ದೇವನಗರಿಯಲ್ಲಿ ಹೋಳಿ ಸಂಭ್ರಮ

ದೇವನಗರಿಯಲ್ಲಿ ಹೋಳಿ ಸಂಭ್ರಮ

ದಾವಣಗೆರೆ, ಮಾ. 25- ಮಿತಿ ಮೀರಿದ ಸಂಭ್ರಮ, ಒಂದಿಷ್ಟು ವಿಕೃತಿಗಳ ನಡುವೆ ನಗರದಲ್ಲಿ ಸೋಮವಾರ ಹೋಳಿ ಹಬ್ಬ ಜರುಗಿತು.

ಮಕ್ಕಳು, ಯುವಕ, ಯುವತಿಯರು, ವೃದ್ಧರಾದಿಯಾಗಿ ಬಣ್ಣದಾಟದಲ್ಲಿ ಮಿಂದೆದ್ದರು.  ಪರಸ್ಪರ ಬಣ್ಣ ಹಚ್ಚುತ್ತಾ ಹ್ಯಾಪಿ ಹೋಳಿ ಎನ್ನುತ್ತಾ ಸಂಭ್ರಮಿಸಿದರು. ಬೆಳಿಗ್ಗೆ 8 ಗಂಟೆಯಿಂದಲೇ ರಂಗಿನಾಟ ಶುರುವಾಯಿತು. ಮಧ್ಯಾಹ್ನ 1 ಗಂಟೆಯಾದರೂ `ಬಣ್ಣದ’ ಯುವಕರು ಬೈಕ್‌ಗಳಲ್ಲಿ ತಿರುಗಾಡುತ್ತಿದ್ದರು.

10 ಗಂಟೆ ವೇಳೆಗೆ ರಾಂ ಅಂಡ್ ಕೋ ವೃತ್ತಕ್ಕೆ  ಯುವಕ-ಯುವತಿಯರ ಪಡೆ ಹರಿದು ಬರಲಾರಂಭಿಸಿತು. ಪ್ರತಿ ವರ್ಷದಂತೆಯೇ ಈ ವರ್ಷವೂ ಬಿಸಿಲನ್ನೂ ಲೆಕ್ಕಿಸದೆ ಡಿಜೆ ಸದ್ದಿಗೆ ಯುವಕರು ಹೆಜ್ಜೆ ಹಾಕಿದರು. ಕುಣಿತದ ಕಿಚ್ಚು ಹೆಚ್ಚಿಸಲು ಮೇಲಿನಿಂದ ಕಾರಂಜಿಯಂತೆ ನೀರು ಸಿಂಪಡಿಸುವ ವ್ಯವಸ್ಥೆ ಮಾಡಲಾಗಿತ್ತು.

ವೃತ್ತದಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನದ ಎಡ ಭಾಗದಲ್ಲಿ ಯುವತಿಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮನೆಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಹೋಳಿ ಆಡಿ ಬಂದ ಯುವತಿಯರು ಇಲ್ಲಿಯೂ ಡಿಜೆ ಸದ್ದಿಗೆ ಯುವಕರನ್ನು ನಾಚಿಸುವಂತೆ ಕುಣಿದು ಕುಪ್ಪಳಿಸಿದರು.  ಬಿಸಿಲಿನ ಕಾರಣದಿಂದಾಗಿ ಈ ಬಾರಿ ರಾಂ ಅಂಡ್ ಕೋ ವೃತ್ತದಿಂದ ಎವಿಕೆ ಕಾಲೇಜು ಮಾರ್ಗದ ರಸ್ತೆಗೆ ಪೆಂಡಾಲ್ ಹಾಕಿಸಲಾಗಿತ್ತು. ಚಿಕ್ಕ ಮಕ್ಕಳನ್ನು ಕರೆತಂದಿದ್ದ ಪೋಷಕರು ಅವರಿಂದ ನೃತ್ಯ ಮಾಡಿಸಿ, ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು. 

ರಾಂ ಅಂಡ್ ಕೋದಲ್ಲಿನ ಯುವಕ-ಯುವತಿಯರ ನೃತ್ಯವನ್ನು ನೆರೆದಿದ್ದವರು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಸ್ನೇಹಿತರು, ಬಂಧುಗಳೊಂದಿಗೆ ಹಂಚಿಕೊಂಡರು.  ಕೆಲವರು ಸುತ್ತಲೂ ಇದ್ದ ಕಟ್ಟಡಗಳನ್ನು ಏರಿ ಹೋಳಿ ಸಂಭ್ರಮ ವೀಕ್ಷಿಸಿದರು. ಪರ ಊರಿನಲ್ಲಿದ್ದವರು `ನಮ್ಮ ದಾವಣಗೆರೆ,  ನಮ್ಮ ರಾಂ ಅಂಡ್ ಕೋ’ ಇತ್ಯಾದಿ ಶೀರ್ಷಿಕೆಯಡಿ ವೀಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡು ಖುಷಿ ಪಟ್ಟರು.

ನಿಟುವಳ್ಳಿ, ಕೆಟಿಜೆ ನಗರ, ಜಾಲಿ ನಗರ, ಪಿ.ಜೆ. ಬಡಾವಣೆ, ಎಂ.ಸಿ. ಕಾಲೋನಿ, ವಿನೋಬನಗರ, ಕಾಡಪ್ಪರ ಕಣ, ಡಿಸಿಎಂ ಟೌನ್‌ ಶಿಪ್ ಮೊದಲಾದ ಕಡೆ ಹೋಳಿಯ ಸಂಭ್ರಮ ಹೆಚ್ಚಾಗಿತ್ತು. ಬಿಐಇಟಿ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ನೂತನ ಕಾಲೇಜು ರಸ್ತೆ ಬಳಿಯ ಯುವಕ-ಯುವತಿಯರ ಹಾಸ್ಟೆಲ್‌ಗಳಲ್ಲಿ ಹೋಳಿ ಜೋರಾಗಿತ್ತು.

ನಿಜಲಿಂಗಪ್ಪ ಬಡಾವಣೆ ಬಳಿಯ ರಿಂಗ್ ರಸ್ತೆಯಲ್ಲಿ ಏನಿಲ್ಲಾ ಏನಿಲ್ಲಾ ಹಾಡಿಗೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಬಣ್ಣ ಹಚ್ಚಿಕೊಂಡು ನೃತ್ಯ ಮಾಡಿ ಸಂಭ್ರಮಿಸಿದರು.

error: Content is protected !!