ಶೇ.85ರ ಗುರಿಯೊಂದಿಗೆ ಮತ ಚಲಾಯಿಸಿ: ಸುರೇಶ್ ಬಿ. ಇಟ್ನಾಳ್
ದಾವಣಗೆರೆ, ಏ.04- ಲೋಕಸಭಾ ಚುನಾವಣೆ ಅಂಗವಾಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಗುರುವಾರ ರಂಗು ರಂಗಿನ ರಂಗೋಲಿ ಬಿಡಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ರೈಲ್ವೆ ಇಲಾಖೆಯ ಸಹಯೋಗದಲ್ಲಿ ಎಂಸಿಸಿ ಬಿ. ಬ್ಲಾಕ್ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಭಿನ್ನ ಭಿನ್ನವಾದ ರಂಗೋಲಿ ಬಿಡಿಸಿ ಮತ ಜಾಗೃತಿ ಕುರಿತು ಘೋಷನಾ ವ್ಯಾಕ್ಯ ಬರೆದು ಮತದಾನದ ಅರಿವು ಮೂಡಿಸಿದರು.
`ಮತದಾನ ನಿಮ್ಮ ಮನೆಯ ಮಗಳಿದ್ದಂತೆ ಅದನ್ನು ಮಾರಿಕೊಳ್ಳಬೇಡಿ, ವೋಟು ಮಾಡೋಣ ದೇಶ ಕಟ್ಟೋಣ, ಕಳಬೇಡ ಕೊಲಬೇಡ ಮತದಾನ ಮಾರಿಕೊಳ್ಳ ಬೇಡ, ನನ್ನ ಮತ ನನ್ನ ಹಕ್ಕು, ಸರಿಯಾಗಿ ಆಡಿದರೆ ಈ ಸಲ ಕಪ್ ನಮ್ದೆ- ವೋಟ್ ಹಾಕದಿದ್ದರೆ ಈ ಸಲ ತಪ್ಪು ನಮ್ಮದೇ ಎಂಬ’ ವಿಶೇಷ ಘೋಷನಾ ವಾಕ್ಯಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿದ್ದವು.
ಜಿ.ಪಂ. ಸಿಇಓ ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಆಕರ್ಷಕ ರಂಗೋಲಿ ಬರಹವನ್ನು ವಿಕ್ಷಿಸಿದರು.
ಈ ವೇಳೆ ಜಿ.ಪಂ. ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಯಾವುದೇ ಆಮಿಷಕ್ಕೆ ತಲೆ ಬಾಗದೇ ಪ್ರಾಮಾಣಿಕ ಮತದಾನ ಮಾಡಬೇಕು. ಜತೆಗೆ ಕಳೆದ ಬಾರಿಯ ಶೇ.72.9ರಷ್ಟರ ದಾಖಲೆಯನ್ನು ಶೇ.85ಕ್ಕೆ ಹೆಚ್ಚಿಸುವ ಗುರಿಯೊಂದಿಗೆ ಮತ ಚಲಾಯಿಸೋಣ ಎಂದು ಹೇಳಿದರು.
`know your candidate’ ಆಪ್ ಸಹಾಯದಿಂದ ಅಭ್ಯರ್ಥಿಯ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವ ಸೇವೆ ಒದಗಿಸಿದೆ ಮತ್ತು ಕ್ಯೂಆರ್ ಕೋಡ್ ಸಹಾಯದಿಂದ ಮತಗಟ್ಟೆಯ ವಿವರ ತಿಳಿಯಬಹುದಾಗಿದೆ ಎಂದು ತಿಳಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಸದೃಢ ಭಾರತಕ್ಕಾಗಿ ಎಲ್ಲರೂ ನಿರ್ಭಿತಿಯಿಂದ ಮತದಾನ ಮಾಡಬೇಕು ಎಂದು ಹೇಳಿದರು.
ಬಿಸಿಎಂ ಅಧಿಕಾರಿ ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ್, ಸಿಪಿಓ ಮಲ್ಲನಾಯ್ಕ್ ಮತ್ತು ಇತರ ಇಲಾಖೆಯ ಅಧಿಕಾರಿಗಳು ಇದ್ದರು.