ಜಗಳೂರು, ಏ.24- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಪರ ಅಭಿಮಾನಿಗಳು, ಹಿತೈಷಿಗಳು ಜಗಳೂರಿನಲ್ಲಿ ಏರ್ಪಡಿಸಿದ್ದ ಜಾಥಾಕ್ಕೆ ಭಾರೀ ಬೆಂಬಲ ವ್ಯಕ್ತವಾಯಿತು.
ಪಟ್ಟಣದ ಈಶ್ವರ ದೇವಸ್ಥಾನದಿಂದ ಮಧ್ಯಾಹ್ನ ಜಾಥಾ ಆರಂಭಗೊಂಡು, ಸರ್ಕಾರಿ ಆಸ್ಪತ್ರೆ ಹಾಗೂ ಮಲ್ಲೇನಹಳ್ಳಿ ವೃತ್ತದ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ವೃತ್ತಕ್ಕೆ ತಲುಪಿತು. ಅಲ್ಲಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಜಿ. ಬಿ. ವಿನಯ್ ಕುಮಾರ್ ಮಾಲಾ ರ್ಪಣೆ ಮಾಡಿದರು. ಆ ಬಳಿಕ ತರಳಬಾಳು ಕಲ್ಯಾಣ ಮಂಟಪದ ಬಳಿ ಜಾಥಾ ಕೊನೆಗೊಂಡಿತು.
ತರಳಬಾಳು ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಮತ್ತು ಅಭಿಮಾನಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿನಯ್ ಕುಮಾರ್ ಅವರು, ಅಂಬೇಡ್ಕರ್ ಆಶಯಗಳು ಈಡೇರದೇ ಪ್ರಜಾ ಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಪ್ರಜಾಪ್ರಭುತ್ವ ಉಳಿಸುವ ಕಾಳಜಿ ನನ್ನದು ಎಂದರು.
ಡಾ. ಬಿ.ಆರ್ .ಅಂಬೇಡ್ಕರ್ ರವರು ಕಂಡ ಕನಸು ನನಸು ಮಾಡಲು ಪ್ರಯತ್ನಿಸುವೆ. ಅಂಬೇಡ್ಕರ್ ಅವರು ಸಾಮಾನ್ಯನಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರ ಆಶಯದಂತೆ ನಾನು ಕೂಡ ರಾಜಕೀಯ ಕನಸನ್ನು ಕಂಡು ಜನಸೇವೆ ಮಾಡಲು ಮುಂದಾಗಿದ್ದೇನೆ. ನನ್ನಂಥವರನ್ನು ರಾಜಕೀಯವಾಗಿ ಬೆಳೆಯಲು ರಾಜಪ್ರಭುತ್ವದ ವ್ಯವಸ್ಥೆ ಕಟ್ಟಿ ಹಾಕುತ್ತಿದೆ. ನನಗೆ ದೊಡ್ಡ ಮುಖಂಡರುಗಳು ದೊಡ್ಡ ಅವಕಾಶಗಳನ್ನು ಕೊಟ್ಟರೂ ನಾನು ಅದನ್ನು ತಿರಸ್ಕರಿಸಿ ಸಾಮಾನ್ಯ ಜನರು ಕೊಟ್ಟ ಆಶಯ, ಆಶ್ವಾಸನೆಗೆ ಬದ್ಧನಾಗಿ ಸೇವೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಆದ್ದರಿಂದ ಈ ಬಾರಿ ಪಕ್ಷೇತರ ಅಭ್ಯರ್ಥಿಯಾದ ನನ್ನ ಗ್ಯಾಸ್ ಸಿಲಿಂಡರ್ ಗುರುತಿಗೆ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿ ಹಿಡಿಯಬೇಕೆಂದು ಮನವಿ ಮಾಡಿದರು.
ಜಗಳೂರು ತಾಲ್ಲೂಕಿನಲ್ಲಿ ಚೆನ್ನಯ್ಯ ಒಡೆಯರ್, ಇಮಾಮ್ ಸಾಬ್ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಹೆಸರಿನ ಒಂದು ವೃತ್ತ ಕೂಡ ಇಲ್ಲ. ವಾಲ್ಮೀಕಿ ನಾಯಕ ಸಮಾಜದ ವೃತ್ತವೂ ಇಲ್ಲ. ನಮ್ಮದೇ ಗುರುತು ಅಹಿಂದ ಜನ ಧ್ವನಿ ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರಜ್ಞಾವಂತ ಯುವಕರು ಕನಸು ಕಾಣುತ್ತಿದ್ದರೆ ವ್ಯವಸ್ಥೆ ತಪ್ಪು ಎಂದು ಪ್ರತಿಬಿಂಬಿಸುತ್ತದೆ. ಅವರು ದೈತ್ಯವಾಗಿ ಕಟ್ಟಿರುವ ಸಾಮ್ರಾಜ್ಯಕ್ಕೆ ಧಕ್ಕೆ ಆಗುತ್ತಿದೆ ಎಂಬ ಆತಂಕ ಅವರಲ್ಲಿದೆ. ಭರವಸೆ ಈಡೇರಿಸದಿದ್ದರೂ ಮತ್ತೆ ಭರವಸೆ ಕೊಡುತ್ತಾರೆ. ಎಂಪಿ ಟಿಕೆಟ್ ತಂದಿರುವುದು ಸೇವೆ ಮಾಡಲು ಅಲ್ಲ, ತಮ್ಮ ಅಧಿಕಾರ ಉಳಿಸಿಕೊಳ್ಳಲು ಎಂದು ಹೇಳಿದರು.
ಯಾದವ ಸಮಾಜದ ಮುಖಂಡ ಕೃಷ್ಣಪ್ಪ ಮಾತನಾಡಿ, ಸಿಲಿಂಡರ್ ಸ್ಫೋಟ ಆದರೆ ಜನರು ಚೆಲ್ಲಾಪಲ್ಲಿ ಆಗುತ್ತಾರೆ. ವಿನಯ್ ಕುಮಾರ್ ಸಿಲಿಂ ಡರ್ ಸ್ಫೋಟವಾದರೆ ಬಿಜೆಪಿ, ಕಾಂಗ್ರೆಸ್ ಧೂಳೀ ಪಟವಾಗಲಿದೆ. ವಿನಯ್ ಕುಮಾರ್ ಅವರನ್ನು ಸಂಸತ್ ಭವನಕ್ಕೆ ಕಳುಹಿಸುವವರೆಗೂ ಹೋರಾಟ ಮಾಡಬೇಕು. ನೀವು ವಿನಯ್ ಕುಮಾರ್ ಅವರಿಗೆ ಹಾಕುವ ಮತಗಳ ಸ್ಫೋಟಕ್ಕೆ ಬಿಜೆಪಿ, ಕಾಂಗ್ರೆಸ್ ಕೊಚ್ಚಿ ಹೋಗುವಂತಾಗಬೇಕು ಎಂದರು.
ವಿವಿಧ ಸಮಾಜಗಳ ಮುಖಂಡರಾದ
ಪ್ರಸನ್ನ ಕುಮಾರ್, ನಜೀರ್ ಅಹ್ಮದ್, ಪ್ರಕಾಶ್, ಜಯಣ್ಣ, ಕುಮಾರ್, ಮಾಲಿಂಗಪ್ಪ,
ಹೇಮರೆಡ್ಡಿ, ತಿಪ್ಪೇಸ್ವಾಮಿ, ಭೂಪತಿ, ಶ್ರೀನಿವಾಸ್, ನೀಲಪ್ಪ, ರಂಗನಾಥ್, ಮಹಾಂತೇಶ್, ಹನುಮಂತಪ್ಪ, ಬಸವಂತಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ರವಿ ಯು. ಸಿ. ಸ್ವಾಗತಿಸಿದರು.