ಒಲ್ಲದ ಮನಸ್ಸಿನ ಸ್ಪರ್ಧೆಗಿಂತ ನನಗೆ ಟಿಕೆಟ್ ಕೊಡಿ

ಒಲ್ಲದ ಮನಸ್ಸಿನ ಸ್ಪರ್ಧೆಗಿಂತ ನನಗೆ ಟಿಕೆಟ್ ಕೊಡಿ

ದಾವಣಗೆರೆ, ಮಾ. 28- ವಿನಯ್ ಕುಮಾರ್ ನಮ್ಮ ಜಿಲ್ಲೆಯವರಲ್ಲ, ಟಿಕೆಟ್ ಬೇಡ ಎಂದು ವರಿಷ್ಠರಿಗೆ ಹೇಳಿದ್ದಾಗಿ ಸಚಿವರು ಮೊನ್ನೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಹೇಳಿದ್ದಾರೆ. ಸಚಿವರು ನನಗೆ ಸಿಗಬೇಕಾದ ಟಿಕೆಟ್ ತಪ್ಪಿಸಿದ್ದಾರೆ ಎಂದಾದರೆ, ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಯುವಕ ಸಂಸದನಾಗುವುದನ್ನು ತಪ್ಪಿಸಿದಂತಾಗಿದೆ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕರೂ, ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಬಿ. ವಿನಯ್ ಕುಮಾರ್ ಹೇಳಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದವರ ಧ್ವನಿಯಾಗಿ ಓರ್ವ ಯುವಕನನ್ನು ಸಂಸತ್‌ಗೆ ಕಳುಹಿಸುವ ಅವಕಾಶ ಸಚಿವರಿಗಿತ್ತು.  ಈಗಲೂ ಕಾಲ ಮಿಂಚಿಲ್ಲ. ಕ್ಷೇತ್ರದಲ್ಲಿ ಶೇ. 80ರಷ್ಟಿರುವ  ಹಿಂದುಳಿದ ವರ್ಗದ ಜನರ ಪ್ರೀತಿ, ವಿಶ್ವಾಸ ಹೆಚ್ಚಾಗಬೇಕಾದರೆ ನನಗೆ ಟಿಕೆಟ್ ಕೊಡಿಸಿ ಎಂದರು.

ಸೂಕ್ತ ಅಭ್ಯರ್ಥಿ ಎಂದು ತಮ್ಮ ಕುಟುಂಬಕ್ಕೆ ವರಿಷ್ಠರೇ ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದಾರೆ ಎಂದೂ ಸಚಿವರು ಹೇಳಿದ್ದಾರೆ.  ಹಾಗಾದರೆ ಅದು ಇಷ್ಟ ಇರದಿದ್ದರೂ ಬಂದಿರುವ ಟಿಕೆಟ್.  ಹೀಗಾಗಿ ಒಲ್ಲದ ಮನಸ್ಸಿನಿಂದ ಸ್ಪರ್ಧಿಸುವ ಬದಲು ಆಸಕ್ತಿ ಇರುವ ನನಗೆ ಟಿಕೆಟ್ ಕೊಡಿಸಿ. ನಾನು ಗೆದ್ದು, ಅಭಿವೃದ್ದಿ ಮಾಡಿ ತೋರಿಸುತ್ತೇನೆ ಎಂದರು.

ಈಗಿನ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಕಷ್ಟ. ಹಿಂದಿನ ಬಾರಿ ಟಿಕೆಟ್ ತಪ್ಪಿರುವ ಕುರಿತು ಜನರಲ್ಲಿ ಕೋಪವಿದೆ. ಹಿಂದುಳಿದ ವರ್ಗದ ಜನರು ನೋಟಾಕ್ಕೆ ಅಥವಾ ಬಿಜೆಪಿಗೆ ಮತ ನೀಡಬಹುದು. ಆದರೆ  ನಾನು ಶೇ.100ರಷ್ಟು ಗೆಲ್ಲುವ ಅಭ್ಯರ್ಥಿ. ನನಗೆ ಟಿಕೆಟ್ ತಪ್ಪಿಸಿ ಈಗ ಗೆಲ್ಲಲು ಹೋ ರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ವಿನಯ್ ಹೇಳಿದರು.

ನಾನು ಹುಟ್ಟಿದ್ದು ಬೆಳೆದಿದ್ದು ಕಕ್ಕರಗೊಳ್ಳದಲ್ಲಿಯೇ ನನ್ನ ತಂದೆ ಹಾಗೂ ತಾಯಿಯ ಸಂಬಂಧಿಗಳೂ ಈ ಜಿಲ್ಲೆಯಲ್ಲಿದ್ದಾರೆ. ಹೀಗಾಗಿದ್ದಾಗ ನಾನು ಹೊರ ಜಿಲ್ಲೆಯವನಾಗಲು ಹೇಗೆ ಸಾಧ್ಯ ? ಎಂದು ವಿನಯ್ ಪ್ರಶ್ನಿಸಿದರು.

ಜನಾಭಿಪ್ರಾಯ ಸಂಗ್ರಹಿಸಿ ನಂತರ ಪಕ್ಷೇತರ ಸ್ಪರ್ಧೆ ನಿರ್ಧಾರ: ಪಕ್ಷೇತರವಾಗಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಂಚರಿಸಿ ಜನಾಭಿ ಪ್ರಾಯ ಕೇಳುತ್ತಿದ್ದೇನೆ.  ಶೇ.90ರಷ್ಟು ಜನರು ಪಕ್ಷೇತರವಾಗಿ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಇನ್ನೂ ಕೆಲ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹಿಸುತ್ತೇನೆ.

ಈಗಾಗಲೇ ಹೋಗಿರುವ ಎಲ್ಲಾ ಹಳ್ಳಿಗಳಲ್ಲಿ ಜನರು ನಿನಗೆ ಅನ್ಯಾಯವಾಗಿದೆ. ಪಕ್ಷೇತರರಾಗಿ ಸ್ಪರ್ಧಿಸಿ ಎಂದೇ ಒತ್ತಾಯಿ ಸುತ್ತಿದ್ದಾರೆ. ಇನ್ನೂ ಕೆಲವು ಕ್ಷೇತ್ರಗಳಿಗೆ ಹೋಗಿ ಅಭಿಪ್ರಾಯ ಸಂಗ್ರಹಿಸುತ್ತೇನೆ. ಪಕ್ಷೇತರವಾಗಿ ಸ್ಪರ್ಧಿಸುವುದು ಕಷ್ಟ. ಆದಾಗ್ಯೂ ನನ್ನ ಗೆಲುವು ನಿಶ್ಚಿತ ಎಂದಾದರೆ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ ಎಂದು ವಿನಯ್ ಕುಮಾರ್ ಹೇಳಿದರು.

ನನ್ನ ಸ್ಪರ್ಧೆ ಪಾಳೇಗಾರಿಕೆ ಹಾಗೂ ಕುಟುಂಬ ರಾಜಕಾರಣದ ವಿರುದ್ಧವೇ ಹೊರತು, ಕಾಂಗ್ರೆಸ್ ವಿರುದ್ಧವಲ್ಲ. ಚುನಾ ವಣೆಯಲ್ಲಿ ಗೆದ್ದು ಮತ್ತೆ ನಾವು ಕಾಂಗ್ರೆಸ್ ಸೇರುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೇಮಂತ್ ಕುಮಾರ್, ರಂಗಸ್ವಾಮಿ, ಶರತ್ ಕುಮಾರ್, ಹೆಚ್.ಸಿ. ಮಲ್ಲಪ್ಪ, ಪುರಂದರ್ ಲೋಕಿಕೆರೆ, ರವಿ ಕುಮಾರ್, ಕೆ.ಹೆಚ್. ಮಂಜುನಾಥ್ ಇದ್ದರು.

error: Content is protected !!