ಉಪ್ಪಿಟ್ಟು-ಚಹಾ ಮಾಡಿದ ಬಿಜೆಪಿ ನಾಯಕಿಯರು

ಉಪ್ಪಿಟ್ಟು-ಚಹಾ ಮಾಡಿದ ಬಿಜೆಪಿ ನಾಯಕಿಯರು

ಎಸ್ಸೆಸ್ ಹೇಳಿಕೆ ಖಂಡಿಸಿ `ಅಡುಗೆಗೂ ಸಿದ್ಧ- ಜನಸೇವೆಗೂ ಬದ್ಧ’ ಅಭಿಯಾನ 

ದಾವಣಗೆರೆ, ಏ. 3- ಇತ್ತಿಚೇಗೆ ಲೋಕಸಭಾ ಚುನಾವಣಾ ಸಮರದಲ್ಲಿ ಮಹಿಳೆ ಅಡುಗೆ ಮಾಡಲು ಲಾಯಕ್ಕು ಎಂಬ ಹೇಳಿಕೆ ನೀಡಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಡೆಯನ್ನು ಖಂಡಿಸಿ, ಜಿಲ್ಲಾ ಬಿಜೆಪಿ ಮಹಿಳಾ ವಿಭಾಗದಿಂದ  `ಅಡುಗೆಗೂ ಸಿದ್ಧ- ಜನಸೇವೆಗೂ ಬದ್ಧ’ ಎಂಬ ಅಭಿಯಾನವು ನಗರದ ಜಯದೇವ ವೃತ್ತದಲ್ಲಿ ಬುಧವಾರ ನಡೆಯಿತು.

ಬಿಜೆಪಿಯ ಮಹಿಳಾ ಕಾರ್ಯಕರ್ತೆಯರು ಮತ್ತು ಮುಖಂಡರುಗಳು ಉಪ್ಪಿಟ್ಟು ಮತ್ತು ಟೀ ತಯಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. 

ಜನಸೇವೆಗೂ ಬದ್ಧ, ಮತ್ತೊಮ್ಮೆ ಮೋದಿ ಎನ್ನುವ ಜೈಕಾರ ಕೂಗುವ ಜತೆಗೆ ಮಹಿಳೆ ಯಾವುದಕ್ಕೂ ಕಡಿಮೆ ಇಲ್ಲ ಎನ್ನುವ ಸಂದೇಶ ಸಾರುತ್ತಿದ್ದರು.

ಈ ವೇಳೆ ಸಿದ್ದೇಶ್ವರ ಪುತ್ರಿ ಜಿ.ಎಸ್‌. ಅಶ್ವಿನಿ ಅವರು ಮಾತನಾಡಿ, ಕಾಂಗ್ರೆಸ್‌ ಹಿಂದಿನಿಂದಲೂ ಈ ತರಹ ವಿವಾದಾತ್ಮಕ ಹೇಳಿಕೆ ನೀಡುತ್ತಲೇ ಬಂದಿದೆ ಅಂತೆಯೇ ಇಲ್ಲಿನ ಹಿರಿಯ ಕೈ ಶಾಸಕರು ಸಹ ಮಹಿಳಾ ಸಾಮರ್ಥ್ಯದ ಬಗ್ಗೆ ಹಿಯ್ಯಾಳಿಸಿ ಹೇಳಿಕೆ ನೀಡಿರುವುದು ಮಹಿಳೆಯರಿಗೆ ನೋವು ತಂದಿದೆ ಎಂದರು.

ಗಾಯತ್ರಿ ಸಿದ್ದೇಶ್ವರ್‌ ಅವರು ಜಿಲ್ಲೆಯನ್ನು ಅಭಿವೃದ್ಧಿಗೊಳಿಸುವ ಧ್ಯೇಯ ಹೊಂದಿದ್ದಾರೆ. ಆದ್ದರಿಂದ ಗಾಯತ್ರಿ ಸಿದ್ದೇಶ್ವರ್‌ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ನಾರಿ ಶಕ್ತಿ ಪ್ರದರ್ಶಿಸುತ್ತೇವೆ ಎಂದು ಹೇಳಿದರು.

ಮಹಿಳಾ ಮುಖಂಡರಾದ ಜಯಮ್ಮ ಮಾತನಾಡಿ, ನಾರಿ ಶಕ್ತಿಯನ್ನು ವಿರೋಧಿಸಿದ ಕಾಂಗ್ರೆಸಿನ ವಿರುದ್ಧ ನಮ್ಮ ಹೋರಾಟವಾಗಿದೆ. ಹೇಳಿಕೆ ನೀಡಿದ ಕಾಂಗ್ರೆಸ್‌ನ ಶಾಸಕರು, ಎಲ್ಲ ಮಹಿಳೆಯರಿಗೆ ಕ್ಷಮಾಪಣೆ ಕೇಳುವುದೇ ನಮ್ಮ ಆಗ್ರಹ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್‌. ರಾಜಶೇಖರ್‌,  ಕೈಗಾರಿಕಾ ಪ್ರಕೋಷ್ಠದ ಕೆ.ಬಿ. ಕೊಟ್ರೇಶ್, ಧನಂಜಯ್‌ ಕಡ್ಲೆಬಾಳ್‌, ಅನಿಲ್ ಕುಮಾರ್ ನಾಯ್ಕ್‌,  ಎ.ವೈ ಪ್ರಕಾಶ್, ಎಲ್‌.ಎನ್‌. ಕಲ್ಲೇಶ್, ಟಿಪ್ಪುಸುಲ್ತಾನ್‌, ಎಸ್‌.ಟಿ. ವೀರೇಶ್, ಸುಧಾ ಜಯರುದ್ರೇಶ್, ಉಪಮೇಯರ್ ಯಶೋಧಾ ಯಗ್ಗಪ್ಪ, ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಉಮಾ ಪ್ರಕಾಶ್‌, ರೂಪಾ ಕಾಟ್ವೆ, ರೇಣುಕಾ ಶ್ರೀನಿವಾಸ್, ಗಾಯತ್ರಿ ಖಂಡೋಜಿರಾವ್‌, ನಾಗರತ್ನ ಕಾಟೆ, ವೀಣಾ ನಂಜಪ್ಪ ಮತ್ತಿತರರಿದ್ದರು.

error: Content is protected !!