ಪ್ರಚಾರ ಕಾರ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
ಜಗಳೂರು, ಏ.14- ಜಗಳೂರು ನಂಜುಂಡಪ್ಪ ವರದಿ ಅನ್ವಯ ಅತೀ ಹಿಂದುಳಿದ ತಾಲೂಕು ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಬೇಕು. ಜನ ಲವಲವಿಕೆಯಿಂದ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಕ್ಷೇತ್ರವನ್ನು ಬರಪೀಡಿತ ಹಣೆ ಪಟ್ಟಿಯಿಂದ ಹೊರತರಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ತಿಳಿಸಿದರು.
ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಣಬಗಟ್ಟೆ, ಕಮ್ಮತ್ತಹಳ್ಳಿ ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಜಗಳೂರು ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಎಂಬ ಹಣೆ ಪಟ್ಟಿಯಿಂದ ಹೊರತರಲು ಪೂರಕವಾಗಿ ಕ್ಷೇತ್ರಕ್ಕೆ ವಿಶೇಷ ಯೋಜನೆಗಳನ್ನು ತರುವ ಉದ್ದೇಶ ನನಗಿದೆ. ಈ ಕುರಿತು ನಾನು ಹೆಚ್ಚಿನ ಕಾಳಜಿ ವಹಿಸುತ್ತೇನೆ ಎಂದರು.
ಜಗಳೂರು ವಿಧಾನಸಭಾ ಕ್ಷೇತ್ರ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಅತಿ ಹೆಚ್ಚಿನ ಅನುದಾನ ಬಳಸಿಕೊಂಡಿದೆ. ಹೀಗಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿಗಳು ಸುಧಾರಣೆ ಕಂಡಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೊಳಿಸಿರುವ ವಿಮಾ ಯೋಜನೆ ಗಳು ಜನರ ಜೀವನಮಟ್ಟ ಸುಧಾರಿಸಿವೆ. ಕ್ಷೇತ್ರದಲ್ಲಿ ಗಣನೀಯವಾಗಿ ಕುಸಿದಿರುವ ಅಂತರ್ಜಲಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ- ಕಟ್ಟೆಗಳನ್ನು ತುಂಬಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಇದನ್ನು ಮುಂದುವರೆಸಿಕೊಂಡು ಹೋಗುವ ಸಂಕಲ್ಪ ನನ್ನದಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆ ಸಹ ಕ್ಷೇತ್ರಕ್ಕೆ ಸಾಕಷ್ಟು ಅನುಕೂಲ ಆಗಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 5300 ಕೋಟಿ ಅನುದಾನ ನೀಡಿದೆ ಎಂದು ಹೇಳಿದರು.
ಕಳೆದ ಚುನಾವಣೆಗಳಲ್ಲಿ ಹರಪನಹಳ್ಳಿ ತಾಲ್ಲೂಕಿನ ಈ ಏಳು ಗ್ರಾಮ ಪಂಚಾಯತಿಗಳು ಬಿಜೆಪಿ ಗೆ ಹೆಚ್ಚಿನ ಮತ ನೀಡಿ ಆಶೀರ್ವಾದ ಮಾಡಿವೆ. ಈ ಬಾರಿಯೂ ಕೂಡ ಅತಿ ಹೆಚ್ಚಿನ ಮತಗಳನ್ನು ನನಗೆ ನೀಡುವುದರ ಮುಖಾಂತರ ಆಶೀರ್ವಾದ ಮಾಡಿ ಎಂದು ಮನವಿ ಮಾಡಿಕೊಂಡರು.
ಪ್ರತಿಯೊಬ್ಬ ಕಾರ್ಯಕರ್ತರೂ ಕೂಡ ನೀವೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಕೆಲಸ ಮಾಡಬೇಕು. ನೀವು ಹಾಕಿಸುವ ಒಂದೊಂದು ಮತ ಈ ದೇಶವನ್ನು ಎಲ್ಲ ದೃಷ್ಟಿಯಿಂದ ಬಲಪಡಿಸಲಿದೆ. ನಿಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳಿಸಲಿದೆ ಎಂದರು.
ನಾನು ಮಾತಿಗಿಂತ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ. ಸದಾ ನಿಮಗೆ ಸುಲಭವಾಗಿ ಸಿಗುವ ನನಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.
ಇದು ಜನರಿಗೆ ಸುಲಭವಾಗಿ ಸಿಗುವವರ ಮತ್ತು ಸುಲಭವಾಗಿ ಸಿಗದೇ ಇರುವವರ ನಡುವೆ ನಡೆಯುತ್ತಿರುವ ಚುನಾವಣೆ. ಯಾರನ್ನು ಆಯ್ಕೆ ಮಾಡಬೇಕು ಎನ್ನುವ ನಿರ್ಧಾರ ನಿಮ್ಮದಾಗಿದೆ. ಮತ ನೀಡುವ ಮುನ್ನ ಹತ್ತು ಬಾರಿ ಯೋಚಿಸಿ ಮತದಾನ ಮಾಡಿ ಎಂದರು.
ಇಂದು ಇಡೀ ವಿಶ್ವವೇ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿ ಆಗಬೇಕು ಎಂದು ಎದುರು ನೋಡುತ್ತಿದೆ. ಪ್ರತಿಯೊಬ್ಬ ಭಾರತೀಯನು ಮೂರನೇ ಬಾರಿಗೆ ಮೋದಿ ಅವರೇ ಪ್ರಧಾನಿ ಆಗಬೇಕು ಎಂಬ ಸಂಕಲ್ಪ ಮಾಡಿದ್ದಾರೆ. ನನಗೆ ನೀವು ಹೆಚ್ಚಿನ ಮತ ಕೊಟ್ಟು ಗೆಲ್ಲಿಸಿ, ಭಾರತದ ಅತ್ಯುತ್ತಮ ನಾಯಕರ ಆಯ್ಕೆಯಲ್ಲಿ ಪಾಲುದಾರರಾಗಬೇಕು. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನ ನೀವು ನಾನು ಆಯ್ಕೆ ಮಾಡಿದ ಪ್ರಧಾನಿ ಎಂದು ಹಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಹೇಳಿದರು.
ಜಗಳೂರು ಮಾಜಿ ಶಾಸಕ, ಬಿಜೆಪಿ ಮುಖಂಡ ಎಚ್.ಪಿ.ರಾಜೇಶ್ ಮಾತನಾಡಿ, ಇದು ಭಾರತದ ದಿಕ್ಸೂಚಿ ಚುನಾವಣೆ. ದೇಶದ ಹಿತದೃಷ್ಟಿಯಿಂದ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಬೇಕಿರುವ ಹೊಣೆಗಾರಿಕೆ ನಮ್ಮ ಮೇಲಿದೆ. ಗಾಯತ್ರಿ ಅವರು ಹೆಚ್ಚಿನ ಮತಗಳ ಅಂತರದಿಂದ ಗೆದ್ದು ದೆಹಲಿಗೆ ಹೋದರೆ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುತ್ತಾರೆ. ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿಸಬೇಕು ಎಂದರು ಮನವಿ ಮಾಡಿದರು.
ನಾನು, ಎಸ್.ವಿ. ರಾಮಚಂದ್ರ ಅವರು ಜಗಳೂರು ಶಾಸಕರಾಗಿದ್ದಾಗ ಸಾಕಷ್ಟು ಕೆಲಸ ಮಾಡಿದ್ದೀವಿ. 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತರುವಲ್ಲಿ ನನ್ನ ಮತ್ತು ರಾಮಚಂದ್ರಣ್ಣನ ಕೊಡುಗೆ ಇದೆ. ಆಗ ಕುಮಾರಸ್ವಾಮಿ ಅವರು ಹಾಗೂ ಬಿ.ಎಸ್.ಯಡಿಯೂರಪ್ಪ ಅವರು ಹಣ ಮಂಜೂರು ಮಾಡಿ ಯೋಜನೆಗೆ ಚಾಲನೆ ಕೊಟ್ಟಿದ್ದರು. ಅದರ ಪರಿಣಾಮ ಚಟ್ನಹಳ್ಳಿ ಗುಡ್ಡಕ್ಕೆ ನೀರು ಬರುತ್ತಿದೆ ಎಂದರು.
ಜಗಳೂರು ಕ್ಷೇತ್ರಕ್ಕೆ ಸಂಸದ ಸಿದ್ದೇಶ್ವರ ಮತ್ತು ಅವರ ತಂದೆ ದಿ. ಜಿ.ಮಲ್ಲಿಕಾರ್ಜುನಪ್ಪ ಅವರ ಕೊಡುಗೆ ಅಪಾರ. ಈ ಬಾರಿ ಸಿದ್ದೇಶ್ವರರ ಪತ್ನಿ ಗಾಯತ್ರಿ ಕಣದಲ್ಲಿದ್ದಾರೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾರ್ಯಕರ್ತರು, ಮತದಾರರು ನಮ್ಮ ಕೈ ಬಲಪಡಿಸಿದರೆ, ಗಾಯತ್ರಿ ಸಿದ್ದೇಶ್ವರ್ ಅವರು ಗೆದ್ದು, ಮೋದಿ ಅವರ ಕೈ ಬಲಪಡಿಸುತ್ತಾರೆ. ಮತದಾನಕ್ಕೆ ಇನ್ನು 22 ದಿನ ಬಾಕಿ ಇದ್ದು, ಕಾರ್ಯಕರ್ತರು, ಅಭಿಮಾನಿಗಳು ಕೇಂದ್ರ ಸರ್ಕಾರದ ಮತ್ತು ಸಿದ್ದೇಶ್ವರರ ಅಭಿವೃದ್ಧಿ ಕೆಲಸಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿನಂತೆ ನಮ್ಮ ಸಿದ್ದೇಶ್ವರ ಅವರು ತಲುಪದ, ನೋಡದ ಹಳ್ಳಿಗಳಲ್ಲಿಲ್ಲ. ಇಡೀ ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಸಿದ್ದೇಶಣ್ಣ ಸಂಚಾರ ಮಾಡಿ ಜನ ಸಂಪಾದನೆ ಮಾಡಿದ್ದಾರೆ. ಸಿದ್ದೇಶ್ವರ ಅವರು ನಾಲ್ಕು ಬಾರಿ, ಅವರ ತಂದೆ ಜಿ.ಮಲ್ಲಿಕಾರ್ಜುನಪ್ಪ ಅವರು 2 ಬಾರಿ ಒಟ್ಟು 6 ಬಾರಿ ಸಂಸದರಾಗಿದ್ದಾರೆ. ಈಗ 7ನೇ ಬಾರಿಗೆ ಗಾಯತ್ರಿ ಸಿದ್ದೇಶ್ವರ್ ಅವರು ಸಂಸದರಾಗುವುದು ನಿಶ್ಚಿತ. ಇಷ್ಟು ಬಾರಿ ಅವರ ಕುಟುಂಬ ಗೆಲ್ಲುವುದಕ್ಕೆ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ. ಭಾಜಪ ಕಾರ್ಯಕರ್ತರು, ಮೋದಿ ಅಭಿಮಾನಿಗಳು, ನಮ್ಮ ಹಿತೈಷಿಗಳು ಎಲ್ಲರೂ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಮುಖಂಡ ಕಲ್ಲೇರುದ್ರೇಶ್ ಮಾತನಾಡಿ, ಯಾರೋ ಇಬ್ಬರು ನನಗೆ ಮೋದಿ ಅವರಿಗೆ ಏಕೆ ವೋಟ್ ಹಾಕಬೇಕು. ಅವರನ್ನೇ ಏಕೆ ಪ್ರಧಾನಿ ಮಾಡಬೇಕು ಎಂದು ಕೇಳಿದರು. ನೀನು ಬದುಕಿರುವುದೇ ಸಾಕ್ಷಿ ಏಕೆ ಮೋದಿ ಅವರಿಗೆ ಮತ ಹಾಕಬೇಕು ಅಂತ ನಾನು ಹೇಳಿದೆ. ಕೋವಿಡ್ ಬಂದಾಗ ಇಟಲಿ ದೇಶ ವಿಲವಿಲ ಒದ್ದಾಡಿತ್ತು. ಆಗ ಹಿಂದೂರಾಷ್ಟ್ರ ಭಾರತದಲ್ಲಿ ಅಷ್ಟು ಜನ ಸತ್ರು, ಇಷ್ಟು ಜನ ಸತ್ರು ಅಂತೆಲ್ಲ ಮಾತಾಡುತ್ತಿದ್ದರು. ಹಿಂದೂ ರಾಷ್ಟ್ರ ಮುಳುಗುತ್ತೆ ಅಂತ ಇಟಲಿಯವರು ಮಾತಾಡುತ್ತಿದ್ದರು. ಆದರೆ, ಮೋದಿ ಅವರು ಎಲ್ಲರಿಗೂ ಸರಿಯಾದ ಸಮಯಕ್ಕೆ ಇಂಜೆಕ್ಷನ್ ಕೊಟ್ಟು ಬದುಕಿಸಿದರು. ಅವರು ನೀಡಿದ ಇಂಜೆಕ್ಷನ್ನಿಂದಲೇ ನೀನು ಬದುಕಿರುವುದು. ಅಷ್ಟೇ ಸಾಕಲ್ಲವೇ ನೀನು ಮೋದಿ ಅವರಿಗೆ ವೋಟ್ ಹಾಕೋಕೆ ಅಂತ ಹೇಳಿದೆ. ಮೋದಿ ಅವರಿಗೆ ಏಕೆ ವೋಟ್ ಹಾಕಬೇಕು ಅನ್ನೋದಕ್ಕೆ ಸಾಕಷ್ಟು ಉತ್ತರಗಳಿವೆ. ನೀವು ಅದನ್ನು ಪ್ರತಿಯೊಬ್ಬರಿಗೂ ತಿಳಿಸಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಬಳ್ಳಾರಿ ಸಂಸದ ಅರಸೀಕೆರೆ ದೇವೇಂದ್ರಪ್ಪ, ಅಣ್ಣಪ್ಪ, ಪಲ್ಲಾಗಟ್ಟಿ ಮಹೇಶ್, ಕೆಂಚಮ್ಮನಹಳ್ಳಿ ಮಂಜಣ್ಣ, ಬಿದಕೆರೆ ರವಿಕುಮಾರ್, ಅರಸೀಕೆರೆ ದ್ಯಾಮೇಗೌಡ್ರು, ಇಂದಿರಾ ರಾಮಚಂದ್ರಪ್ಪ, ಸೊಕ್ಕೆ ನಾಗರಾಜ್, ಮಂಜುನಾಥ್, ಫಣಿಯಾಪುರ ಲಿಂಗರಾಜ್, ಜಂಬನಗೌಡ ಹಾಗೂ ಜೆಡಿಎಸ್ ಮುಖಂಡರು, ಬಿಜೆಪಿ ಮಂಡಲದ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆಮ ಜಗಳೂರು ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.
ಎಲ್ಲೆಲ್ಲಿ ಪ್ರಚಾರ
ಜಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಟ್ನಹಳ್ಳಿ, ಉಚ್ಚಂಗಿದುರ್ಗ, ಅಣಜಿಗೆರೆ, ಪುಣಬಗಟ್ಟೆ, ಕಮ್ಮತ್ತಹಳ್ಳಿ, ತೌಡೂರು, ಅರಸೀಕೆರೆ, ಹೊಸಕೋಟೆ, ಬಸವನಕೋಟೆ, ಗುರುಸಿದ್ಧಾಪುರ, ಸೊಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತಬೇಟೆ ನಡೆಸಿದರು. ಉಚ್ಚಂಗಿದುರ್ಗದಲ್ಲಿ ಶಕ್ತಿ ದೇವತೆ ಉಚ್ಚಂಗೆಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಮತ ಬೇಟೆಗೆ ತೆರಳಿದ ಪ್ರತಿ ಗ್ರಾಮದಲ್ಲೂ ಗಾಯತ್ರಿ ಸಿದ್ದೇಶ್ವರ ಅವರಿಗೆ ಅದ್ಧೂರಿ ಸ್ವಾಗತ ದೊರೆಯಿತು.