ರೈತರಿಂದ ಶಿರಮಗೊಂಡನಹಳ್ಳಿ ಬ್ರಿಡ್ಜ್ ಬಳಿ ರಸ್ತೆ ತಡೆ, ಪ್ರತಿಭಟನೆ
ದಾವಣಗೆರೆ, ಮಾ. 25- ಭದ್ರಾ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 5 ದಿನಗಳಾದರೂ ಕಾಲುವೆಯಲ್ಲಿ ನೀರು ಬಂದಿಲ್ಲ ಎಂದು ಆಕ್ರೋಶಗೊಂಡ ರೈತರು ಶಿರಮಗೊಂಡನಹಳ್ಳಿ ಬ್ರಿಡ್ಜ್ ಬಳಿ ಇರುವ ಕಾಲುವೆಗೆ ಆಗಮಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಕರ್ನಾಟಕ ನೀರಾವರಿ ನಿಗಮದ ಎಕ್ಸಿಕ್ಯೂಟೀವ್ ಇಂಜಿನಿಯರ್ ಆರ್. ಮಂಜುನಾಥರವರೊಂದಿಗೆ ವಾಗ್ವಾದಕ್ಕಿಳಿದರು.
ಜಲಾಶಯದಿಂದ ನೀರು ಹರಿಸಿ 2ನೇ ದಿನಕ್ಕೆ ಶಿರಮಗೊಂಡನಹಳ್ಳಿ ಕಾಲುವೆಗೆ ನೀರು ಬರುತ್ತಿತ್ತು. ಈಗ 5 ದಿನಗಳಾದರೂ ಬಂದಿಲ್ಲ. ಹೋಳಿ ಹಬ್ಬ ಆಚರಣೆ ಮಾಡಿಕೊಂಡ ಹುಡುಗರು ಕಾಲುವೆ ನೀರಿನಲ್ಲಿ ಮುಳುಗಿ ಸ್ನಾನ ಮಾಡುತ್ತಿದ್ದರು. ಕೆಲವರು ಮೇಲಿಂದ ಡೈ ಹೊಡೆಯುತ್ತಿದ್ದರು. ಈಗ ಕೈ ಕಾಲು ತೊಳೆಯಲು ನೀರಿಲ್ಲ ಎಂದು ಕೂಗಾಡಿದರು. ನಂತರ ಸಮಾಧಾನವಾದ ರೈತ ರನ್ನು ಕರೆದುಕೊಂಡು ಜಿಲ್ಲಾಧಿಕಾರಿ ಬಳಿಗೆ ಹೋದರು.
ಜಿಲ್ಲಾಧಿಕಾರಿಯವರು ಪೊಲೀಸ್ ವರಿಷ್ಠಾಧಿ ಕಾರಿ ಉಮಾ ಪ್ರಶಾಂತ್, ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಟೇಲ್, ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಮತ್ತು ನೀರಾವರಿ ಎಕ್ಸಿ ಕ್ಯೂಟಿವ್ ಇಂಜಿನಿಯರ್ ಆರ್. ಮಂಜುನಾಥ ರವರೊಂದಿಗೆ ರೈತರ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ನಮ್ಮ ಜಿಲ್ಲೆಗೆ ಬರಬೇಕಾದ ಪ್ರಮಾಣದಲ್ಲಿ ನೀರು ಹರಿಸುತ್ತಿಲ್ಲ. ಶಿವಮೊಗ್ಗ ಜಿಲ್ಲೆಗೆ ಒಂದು ವೇಳಾಪಟ್ಟಿ ದಾವಣಗೆರೆ ಜಿಲ್ಲೆಗೆ ಒಂದು ವೇಳಾಪಟ್ಟಿ ಪ್ರಕಟಣೆ ಮಾಡಿರುವುದು ತಾರತಮ್ಯದ ನೀತಿಯಾಗಿದೆ. ಭದ್ರಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ ಎಂದು ಹೇಳಿದರು.
ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಅಕ್ರಮ ಪಂಪ್ ಸೆಟ್ಗಳ ಹಾವಳಿ ವಿಪರೀತವಾಗಿದೆ. ತೆರವು ಕಾರ್ಯಾಚರಣೆ ಕೇವಲ ನೆಪ ಮಾತ್ರಕ್ಕೆ ನಡೆಯುತ್ತಿದೆ ಎಂದು ಹೇಳಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟೇಶ್, ಕಾಲುವೆ ಉದ್ದಕ್ಕೂ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಬೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಟೇಲ್ ಅವರಿಗೆ ಕಟ್ಟು ನಿಟ್ಟಿನ ಆದೇಶ ನೀಡಿದರು.
ನೀರಾವರಿ ಇಂಜಿನಿಯರ್ಗಳು ಪೊಲೀಸ್ ರಕ್ಷಣೆಯೊಂದಿಗೆ ಕಾಲುವೆಯಿಂದ ಅಕ್ರಮವಾಗಿ ನೀರು ಎತ್ತುವವರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕೊನೆ ಭಾಗಕ್ಕೆ ನೀರು ತಲುಪಿಸಲು ಅಧಿಕಾರಿಗಳು ಸಮನ್ವಯತೆಯಿಂದ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಆದೇಶಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಜಿ. ಗಣೇಶಪ್ಪ, ಮಾಜಿ ಮೇಯರ್ ಹೆಚ್.ಎನ್. ಗುರುನಾಥ್, ಮುಖಂಡರಾದ ಜಿಮ್ಮಿ ಹನುಮಂತಪ್ಪ, ಬಿ. ಮಹೇಶಪ್ಪ, ಭಾಸ್ಕರ ರೆಡ್ಡಿ, ಆರುಂಡಿ ಪುನೀತ್, ಅಣ್ಣಪ್ಪ, ಹೆಚ್.ಎನ್.ಮಹಾಂತೇಶ, ಹೆಚ್.ಎಸ್. ಸೋಮಶೇಖರ್, ಕ್ಯಾಂಪ್ ನಾಗೇಶ್ವರರಾವ್, ರಾಮಕೃಷ್ಣಪ್ಪ, ಆರನೇಕಲ್ಲು ವಿಜಯಕುಮಾರ್ ಉಪಸ್ಥಿತರಿದ್ದರು.