ದಾವಣಗೆರೆ, ಏ.12- ಜಗಳೂರು ಮಾಜಿ ಶಾಸಕರು, ಹಿರಿಯ ಬಿಜೆಪಿ ಮುಖಂಡರು, ಆರ್.ಎಸ್.ಎಸ್.ಕಟ್ಟಾಳ್ ಟಿ.ಗುರುಸಿದ್ದನಗೌಡ ಅವರು ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಗುರುಸಿದ್ದನಗೌಡ ಅವರೊಂದಿಗೆ ಅವರ ಪುತ್ರ ಆರೈಕೆ ಆಸ್ಪತ್ರೆಯ ಡಾ|| ಟಿ.ಜಿ.ರವಿಕುಮಾರ್, ಬಿಜೆಪಿ ಮುಖಂಡರುಗಳಾದ ಟಿ.ಜಿ.ಅರ ವಿಂದ್, ಟಿ.ಜಿ.ಪ್ರವೀಣ್, ಕಕ್ಕರಗೊಳ್ಳದ ಕೆ.ಪಿ. ಕಲ್ಲಿಂಗಪ್ಪ, ನಾಗರಾಜ ಸ್ವಾಮಿ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಗೌರಿಪುರದ ಶಿವಣ್ಣ ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಜಗಳೂರು ಶಾಸಕ ದೇವೇಂದ್ರಪ್ಪ, ಎನ್.ಜಿ.ಪುಟ್ಟಸ್ವಾಮಿ, ಶಿವನಗೌಡ, ಕಮ್ಮತ್ತಹಳ್ಳಿ ಮಂಜುನಾಥ್ , ಶ್ಯಾಗಲೆ ಜಯಣ್ಣ ಮತ್ತಿತರರು ಉಪಸ್ಥಿತರಿದ್ದರು.
ತಮ್ಮನ್ನು ಭೇಟಿ ಮಾಡಿದ ಪತ್ರ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಅವರು, ಗುರುಸಿದ್ದನಗೌಡ್ರು ಮತ್ತು ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷ ಸೇರಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ. ಅವರ ಮಾರ್ಗ ದರ್ಶನದಲ್ಲಿ ನಾವುಗಳು ಮುನ್ನಡೆಯುತ್ತೇವೆ ಎಂದರು.
ಆರೈಕೆ ಆಸ್ಪತ್ರೆಯ ಡಾ.ಟಿ.ಜಿ. ರವಿಕುಮಾರ್ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಇರುವುದನ್ನು ನಾವು ಖಂಡಿಸುತ್ತಾ ಬಂದೆವು ಮತ್ತು ವಿದ್ಯಾವಂತರಿಗೆ ಅವಕಾಶ ನೀಡುವಂತೆ ಮನವಿ ಮಾಡಿದರೂ ಸಹ ಹೈಕಮಾಂಡ್ ನಮ್ಮ ಮನವಿಗೆ ಸ್ಪಂದಿಸದೇ ಇರುವುದು ಹಾಗೂ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಏಕಸ್ವಾಮ್ಯ ಆಡಳಿತದಿಂದ ಬೇಸತ್ತು ಪಕ್ಷವನ್ನು ತೊರೆದವು ಎಂದರು.
ದಾವಣಗೆರೆ ಜಿಲ್ಲೆಗೆ ಒಬ್ಬ ಸಮರ್ಥ ಆಡಳಿತ ಗಾರರಾದ ಮಲ್ಲಿಕಾರ್ಜುನಂತವರು ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದ್ದು, ಅವರ ಪತ್ನಿ ವಿದ್ಯಾವಂತ ರಿದ್ದು ಅವರು ನಮ್ಮನ್ನು ಪ್ರತಿನಿಧಿಸಿದರೆ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.