ಸ್ವಂತ ಕಟ್ಟಡದಲ್ಲೇ ಶಾಖೆ ಆರಂಭಿಸಲು ದಾವಣಗೆರೆ ಅರ್ಬನ್ ಬ್ಯಾಂಕ್ ಸಿದ್ಧತೆ

ಸ್ವಂತ ಕಟ್ಟಡದಲ್ಲೇ ಶಾಖೆ ಆರಂಭಿಸಲು ದಾವಣಗೆರೆ ಅರ್ಬನ್ ಬ್ಯಾಂಕ್ ಸಿದ್ಧತೆ

ನಿಟುವಳ್ಳಿಯಲ್ಲಿ ನೂತನ 7ನೇ ಶಾಖೆ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

ದಾವಣಗೆರೆ, ಮಾ.31- ಪ್ರಧಾನ ಕಚೇರಿಯನ್ನು ಒಳಗೊಂಡಂತೆ  ಒಟ್ಟು ಆರು ಶಾಖೆಗಳನ್ನು ಹೊಂದಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನ 7ನೇ ಶಾಖೆಯನ್ನು ಆರಂಭಿಸುವ ನಿಟ್ಟಿನಲ್ಲಿ ಸಕಲ ಸಿದ್ದತೆಯನ್ನು ಕೈಗೊಡಿದೆ.

ನೂತನ ಶಾಖೆಯನ್ನು ಸ್ವಂತ ಕಟ್ಟಡದ ಜೊತೆ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಾರಂಭಿಸಲಾಗುತ್ತದೆ. ನಿಟುವಳ್ಳಿಯ ಹೆಚ್.ಕೆ.ಆರ್. ಸರ್ಕಲ್ ಬಳಿ ಈ ಶಾಖೆ ಶೀಘ್ರದಲ್ಲೇ ಸಾರ್ವಜನಿಕರ ಸೇವೆಗೆ ಸಮರ್ಪಣೆಗೊಳ್ಳಲಿದೆ.

ಈ ಸಂಬಂಧ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಸಿ. ಉಮಾಪತಿ ಮತ್ತು ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್ ಅವರುಗಳು ಇಂದು ನಡೆದ ಸರಳ ಸಮಾರಂಭದಲ್ಲಿ ನೂತನ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದರು.

ಪೂಜೆಯ ನಂತರ ಔಪಚಾರಿಕವಾಗಿ ಮಾತನಾಡಿದ ಅಧ್ಯಕ್ಷ ಉಮಾಪತಿ, ಮಧ್ಯ ಕರ್ನಾಟಕದ ಸಹಕಾರ ಬ್ಯಾಂಕುಗಳಲ್ಲಿ ಸ್ಥಾಪನೆಯ ಪ್ರಥಮ ಮತ್ತು ಅತೀ ಹೆಚ್ಚು ಲಾಭದಾಯಕ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬ್ಯಾಂಕ್, ಮತ್ತೊಷ್ಟು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಶ್ರಮಿಸುವುದಾಗಿ ತಿಳಿಸಿದರು.

ಉಪಾಧ್ಯಕ್ಷ ಜಯರುದ್ರೇಶ್ ಮಾತನಾಡಿ, ನಮ್ಮ ಬ್ಯಾಂಕಿನ ಎರಡು ಶಾಖೆಗಳನ್ನು ಹೊರತುಪಡಿಸಿ ಉಳಿದ 4 ಶಾಖೆಗಳು ಸ್ವಂತ ಕಟ್ಟಡಗಳನ್ನು ಹೊಂದಿದ್ದು, 7ನೇ ಶಾಖೆಯನ್ನು ಸ್ವಂತ ಕಟ್ಟಡದಲ್ಲೇ ಕಾರ್ಯಾರಂಭ ಮಾಡಲು ಸಿದ್ಧತೆ ನಡೆದಿರುವುದು ಈ ಬ್ಯಾಂಕಿನ ಹೆಗ್ಗಳಿಕೆ ಎಂದು ಸಂತಸ ಹಂಚಿಕೊಂಡರು.

ಬ್ಯಾಂಕಿನ ಹಿರಿಯ ನಿರ್ದೇಶಕರೂ ಆಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.

ನಿರ್ದೇಶಕರುಗಳಾದ ಅಂದನೂರು ಮುಪ್ಪಣ್ಣ, ದೇವರಮನೆ ಶಿವಕುಮಾರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಎಂ. ಚಂದ್ರಶೇಖರ್, ಕಂಚಿಕೆರೆ ಮಹೇಶ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಶ್ರೀಮತಿ ಅರ್ಚನಾ ಡಾ. ರುದ್ರಮುನಿ, ಹೆಚ್.ಎಂ. ರುದ್ರಮುನಿಸ್ವಾಮಿ, ವಿ. ವಿಕ್ರಂ,  ಮುಂಡಾಸ ವೀರೇಂದ್ರ, ಸೋಗಿ ಮುರುಗೇಶ್, ಇ.ಎಂ. ಮಂಜುನಾಥ, ಮಲ್ಲಿಕಾರ್ಜುನ ಕಣವಿ  ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್, ಉಪ ಪ್ರಧಾನ ವ್ಯವಸ್ಥಾಪಕ ಪ್ರಸನ್ನ, ಶಾಖಾ ವ್ಯವಸ್ಥಾಪಕರುಗಳಾದ ಮಹೇಶ್, ರುದ್ರೇಶ್, ಗಣೇಶ್, ಗೀತಾ, ವಿಜಯಕುಮಾರ್ ಇನ್ನಿತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

error: Content is protected !!