ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ

ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ

ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

ಹರಿಹರ, ಮಾ.29- ಹಿಂದೆ ಮಹಿಳೆ ಅಡುಗೆ ಮನೆಗೆ ಮಾತ್ರ ಸೀಮಿತ ಅನ್ನುವ ಮಾತಿತ್ತು. ಈಗಿನ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುವ ಮೂಲಕ ನಾವು ಅಡುಗೆ ಮನೆಗೆ ಸೀಮಿತವಲ್ಲ, ಅಧಿಕಾರವನ್ನೂ ಮಾಡುತ್ತೇವೆ ಎಂದು ಸಾಬೀತು ಪಡಿಸುತ್ತಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.

ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 15 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಿ ಮಾತನಾಡಿದ ಅವರು, ಅಂದು ಚಿತ್ರದುರ್ಗದ ಒನಕೆ ಓಬವ್ವ ಹೈದರಾಲಿ ಸೈನ್ಯ ಕಂಡು ಹೆದರದೆ ಒಬ್ಬೊಂಟಿಯಾಗಿ ಹೋರಾಡಿ ಇಡೀ ಸೈನ್ಯವನ್ನೇ ಸರ್ವನಾಶ ಮಾಡಿದಳು. ಅಂತಹ ಧೀರ ಮಹಿಳೆ ನಮ್ಮ – ನಿಮ್ಮಂತಹ ಮಹಿಳೆಯರಿಗೆ ಆದರ್ಶವಾಗಿದ್ದಾರೆ ಎಂದರು.

ಮಹಿಳೆಯರು ರಾಜಕಾರಣಕ್ಕೆ ಬರಬೇಕು ಅನ್ನೋ ದೃಢ ಸಂಕಲ್ಪದಿಂದ ನನ್ನಂತಹ ಮಹಿಳೆಯರಿಗೆ ಲೋಕಸಭೆಗೆ ಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ. ನೀವೆಲ್ಲ ನನ್ನನ್ನು ಗೆಲ್ಲಿಸಿ ಕಳುಹಿಸುವ ಮೂಲಕ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ವಿಕಸಿತ ಭಾರತ ನಿರ್ಮಾಣಕ್ಕೆ ಈ ಮೂಲಕ ನೀವು ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಹರಿಹರದ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಜಿ.ಎಸ್.ಅಶ್ವಿನಿ, ಪ್ರೇಮಮ್ಮ, ಜಯಮ್ಮ, ಬಿ.ಎಂ.ಮರುಳು ಸಿದ್ದಪ್ಪ, ಸಿದ್ದೇಗೌಡರು, ಹನುಮಂತಗೌಡರು, ಪರಮೇಶ್ವರಪ್ಪ, ಶಾಂತಕುಮಾರ್, ಮಹಿಳಾ ಮೋರ್ಚಾದ ಸಾಕ್ಷಿ ಸಿಂಧಿ, ರೂಪಾ, ಗ್ಯಾರಳ್ಳಿ ಶಿವಣ್ಣ, ರಾಜು ಮತ್ತು ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರಚಾರದುದ್ದಕ್ಕೂ ಸಾಥ್ ನೀಡಿದರು.

ವಿವಿಧೆಡೆ ಪ್ರಚಾರ : ಸಾಲಕಟ್ಟೆ ಗ್ರಾಮದ ಕರಿಯಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬಳಿಕ ಬೂತ್ ಅಧ್ಯಕ್ಷ ಅಡಕಿ ಶಿವಣ್ಣ, ನಾಗಪ್ಪಜ್ಜ, ಸಿರಿಗೆರೆ ಚಂದ್ರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. 

ಬೇವಿನಹಳ್ಳಿ ಗ್ರಾಮದಲ್ಲಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಿದ ಗಾಯತ್ರಿ ಸಿದ್ದೇಶ್ವರ ಅವರು ಕಾಶಿ ವಿಶ್ವನಾಥ ಮತ್ತು ಗಣಪತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಗ್ರಾಪಂ ಸದಸ್ಯ ಬೂದಾಳ್ ಹಾಲೇಶ್ ಮತ್ತು ಉಮೇಶ್ ನಿವಾಸಕ್ಕೆ ಭೇಟಿ ನೀಡಿ ಮತಯಾಚನೆ ಮಾಡಿದರು. 

ಕಡ್ಲೇಗೊಂದಿ ಗ್ರಾಮದಲ್ಲಿ ತೆರೆದ ವಾಹನದ ಮೂಲಕ ಮತ ಯಾಚಿಸಿ, ಬಸವೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು. ಗ್ರಾಮದ ಬಸಪ್ಪ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು.

ಸಲಗನಹಳ್ಳಿ ಗ್ರಾಮದಲ್ಲೂ ಪ್ರಚಾರ ನಡೆಸಿದ ಗಾಯತ್ರಿ ಸಿದ್ದೇಶ್ವರ, ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಬೆಳ್ಳೂಡಿ ಗ್ರಾಮದಲ್ಲಿ ಮತಯಾಚನೆ ನಡೆಸಿ, ಉಡಸಲಾಂಭಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. 

ಬ್ಯಾಲದಹಳ್ಳಿ ಗ್ರಾಮದ ಬೂತ್ ಅಧ್ಯಕ್ಷ ಮಂಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಗ್ರಾಮದಲ್ಲಿ ಮತಯಾಚನೆ ಬಳಿಕ ಉಡಸಲಾಂಭಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಎಕ್ಕೇಗೊಂದಿ ಗ್ರಾಮದಲ್ಲಿ ಅದ್ಧೂರಿ ಪ್ರಚಾರ ನಡೆಸಿದ ಗಾಯತ್ರಿ ಸಿದ್ದೇಶ್ವರ ಅವರು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಭಾನುವಳ್ಳಿ ಗ್ರಾಮದಲ್ಲೂ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯ ನಡೆಸಿದರು. ವಕೀಲ ಪಿ.ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.

ರಾಮತೀರ್ಥ, ನಾಗೇನಹಳ್ಳಿ ಹರಗನಹಳ್ಳಿ, ಹಲಸಬಾಳು ಗ್ರಾಮಗಳಲ್ಲೂ ಗ್ರಾಮ ದೇವರಿಗೆ ಪೂಜೆ ಸಲ್ಲಿಸಿ, ಮತಯಾಚನೆ ಮಾಡಿದರು.

error: Content is protected !!