ ಸಲ್ಲಿಸಿದರು.
ಮತ್ತೊಂದು ರೋಡ್ ಶೋಗೆ ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಬಳಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಚಾಲನೆ ನೀಡಿದರು.
ಶಿವಶಂಕರಪ್ಪನವರ ನೇತೃತ್ವದಲ್ಲಿ ನಡೆದ ರೋಡ್ ಶೋ ಹಗೇದಿಬ್ಬ ಸರ್ಕಲ್, ಕಾಳಿಕಾದೇವಿ ರಸ್ತೆ, ಚೌಕಿಪೇಟೆ ರಸ್ತೆ, ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ಸರ್ಕಲ್, ಮಾರ್ಕೆಟ್ ರಸ್ತೆ, ಮಂಡಿಪೇಟೆ, ಲಕ್ಷ್ಮಿ ಸರ್ಕಲ್ ಮೂಲಕ ಮಹಾನಗರ ಪಾಲಿಕೆ ಮುಂಭಾಗಕ್ಕೆ ಆಗಮಿಸಿತು.
ಮಲ್ಲಿಕಾರ್ಜುನ್ ಚಾಲನೆ ನೀಡಿದ ರೋಡ್ ಶೋ ಹೆಚ್.ಕೆ.ಆರ್. ಸರ್ಕಲ್, ಡಾಂಗೆ ಪಾರ್ಕ್, ಶಿವಪ್ಪಯ್ಯ ಸರ್ಕಲ್, ತ್ರಿಶೂಲ್ ಟಾಕೀಸ್ ಮೂಲಕ ಪಿ.ಬಿ. ರಸ್ತೆಗೆ ಆಗಮಿಸಿತು.
ಈ ಎರಡೂ ರೋಡ್ ಶೋಗಳು ಪಿ.ಬಿ. ರಸ್ತೆಯಲ್ಲಿ ಸಂಗಮಿಸಿದವು. ನಂತರ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಬೃಹತ್ ರೋಡ್ ಶೋ ನಡೆಯಿತು. ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ, ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದರು.
ನಿಟುವಳ್ಳಿ ಸರ್ಕಲ್ನಲ್ಲಿ ರೋಡ್ ಶೋ ನಡುವೆ ಕ್ರೇನ್ ಮೂಲಕ ಮಲ್ಲಿಕಾರ್ಜುನ್ ದಂಪತಿಗೆ ಬೃಹತ್ ಮಾಲಾರ್ಪಣೆ ಮಾಡಲಾಯಿತು. ರೋಡ್ ಶೋ ನಡುವೆಯೇ, ಮಲ್ಲಿಕಾರ್ಜುನ್ ಹಾಗೂ ಪ್ರಭಾ ಅವರು ಬೆಣ್ಣೆ ದೋಸೆ ಸವಿದರು. ಕಾರ್ಯಕರ್ತರು ವಿವಿಧ ಪೇಟಾ, ಕಂಬಳಿ ಇತ್ಯಾದಿಗಳನ್ನು ಮಲ್ಲಿಕಾರ್ಜುನ್ ದಂಪತಿಗೆ ನೀಡಿ ಸಂಭ್ರಮಿಸಿದರು. ರೋಡ್ ಶೋದಲ್ಲಿ ಕಾಲ್ನಡಿಗೆ, ಬೈಕ್, ಕಾರುಗಳಷ್ಟೇ ಅಲ್ಲದೇ ಟ್ರ್ಯಾಕ್ಟರ್ಗಳಲ್ಲೂ ಜನರು ಭಾಗಿಯಾಗಿದ್ದರು.
ರೋಡ್ ಶೋಗೂ ಮುನ್ನ ಮಲ್ಲಿಕಾರ್ಜುನ್ ಹಾಗೂ ಪ್ರಭಾ ಅವರು ಶಾಮನೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಮತ್ತು ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಭಾ ಮಲ್ಲಿಕಾರ್ಜುನ್, ಜನರ ತೀರ್ಮಾನವನ್ನು ಬಹಿರಂಗ ರೋಡ್ ಶೋ ಮೂಲಕ ತೋರಿಸಿದ್ದೇವೆ. ನಮ್ಮ ಕಾರ್ಯಕರ್ತರು ಹುಮ್ಮಸ್ಸಿನಿಂದ ಜನರ ಬಳಿ ತೆರಳಿ ಮತಯಾಚನೆ ಮಾಡುತ್ತಿದ್ದಾರೆ ಎಂದರು.
ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಪರ ಅಲೆ ಇದೆ ಎಂದರು.
ಅನಿವಾರ್ಯ ಕಾರಣಗಳಿಂದಾಗಿ ಹೈಕಮಾಂಡ್ ನಾಯಕರು ಇಂದು ಗೈರಾಗಿದ್ದಾರೆ. ನಮ್ಮ ಕ್ಷೇತ್ರದ ಚುನಾವಣೆ ಎರಡನೇ ಹಂತದಲ್ಲಿ ನಡೆಯುತ್ತಿರುವ ಕಾರಣ, ತಡವಾಗಿ ಇಲ್ಲಿಗೆ ಬರಲಿದ್ದಾರೆ ಎಂದೂ ಅವರು ಹೇಳಿದರು. ರೋಡ್ ಶೋ ನಂತರ ಪ್ರಭಾ ಅವರು ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ, ಗುರುವಾರ ನಾಮಪತ್ರ ಸಲ್ಲಿಕೆಯಾಗಲಿಲ್ಲ. ಪ್ರಭಾ ಅವರು ಈಗಾಗಲೇ ನಾಲ್ಕು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.
ಶಾಸಕರಾದ ಡಿ.ಜಿ.ಶಾಂತನಗೌಡ, ಶಿವಗಂಗಾ ಬಸವರಾಜ್, ಬಿ. ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ ಹಾಗೂ ಲತಾ ಮಲ್ಲಿಕಾರ್ಜುನ್ ಅವರು ರೋಡ್ ಶೋನಲ್ಲಿ ಸಾಥ್ ನೀಡಿದರು.
ರೋಡ್ ಶೋನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಮಾಜಿ ಶಾಸಕರಾದ ಎಸ್.ರಾಮಪ್ಪ, ವಡ್ನಾಳ್ ರಾಜಣ್ಣ, ಟಿ. ಗುರುಸಿದ್ದನಗೌಡ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಎಸ್. ಬಕ್ಕೇಶ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಅರಸೀಕೆರೆ ಕೊಟ್ರೇಶ್, ಡಿ. ಬಸವರಾಜ್, ವಾಗೀಶ್ ಸ್ವಾಮಿ, ಡಾ. ಟಿ.ಜಿ.ರವಿಕುಮಾರ್, ಸಮರ್ಥ ಶಾಮನೂರು, ಜಿಲ್ಲಾ ಕಾಂಗ್ರೆಸ್ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್. ಪರಮೇಶ್ ಸೇರಿದಂತೆ, ಕಾಂಗ್ರೆಸ್ನ ವಿವಿಧ ವಿಭಾಗಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.