ಮೊದಲ ದಿನ ಐವರಿಂದ ನಾಮಪತ್ರ

ಮೊದಲ ದಿನ ಐವರಿಂದ ನಾಮಪತ್ರ

ಕಾಂಗ್ರೆಸ್‌ನಿಂದ ಪ್ರಭಾ ಮಲ್ಲಿಕಾರ್ಜುನ್, ಪಕ್ಷೇತರವಾಗಿ ವಿನಯ್‌ ಕುಮಾರ್

ದಾವಣಗೆರೆ, ಏ. 12 – ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಶುಕ್ರವಾರದಿಂದ ಆರಂಭವಾಗಿದ್ದು, ಮೊದಲ ದಿನದಂದು ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಪಕ್ಷೇತರವಾಗಿ ಜಿ.ಬಿ. ವಿನಯ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದಾರೆ.

ಮೊದಲ ದಿನದಂದು ಐವರು ಅಭ್ಯರ್ಥಿಗಳು 6 ನಾಮಪತ್ರ ಸಲ್ಲಿಸಿದ್ದಾರೆ. ಪ್ರಭಾ ಮಲ್ಲಿಕಾರ್ಜುನ್ ಅವರು ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರಲ್ಲದೇ, ಎಸ್.ಯು.ಸಿ.ಐ. ಪಕ್ಷದಿಂದ ಕೆ.ಎ. ತಿಪ್ಪೇಸ್ವಾಮಿ, ಉತ್ತಮ ಪ್ರಜಾಕೀಯ ಪಕ್ಷದಿಂದ ಈಶ್ವರ, ಕೆ.ಆರ್.ಎಸ್. ಪಕ್ಷದಿಂದ ಜಿ.ಪಿ. ರಾಘ ವೇಂದ್ರ ಅವರು  ನಾಮಪತ್ರ ಸಲ್ಲಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ವಿನಯ್‌ಕುಮಾರ್‌ ನಾಮಪತ್ರ ಸಲ್ಲಿಸುವ ವೇಳೆ ಶ್ರೀಮತಿ ಗೀತಾ ಮುರುಗೇಶ್‌, ಶರತ್‌ಕುಮಾರ್‌, ಸಿದ್ದಪ್ಪ, ಮಹಮ್ಮದ್‌ ಅಲ್ತಾಫ್‌ ಹುಸೇನ್‌ ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಭಾ ಅವರು ನಾಮಪತ್ರ ಸಲ್ಲಿಸುವ ವೇಳೆ ಅವರ ಪತಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜೊತೆಗಿದ್ದರು. ಶಾಸಕರಾದ ಲತಾ ಮಲ್ಲಿಕಾರ್ಜುನ್, ಕೆ.ಎಸ್. ಬಸವಂತಪ್ಪ, ಬಿ. ದೇವೇಂದ್ರಪ್ಪ ಹಾಗೂ ಕುರುಬ ಸಮಾಜದ ಗಣೇಶ್, ವಕೀಲರಾದ ಸೈಯದ್ ಸಲೀಂ ಜೊತೆಗಿದ್ದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್, ಗ್ರಾಮ ಪಂಚಾಯತಿ ಮಟ್ಟದಿಂದ ಎಲ್ಲ ಕಡೆ ಪ್ರಚಾರ ಮಾಡಲಾಗುತ್ತಿದೆ. ಈಗಾಗಲೇ ನಾಲ್ಕು ಕ್ಷೇತ್ರಗಳಲ್ಲಿ ಪ್ರಚಾರ ಮುಗಿದಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಜನರು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವಿನಯ್ ಕುಮಾರ್ ಸ್ಪರ್ಧೆ ‌ ಬಗ್ಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಆಸೆ ಇರುತ್ತದೆ. ಕ್ಷೇತ್ರದ ಜನರು ಆಯ್ಕೆ ಮಾಡುತ್ತಾರೆ ಎಂದರು.

ಸಚಿವ ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆ ಪ್ರತಿ ಮನೆಗೆ ತಲುಪಿವೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರತಿಯೊಂದು ಆಗು ಹೋಗು, ಸಮಸ್ಯೆಗಳಿಗೆ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಹೇಳಿದರು.

ಮೆರವಣಿಗೆ ಮೂಲಕ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು. ಆ ಸಂದರ್ಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸುವ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ರೂಪಿಸಿರುವ ಐದು ನ್ಯಾಯ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್ ಎಂದರೆ ಕಾರ್ಯಕರ್ತರ ಪಕ್ಷ. ಎಲ್ಲರನ್ನೂ ಜೊತೆಗೆ ಕರೆದೊಯ್ಯುತ್ತೇವೆ ಎಂದೂ ಅವರು ತಿಳಿಸಿದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರಿಗೆ ಸರಿಯಾಗಿ ಮಾತನಾಡಿಸುತ್ತಿಲ್ಲ. ಯಾವುದೇ ಬೆಲೆ ಕೊಡುತ್ತಿಲ್ಲ. ಹಣದ ಹಮ್ಮಿನಿಂದ ನೋಡುತ್ತಿದ್ದಾರೆ. ಅನೇಕರು ಸಾಕಾಗಿ ಹೋಗಿದ್ದಾರೆ.  ಎಷ್ಟು ಜನ ಕಾಂಗ್ರೆಸ್‌ಗೆ ಬರುತ್ತಾರೆ ಎಂಬುದನ್ನು ಕಾದು ನೋಡಿ ಎಂದು ಮಲ್ಲಿಕಾರ್ಜುನ್ ಹೇಳಿದರು.

ವಿನಯ್‌ಗೆ ವಿಜಯದ ವಿಶ್ವಾಸ : ನಾನು ನಡೆಸಿರುವ ಸಮೀಕ್ಷೆಯಂತೆ ಲೋಕಸಭಾ ಚುನಾವಣೆಯಲ್ಲಿ ಶೇ.37ರಷ್ಟು ಮತ ಸಿಗಲಿವೆ. ಜಯಭೇರಿ ಭಾರಿಸಿಯೇ ತೀರುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿ.ಬಿ. ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜನರ ಅಭಿಲಾಷೆಯಂತೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್ ಮುಖಂಡರ ಜತೆ ಯಾವುದೇ ಮಾತುಕತೆಯಾಗಿಲ್ಲ. ಯಾವ ಕರೆಯೂ ಬಂದಿಲ್ಲ. ಆ ಬಗ್ಗೆ ನನಗೆ ಆಸಕ್ತಿಯೂ ಇಲ್ಲ ಎಂದು ನಾಮಪತ್ರ ಸಲ್ಲಿಕೆಯ ನಂತರ ಮಾತನಾಡಿದ ಅವರು ಹೇಳಿದ್ದಾರೆ.

ಟಿಕೆಟ್ ತಪ್ಪಿದ ಬಳಿಕವೂ 200 ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಮತದಾರರು ಎರಡೂ ಕುಟುಂಬ ತಿರಸ್ಕರಿಸಿ ನನಗೆ ಅವಕಾಶ ನೀಡಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

error: Content is protected !!