ದೇಶ ಮೋದಿ ಕೈಯಲ್ಲಿದ್ದರೆ ನಾವೆಲ್ಲಾ ಸುರಕ್ಷಿತ

ದೇಶ ಮೋದಿ ಕೈಯಲ್ಲಿದ್ದರೆ ನಾವೆಲ್ಲಾ ಸುರಕ್ಷಿತ

ಎಸ್.ಎ. ರವೀಂದ್ರನಾಥ್ ಸಾರಥ್ಯದಲ್ಲಿ ಗಾಯತ್ರಿ ಸಿದ್ದೇಶ್ವರ ಪರ ಪ್ರಚಾರ

ದಾವಣಗೆರೆ, ಮಾ. 29- ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ‌ ಗಾಯತ್ರಿ ಸಿದ್ದೇಶ್ವರ್ ಪರ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಭರ್ಜರಿ ಪ್ರಚಾರ ನಡೆಸಿದರು.

ಮಾಜಿ ಸಚಿವ ಎಸ್.ಎ.ರವೀಂದ್ರ‌ನಾಥ್, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಮಾಜಿ ಮುಖ್ಯ ಸಚೇತಕ ಶಿವಯೋಗಿ ಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಜೊತೆಯಾಗಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಹಳ್ಳಿಗಳಲ್ಲಿ ತೆರೆದ ವಾಹನ ಹಾಗೂ ಕಾಲ್ನಡಿಗೆ ಮೂಲಕ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಪರ ಮತಯಾಚನೆ ಮಾಡಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ನಮ್ಮೆಲ್ಲರ ಗುರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡೋದು. ಈ ದೇಶ ಮೋದಿ ಕೈಯ್ಯಲ್ಲಿದ್ದರೆ ನಾವೆಲ್ಲಾ ಸುರಕ್ಷಿತವಾಗಿ ಇರಬಹುದು. ನಾವೆಲ್ಲ ಸೇರಿ ಶ್ರೀಮತಿ ಗಾಯತ್ರಿ‌‌ ಸಿದ್ದೇಶ್ವರ್ ಅವರನ್ನು ಹೆಚ್ಚಿನ ಬಹುಮತದಿಂದ ಗೆಲ್ಲಿಸುವ ಮೂಲಕ ಕೇಂದ್ರದ ಅಧಿಕಾರ ಮತ್ತೊಮ್ಮೆ ನರೇಂದ್ರ ಮೋದಿ ಅವರ ಕೈಗೆ ಕೊಡಬೇಕು ಎಂದು ಕರೆ ನೀಡಿದರು.

ದಾವಣಗೆರೆ ಜಿಲ್ಲೆ ಸ್ಮಾರ್ಟ್ ಸಿಟಿ ಸೇರಿದಂತೆ ಸಾಕಷ್ಟು ಆಯಾಮದಲ್ಲಿ ಅಭಿವೃದ್ಧಿ ಹೊಂದುವುದಕ್ಕೆ‌‌ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಕೊಡುಗೆ‌ ಇದೆ. ಈ ಬಾರಿ ಅವರ ಪತ್ನಿ ಶ್ರೀಮತಿ ಗಾಯಿತ್ರಿ‌‌ ಸಿದ್ದೇಶ್ವರ್ ಅವರಿಗೆ ಟಿಕೆಟ್ ಸಿಕ್ಕಿದ್ದು, ಅವರನ್ನು ಗೆಲ್ಲಿಸಿ ಕೇಂದ್ರಕ್ಕೆ ಕಳುಹಿಸಿದರೆ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅವರು ಶ್ರಮಿಸುತ್ತಾರೆ ಎಂದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ವಿಧಾನಸಭಾ ಚುನಾವಣೆ ವೇಳೆ ನೀವೆಲ್ಲ ನನ್ನ ಪರ ಮತ ಚಲಾಯಿಸಿ, ನನಗೆ ಶಕ್ತಿ‌ ತುಂಬಿದ್ದೀರಿ. ಕಾಂಗ್ರೆಸ್ ಪಕ್ಷದ ಪುಕ್ಕಟೆ ಭರವಸೆಗಳಿಗೆ ಮರಳಾಗದೆ ದೇಶದ ಹಾಗೂ ದಾವಣಗೆರೆ ಅಭಿವೃದ್ಧಿ ದೃಷ್ಟಿಯಿಂದ ನನ್ನ ತಾಯಿ ಸಮಾನರಾದ ಶ್ರೀಮತಿ ಗಾಯತ್ರಿ‌‌ ಸಿದ್ದೇಶ್ವರ್ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚೇತಕ ಶಿವಯೋಗಿಸ್ವಾಮಿ ಮಾತನಾಡಿ, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಆಡಳಿತ‌. ಕಾಂಗ್ರೆಸ್ 65 ವರ್ಷಗಳ ಕಾಲ ಮಾಡದ ಅಭಿವೃದ್ಧಿ ಕೆಲಸಗಳನ್ನು ನರೇಂದ್ರ ಮೋದಿ ಅವರು ಕೇವಲ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ. ನಮ್ಮ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದು ಕರೆ ನೀಡಿದರು.

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮಾತನಾಡಿ, ಹಿರಿಯರಾದ  ಎಸ್.ಎ.ರವೀಂದ್ರ ನಾಥ್ ಅವರು ನಮಗೆ ಮಾರ್ಗದರ್ಶಕರು, ಅವರ ನೇತೃತ್ವದಲ್ಲಿ ಚುನಾವಣೆ ನಡೆಸುತ್ತಿದ್ದು, ಈಗಾಗಲೇ ನಾವು ಗೆದ್ದಿದ್ದೇವೆ.‌ ಚುನಾವಣೆ ಫಲಿತಾಂಶದ ದಿನ ನಾವು ಗೆದ್ದು, ಬರೀ ಅಡುಗೆ ಮಾಡೋದಕ್ಕೆ ಅಲ್ಲ, ಅಧಿಕಾರನೂ ಮಾಡ್ತೀವಿ ಅಂತ ತೋರಿಸುತ್ತೇನೆ ಎಂದರು.‌

ಎಲ್ಲೆಲ್ಲಿ ಪ್ರಚಾರ : ಹಳೇಬಾತಿ, ಗುಡ್ಡದ ಕ್ಯಾಂಪ್, ನೀಲಾನಹಳ್ಳಿ,  ಆವರಗೊಳ್ಳ, ಬೂದಿಹಾಳ್, ಕಡ್ಲೆಬಾಳು, ಓಬಜ್ಜಿಹಳ್ಳಿ, ಮಾಗಾನಹಳ್ಳಿ, ಅರಸಾಪುರ, ಚಿತ್ತಾನಹಳ್ಳಿ, ಬಿ.ಕಲಪನಹಳ್ಳಿ, ಎಲೆಬೇತೂರು, ಪುಟಗನಾಳ್, ಕಾಡಜ್ಜಿ, ನಾಗರಕಟ್ಟೆ, ರಾಂಪುರ, ಮಲ್ಲಾಪುರ, ಲಿಂಗದಹಳ್ಳಿ ಸೇರಿದಂತೆ 15 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ಅರಸಾಪುರ ಗ್ರಾಮದಲ್ಲಿ ಲಂಬಾಣಿ ಸಮುದಾಯದ ವಸ್ತ್ರ ತೊಟ್ಟು ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ಅವರು ಸಂಭ್ರಮಿಸಿ, ಮತಯಾಚನೆ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಜಿ.ಎಲ್‌.ರಾಜೀವ್, ಕಡ್ಲೆಬಾಳು ಧನಂಜಯ್, ಶಿವಕುಮಾರ್, ಕೊಳೇನಳ್ಳಿ ಸತೀಶ್, ದೊಗ್ಗಳ್ಳಿ ವೀರೇಶ್, ಸಿದ್ದೇಶ್, ಬಿ.ಎಸ್.ಜಗದೀಶ್, ಸಂಗನಗೌಡರು, ಗ್ಯಾರಳ್ಳಿ ಶಿವಣ್ಣ, ಗಣೇಶ್ ಗೌಡರು, ಮಹಾನಗರ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.‌

error: Content is protected !!