ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ನಾಮಪತ್ರ ಸಲ್ಲಿಕೆ
ದಾವಣಗೆರೆ, ಏ. 17 – ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಯಾವ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ. ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ.
ಎರಡನೇ ಸೆಟ್ ನಾಮಪತ್ರ ಸಲ್ಲಿಕೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಪಾರ ಜನಬೆಂಬಲಿಗರು ಸ್ವಯಂ ಪ್ರೇರಿತವಾಗಿ ಬಿಸಿಲಿನ ನಡುವೆ ಮೆರವಣಿಗೆ ಯಲ್ಲಿ ಬಂದು ಬೆಂಬಲಿಸಿದ್ದಾರೆ ಎಂದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಬ್ಬರೂ ಉತ್ಸಾಹದಿಂದ ಬೆಂಬಲಿಸಿದ್ದಾರೆ. ದಾವಣಗೆರೆ ಜನತೆ ಈ ಬಾರಿ ಬದಲಾವಣೆ ಬಯಸುತ್ತಿದ್ದಾರೆ. ನಾನು ಯಾರನ್ನೇ ಆಗಲಿ ಸೋಲಿಸಬೇಕೆಂಬ ಉದ್ದೇಶದಿಂದ ಸ್ಪರ್ಧಿಸುತ್ತಿಲ್ಲ. ಗೆಲ್ಲುವ ಸಲುವಾಗಿ ಸ್ಪರ್ಧೆಯಲ್ಲಿದ್ದೇನೆ ಎಂದವರು ಹೇಳಿದರು.
ಬಿಜೆಪಿಯ ಯಾರನ್ನೂ ನಾನು ಭೇಟಿ ಮಾಡಿಲ್ಲ. ಕಾಂಗ್ರೆಸ್ನವರು ಸಂಧಾನಕ್ಕೆ ಬಂ ದಿದ್ದು ನಿಜ. ಆದರೆ, ಸಂಧಾನ ವಿಫಲವಾಗಿ ಪಕ್ಷೇತರನಾಗಿ ಕಣಕ್ಕಿಳಿದಿದ್ದೇನೆ. ಸೋಲಿನ ಭಯದಿಂದ ಕೆಲವರು ನಾನು ಬಿಜೆಪಿ ಸಂಪರ್ಕದಲ್ಲಿದ್ದೇನೆ ಎಂದು ಅಪ ಪ್ರಚಾರ ಮಾಡುತ್ತಿರಬಹುದು ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಲ ಕಪ್ ನಮ್ದೇ
ಪಕ್ಷೇತರ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸುವಾಗ ಇಷ್ಟೊಂದು ಜನ ಎಂದೂ ಬಂದಿರಲಿಲ್ಲ. ನನ್ನ ದೃಷ್ಟಿ ಕೋನ ನೋಡಿ ಜನ ಆಗಮಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ನನ್ನ ಚುನಾವಣಾ ಚಿಹ್ನೆ ನಿರ್ಧಾರವಾಗಲು ಇನ್ನೂ ಸಮಯ ಇದೆ. ಜಿ.ಬಿ. ವಿನಯ್ ಕುಮಾರ್ ಎಂಬ ಹೆಸರೇ ಬ್ರಾಂಡ್ ಆಗಿದೆ. ಚಿಹ್ನೆ ಯಾವುದು ಎಂಬುದು ಮುಖ್ಯ ಅಲ್ಲ. ಚಿಹ್ನೆ ಯಾವುದೇ ಸಿಕ್ಕರೂ ಗೆಲುವು ನನ್ನದೇ, ಈ ಸಲ ಕಪ್ ನಮ್ದೇ ಎಂದವರು ಹೇಳಿದರು.
ಈಗಿರುವ ಬಿಜೆಪಿ ಸಂಸದರು ಗ್ರಾಮೀಣ ಭಾಗದ ನೂರಾರು ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಏನೂ ಕೆಲಸ ಮಾಡಿಲ್ಲ. ಕಾಂಗ್ರೆಸ್ನ ಶಾಮನೂರು ಕುಟುಂಬದವರೂ ಅಭಿವೃದ್ಧಿ ಮಾಡಿಲ್ಲ. ಶಾಲೆ – ಆಸ್ಪತ್ರೆಗಳು ದುಸ್ಥಿತಿಯಲ್ಲಿವೆ. ದಾವಣಗೆರೆಗೆ ಈಗ ಚೈತನ್ಯ, ರಾಜಕೀಯದಲ್ಲಿ ಹೊಸ ಶಕ್ತಿ ಬೇಕಿದೆ ಎಂದವರು ತಿಳಿಸಿದರು.
ಇಲ್ಲಿನ ರಾಜಕೀಯದಲ್ಲಿ ಉಳ್ಳವರೇ ಬೆಳೆಯುತ್ತಿದ್ದಾರೆ. ಶೇ.70-80ರಷ್ಟಿರುವ ಅಹಿಂದ ವರ್ಗದವರು ಹಾಗೂ ಮೇಲ್ಜಾತಿಯ ಬಡವರು ಅವಕಾಶ ವಂಚಿತರಾಗಿದ್ದಾರೆ ಎಂದು ವಿನಯ್ ಕುಮಾರ್ ಹೇಳಿದರು.
ಇದಕ್ಕೂ ಮುಂಚೆ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಒಂದು ಬಾರಿ ನನಗೆ ಅವಕಾಶ ಕೊಡಿ. ಸಂಸದರು ಹೇಗಿರಬೇಕು ಎಂಬುದನ್ನು ತೋರಿಸಿ ಕೊಡುತ್ತೇನೆ. ನಾನು ಸ್ವಾಭಿಮಾನದ ಮತ ಕೇಳುತ್ತಿದ್ದೇನೆ. ಪ್ರಜಾಪ್ರಭುತ್ವ ಉಳಿಸಲು ಈ ಹೋರಾಟ ಎಂದರು.