6ಕ್ಕೆ ಬಿಜೆಪಿ-ಜೆಡಿಎಸ್‌ ಸಮ್ಮಿಲನ ಸಮಾವೇಶ

6ಕ್ಕೆ ಬಿಜೆಪಿ-ಜೆಡಿಎಸ್‌ ಸಮ್ಮಿಲನ ಸಮಾವೇಶ

ಸಂಸದ ಸಿದ್ದೇಶ್ವರ ಹಾಗೂ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ದಾವಣಗೆರೆ, ಏ. 3 – ಏಪ್ರಿಲ್ 6ರ ಸಂಜೆ 4 ಗಂಟೆಗೆ ಹರಿಹರದ ಸಿದ್ದೇಶ್ವರ ಪ್ಯಾಲೇಸ್‌ನಲ್ಲಿ ಬಿಜೆಪಿ – ಜೆಡಿಎಸ್ ಪಕ್ಷಗಳಿಂದ §ಸಮ್ಮಿಲನದ ಸಮಾವೇಶ¬ ನಡೆಯಲಿದೆ ಎಂದು ಸಂಸದ ಸಿದ್ದೇಶ್ವರ ಹಾಗೂ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ತಿಳಿಸಿದ್ದಾರೆ.

ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ – ಜೆಡಿಎಸ್‌ಗಳು ಎನ್.ಡಿ.ಎ. ಮೈತ್ರಿಕೂಟವಾಗಿ ಸ್ಪರ್ಧಿಸಲಿವೆ. ಬಿಜೆಪಿ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ್ ಹೆಚ್ಚಿನ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಸೂಕ್ತವಾಗಿದ್ದಾರೆ. ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿದೆ. ಸೀಟು ಹಂಚಿಕೆ ಮಾಡುವಾಗ ಇದ್ದ ಗೊಂದಲ ಈಗ ಬಗೆಹರಿದಿದೆ. ಬಿಜೆಪಿ ಹಾಗೂ ಜೆಡಿಎಸ್ ಈಗ ಒಂದೇ ವೇದಿಕೆಗೆ ಬಂದಿದ್ದೇವೆ ಎಂದು ಜೆಡಿಎಸ್ ಮುಖಂಡ ಶಿವಶಂಕರ್ ಹೇಳಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಎರಡು ಬಜೆಟ್ ಮಂಡಿಸಿದರೂ, ಜಿಲ್ಲೆಯ ಅಭಿವೃದ್ಧಿಗೆ ಬಿಡಿಗಾಸೂ ನೀಡಿಲ್ಲ. ಯಾವ ಮುಖ ಇಟ್ಟುಕೊಂಡು ಆ ಪಕ್ಷ ಮತ ಕೇಳುತ್ತಿದೆ? ಎಂದೂ ಅವರು ಪ್ರಶ್ನಿಸಿದರು.

ಸಂಸದ ಸಿದ್ದೇಶ್ವರ ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆಯಿಂದ ಲೋಕಸಭಾ ಚುನಾವಣೆಗೆ ಪ್ರಚಾರ ಕೈಗೊಳ್ಳುತ್ತಿದ್ದೇವೆ. ಎರಡೂ ಪಕ್ಷಗಳ ಕಾರ್ಯಕರ್ತರು ಜೊತೆಯಾಗಿ ಕ್ಷೇತ್ರಾದ್ಯಂತ ಕಾರ್ಯ ನಿರ್ವಹಿಸಲಿದ್ದೇವೆ ಎಂದು ತಿಳಿಸಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಭದ್ರಾ ನಾಲೆ ವ್ಯಾಪ್ತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲೂ ನೀರು ಸಿಗುತ್ತಿಲ್ಲ. ದಾವಣಗೆರೆಯ ಕುಡಿಯುವ ನೀರಿನ ಅಗತ್ಯದ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಟೀಕಿಸಿದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್‌ಗಳು ಈ ಹಿಂದೆಯೂ ಮೈತ್ರಿಕೂಟದಲ್ಲಿ ಉತ್ತಮವಾಗಿ ಕೆಲಸ ಮಾಡಿವೆ. ಸ್ಥಳೀಯ ಹಂತದಲ್ಲೂ ಮೈತ್ರಿ ಮಾಡಿಕೊಂಡು ಕಾರ್ಯನಿರ್ವಹಿಸಿವೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ಹೊಂದಾಣಿಕೆಯಿಂದ ಉತ್ತಮ ಕೆಲಸ ಮಾಡಿ ತೋರಿಸಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮುಖಂಡರಾದ ವೀರೇಶ್ ಹನಗವಾಡಿ, ಧನಂಜಯ ಕಡ್ಲೇಬಾಳು, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಜೆಡಿಎಸ್ ಮುಖಂಡರಾದ ಅಮಾನುಲ್ಲಾ ಖಾನ್, ಕಡತಿ ಅಂಜನಪ್ಪ, ಪರಮೇಶ್ವರ ಗೌಡ್ರು, ಗಣೇಶ ದಾಸಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!