15,324 ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್, 13.63 ಕೋಟಿ ರೂ. ಷೇರು ಬಂಡವಾಳ, 72 ಕೋಟಿ ರೂ. ನಿಧಿಗಳು ಮತ್ತು 642 ಕೋಟಿ ರೂ. ದುಡಿಯುವ ಬಂಡವಾಳವಾಗಿದ್ದು, 546 ಕೋಟಿ ರೂ. ಠೇವಣಿ ಹೊಂದಿದೆ. ಸದಸ್ಯರ ವಿವಿಧ ಉದ್ದೇಶಗಳಿಗನುಗುಣವಾಗಿ 396 ಕೋಟಿ ರೂ. ಸಾಲ ಸೌಲಭ್ಯ ಒದಗಿಸಲಾಗಿದೆ. 206 ಕೋಟಿ ರೂ. ತೊಡಗಣಿಯಾಗಿದೆ. ಶೇ. 0.89 ಗ್ರಾಸ್ ಎನ್.ಪಿ.ಎ. ಆಗಿದ್ದು, ಶೇ. ನೆಟ್ ಎನ್.ಪಿ.ಎ ಶೂನ್ಯವಾಗಿದೆ.
– ಬಿ.ಸಿ. ಉಮಾಪತಿ, ಅಧ್ಯಕ್ಷರು
ಬ್ಯಾಂಕಿನ ಅಧ್ಯಕ್ಷ ಬಿ.ಸಿ. ಉಮಾಪತಿ, ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್ ಸಂತಸ
ದಾವಣಗೆರೆ, ಏ. 4- ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲೊಂದು ಎಂಬ ಹೆಗ್ಗಳಿಕೆಯೊಂದಿಗೆ ಮುನ್ನಡೆದಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, 2024ರ, ಮಾರ್ಚ್ ಅಂತ್ಯಕ್ಕೆ 13.55 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ. ಉಮಾಪತಿ ತಿಳಿಸಿದ್ದಾರೆ.
ಬ್ಯಾಂಕಿನ ಒಟ್ಟು ಲಾಭದಲ್ಲಿ ಆದಾಯ ತೆರಿಗೆ ಮತ್ತು ಇತರೆ ನಿಧಿಗಳಿಗೆ ಅವಕಾಶ ಕಲ್ಪಿಸಿದ ನಂತರ 8.51 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಇದು, ಕಳೆದ ಸಾಲಿಗಿಂತ 1.26 ಕೋಟಿ ರೂ. ಹೆಚ್ಚು ಲಾಭ ಗಳಿಕೆಯಾಗಿದೆ. ಒಟ್ಟಿನಲ್ಲಿ ಗಣನೀಯವಾಗಿ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಮುನ್ನಡೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಆರ್ಥಿಕ ವರ್ಷ 2023-24 ನೇ ಸಾಲು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತಮ್ಮ ಬ್ಯಾಂಕಿನ ಪ್ರಗತಿ ಕುರಿತಂತೆ ಬ್ಯಾಂಕಿನ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ರಿಯಾಯಿತಿ : ನಗರದ ಜನತೆಯ ಆರ್ಥಿಕ ಬೆಳವಣಿಗೆಯ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಹಾಗೂ ಇತರೆ ವರ್ಗದವರು 1962ರಲ್ಲಿ ಸ್ಥಾಪಿಸಿದ ಈ ಬ್ಯಾಂಕ್, ಈಗ ಹೆಮ್ಮರವಾಗಿದ್ದು, ಅದರಡಿಯಲ್ಲಿ ಬಹಳಷ್ಟು ಜನ ತಮ್ಮ ಆಶೋತ್ತರಕ್ಕನುಗುಣವಾಗಿ ವ್ಯಾಪಾರ/ವ್ಯವಹಾರ ನಡೆಸಿಕೊಂಡು ಈಗ ಸದೃಢರಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವವರ ಯಶಸ್ಸಿನ ಹಿಂದೆ ದಾವಣಗೆರೆ ಅರ್ಬನ್ ಬ್ಯಾಂಕ್ ಇದೆ ಎಂದರೆ ಅತಿಶಯೋಕ್ತಿಯೇನಲ್ಲ ಎಂದು ಉಮಾಪತಿ ಅಭಿಪ್ರಾಯಪಟ್ಟರು.
ಜಿಲ್ಲೆಯಾದ್ಯಂತ ಅಪಾರ ಷೇರುದಾರರನ್ನು ಹೊಂದಿ, ಅವರಿಗೆ ಆಮೂಲಾಗ್ರವಾಗಿ ಬೇಕಾದಂತಹ ಎಲ್ಲಾ ರೀತಿಯ ಹಣಕಾಸಿನ ಸಹಾಯ ಹಾಗೂ ನಾಡಿನಾದ್ಯಂತ ದೇವಸ್ಥಾನ, ಮಠ-ಮಂದಿರ, ದೇಗುಲಗಳಿಗೆ ಧನ ಸಹಾಯ ಮಾಡುತ್ತಾ ರಾಜ್ಯಾದ್ಯಂತ ಹೆಸರು ವಾಸಿಯಾಗಿರುವ ಬ್ಯಾಂಕು ತನ್ನ ವಜ್ರ ಮಹೋತ್ಸವವನ್ನು ಆಚರಿಸುತ್ತಿದೆ.
ಸಹಕಾರಿ ತತ್ವದ ಮೂಲ ಉದ್ಧೇಶವಾಗಿರುವ `ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ’ ಎಂಬುದನ್ನು ಗಮನದಲ್ಲಿರಿಸಿಕೊಂಡು ಕೊರೊನಾ ಮಹಾಮಾರಿ ಸಂದರ್ಭದಲ್ಲಿಯೂ ಸಹ ಪ್ರಪಂಚದಾದ್ಯಂತ ಇರುವ ಆರ್ಥಿಕ ಸಂಕಷ್ಟದ ನಡುವೆಯೂ ಬ್ಯಾಂಕು ತನ್ನ ಸದಸ್ಯರ/ಗ್ರಾಹಕರ ಹಿತ ಕಾಪಾಡಲು ಕೂಡಲೇ ಸಾಲ ಪಡೆದವರಿಗೆ ಕೋವಿಡ್ ರಿಯಾಯಿತಿ ಎಂದು 2020-2021 ನೇ ಸಾಲಿನಲ್ಲಿ 6 ತಿಂಗಳು ಹಾಗೂ 2021-2022 ನೇ ಸಾಲಿನಲ್ಲಿ 6 ತಿಂಗಳ ಕಾಲ ಸಾಲದ ಬಡ್ಡಿಯ ಮೇಲೆ ಶೇ.1 ರಂತೆ ಹೆಚ್ಚುವರಿ ರಿಯಾಯಿತಿಯನ್ನು ನೀಡಿರುವುದು ದಾವಣಗೆರೆ ಜಿಲ್ಲೆಯ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಮೊಟ್ಟಮೊದಲು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಇದರ ಪರಿಣಾಮವಾಗಿ ಬ್ಯಾಂಕಿನ ಲಾಭದಲ್ಲಿ ಸುಮಾರು 2 ಕೋಟಿ ರೂ. ಗಳಷ್ಟು ಕಡಿಮೆಯಾಗಿದ್ದರೂ ಸಹ ಬ್ಯಾಂಕಿನ ಗ್ರಾಹಕರ ಹಿತರಕ್ಷಣೆಯೇ ಮುಖ್ಯವೆಂದು ಪರಿಗಣಿಸಿ, ಕಾರ್ಯನಿರ್ವಾಹಕ ಮಂಡಳಿಯು ಎಲ್ಲಾ ಸಾಲಗಾರರಿಗೂ ಸಹ ಕೋವಿಡ್ ಕಾರಣಕ್ಕೆ ಸಾಲದಲ್ಲಿ ಬಡ್ಡಿ ರಿಯಾಯಿತಿಯನ್ನು ನೀಡಿತ್ತು.
ಡಿಜಿಟಲೈಜೇಷನ್ : ಸ್ಪರ್ಧಾತ್ಮಕ ಯುಗಕ್ಕನುಗುಣವಾಗಿ ಬ್ಯಾಂಕಿಂಗ್ನಲ್ಲಿ ಡಿಜಿಟಲೈಜೇಷನ್ ಅಳವಡಿಸಿದ್ದು, ಈ ಸ್ಪರ್ಧೆಯಲ್ಲಿ ನಮ್ಮ ಬ್ಯಾಂಕು ಗುರಿಯನ್ನು ತಲುಪಲು ಎಲ್ಲಾ ರೀತಿಯಿಂದಲೂ ಸಜ್ಜಾಗಿದೆ. ಅದರಂತೆ ಬ್ಯಾಂಕು ತನ್ನ ಗ್ರಾಹಕರಿಗೆ ನಗರದಲ್ಲಿ ಈಗಾಗಲೇ 3 ಎಟಿಎಂ, ಪಿಒಎಸ್, ಕ್ಯೂಆರ್ ಕೋಡ್ ಸ್ಕ್ಯಾನ್ ಸವಲತ್ತನ್ನು ನೀಡಿದ್ದು, ಎಲ್ಲಾ ದಿನಗಳಲ್ಲೂ ಸಹ ಬ್ಯಾಂಕಿನ ಗ್ರಾಹಕರಿಗೆ ನಗದು ದೊರೆಯುವ ವ್ಯವಸ್ಥೆ ಮಾಡಿರುತ್ತದೆ. ಐಎಂಪಿಎಸ್, ಆರ್ಟಿಜಿಎಸ್, ನೆಫ್ಟ್ ಈ ಎಲ್ಲಾ ಸೌಲಭ್ಯವನ್ನು ಮೊಬೈಲ್ ಆಪ್ ಮೂಲಕ ನಡೆಸಲೂ ಸಹ ವ್ಯವಸ್ಥೆ ನಡೆದಿದ್ದು, ಕೂಡಲೇ ಅದೂ ಸಹ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೇ ಬ್ಯಾಂಕು ಈಗಾಗಲೇ ಸರ್ಕಾರಿ ಇ-ಪೇಮೆಂಟ್ ಹಾಗೂ ಗ್ರಾಹಕರು ತಮ್ಮ ಖಾತೆಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವಾಗ ನಮ್ಮ ಬ್ಯಾಂಕಿನ ಖಾತೆಯನ್ನು ನಮೂದಿಸಿ, ಕೂಡಲೇ ಇನ್ಕಮ್ ಟ್ಯಾಕ್ಸ್ ರೀಫಂಡ್ ಪಡೆಯಬಹುದು.
ಕೃತಜ್ಞತೆ : ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಬ್ಯಾಂಕ್ ಪ್ರಗತಿದಾಯಕವಾಗಿ ಮುನ್ನಡೆಯಲು ಬ್ಯಾಂಕಿನ ಸದಸ್ಯರು ಮತ್ತು ಠೇವಣಿದಾರರ ಪ್ರೋತ್ಸಾಹ ಹಾಗೂ ಸಹಕಾರ, ಸಿಬ್ಬಂದಿ ವರ್ಗದವರ ಪರಿಶ್ರಮ, ಆಡಳಿತ ಮಂಡಳಿಯ ಇಚ್ಛಾಶಕ್ತಿ ಕಾರಣವಾಗಿದೆ ಎಂದು ತಿಳಿಸಿದ ಬ್ಯಾಂಕಿನ ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್, ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತಿರುವ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಸ್ಥಾಪಕರ ಆಶಯದಂತೆ ಬೆಳೆದಿದೆ : ಈ ಬ್ಯಾಂಕನ್ನು ಸ್ಥಾಪಿಸಿದ ಮಹನೀಯರ ಆಶೋತ್ತರಗಳಿಗನುಗುಣವಾಗಿ ಬ್ಯಾಂಕ್ ಆಲದ ಮರದಂತಾಗಿ ಬೆಳೆಯಲು ಬ್ಯಾಂಕಿನ ಸದಸ್ಯರು ಮತ್ತು ಗ್ರಾಹಕರ ಸಹಕಾರ, ಪ್ರೋತ್ಸಾಹ ಕಾರಣ ಎಂದು ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರೂ, ಹಿರಿಯ ನಿರ್ದೇಶಕರೂ, ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೋಗುಂಡಿ ಬಕ್ಕೇಶಪ್ಪ ಹೇಳಿದರು.
ಜವಾಬ್ದಾರಿ ನಿರ್ವಹಿಸಿದ ಬ್ಯಾಂಕ್ : ಸದಸ್ಯರ ಅಗತ್ಯಕ್ಕನುಗುಣವಾಗಿ ಆರ್ಥಿಕ ಸಹಾಯವನ್ನು ನೀಡುವುದರೊಂದಿಗೆ ಸಾರ್ವಜನಿಕರ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಬ್ಯಾಂಕಿನ ಪಾತ್ರ ಅತೀ ಮುಖ್ಯವಾಗಿರುತ್ತದೆ ಎಂದು ಹಿರಿಯ ನಿರ್ದೇಶಕ ಕೋಗುಂಡಿ ಬಕ್ಕೇಶಪ್ಪ ಪ್ರತಿಪಾದಿಸಿದರು.
ಬ್ಯಾಂಕಿನ ನಿರ್ದೇಶಕರುಗಳಾದ ಪಲ್ಲಾಗಟ್ಟಿ ಶಿವಾನಂದಪ್ಪ, ಎಂ. ಚಂದ್ರಶೇಖರ್, ದೇವರಮನೆ ಶಿವಕುಮಾರ್, ಅಂದನೂರು ಮುಪ್ಪಣ್ಣ, ಅಜ್ಜಂಪುರ ಶೆಟ್ರು ವಿಜಯಕುಮಾರ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಕಂಚಿಕೆರೆ ಮಹೇಶ್, ಇ.ಎಂ. ಮಂಜುನಾಥ, ವಿ. ವಿಕ್ರಮ್, ಶ್ರೀಮತಿ ಅರ್ಚನಾ ಡಾ.ರುದ್ರಮುನಿ, ಹೆಚ್.ಎಂ. ರುದ್ರಮುನಿಸ್ವಾಮಿ, ಸೋಗಿ ಮುರುಗೇಶ್, ವೃತ್ತಿಪರ ನಿರ್ದೇಶಕರುಗಳಾದ ಮುಂಡಾಸ್ ವೀರೇಂದ್ರ, ಮಲ್ಲಿಕಾರ್ಜುನ ಕಣವಿ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್ ಸ್ವಾಗತಿಸಿದರು. ಉಪ ಪ್ರಧಾನ ವ್ಯವಸ್ಥಾಪಕ ಆರ್.ಎ. ಪ್ರಸನ್ನ ವಂದಿಸಿದರು. ಬ್ಯಾಂಕಿನ ಎಲ್ಲಾ ಶಾಖಾ ವ್ಯವಸ್ಥಾಪಕರುಗಳಾದ ಎಲ್ .ಎಸ್.ಗೀತಾ, ವಿಜಯಕುಮಾರ್, ಮಹೇಶ್, ರುದ್ರೇಶ್, ಗಣೇಶ್, ಕುಮಾರ್ ಮತ್ತು ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.