ಮಾದರಿ ನೀತಿ ಸಂಹಿತೆ ಪಾಲನೆ ಮಾಡಲು ಸೂಚನೆ

ಮಾದರಿ ನೀತಿ ಸಂಹಿತೆ ಪಾಲನೆ ಮಾಡಲು ಸೂಚನೆ

ರಾಜಕೀಯ ಪಕ್ಷಗಳೊಂದಿಗೆ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್‌ ಎಂ.ವಿ.

ದಾವಣಗೆರೆ, ಮಾ. 22 – 18ನೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಆಯೋಗವು ವೇಳಾಪಟ್ಟಿ ಪ್ರಕಟಿಸಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬರುವ ಏಪ್ರಿಲ್ 12 ರಿಂದ ಅಧಿಸೂಚನೆ ಪ್ರಕಟವಾಗಲಿದ್ದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು. 

ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿ ನೀಡಲು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇಳಾಪಟ್ಟಿಯಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭ, ಶಂಕುಸ್ಥಾಪನೆ, ಹೊಸ ಯೋಜನೆಗಳ ಘೋಷಣೆ ಮಾಡುವಂತಿಲ್ಲ ಮತ್ತು ರಾಜಕೀಯ ಪಕ್ಷಗಳು ಸಭೆ, ರಾಲಿಗಳನ್ನು ಆಯೋಜಿಸಲು, ಪೋಸ್ಟರ್, ಬ್ಯಾನರ್ ಅಳವಡಿಸಲು ಆಯಾ ಸಮಾರಂಭದ ಅವಧಿಗೆ ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ ಮತ್ತು ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಚುನಾವಣಾ ಪ್ರಚಾರ ಮಾಡುವುದು ನಿಷಿದ್ಧವಾಗಿರುತ್ತದೆ. 

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1946 ಮತಗಟ್ಟೆಗಳಿದ್ದು, ಇಲ್ಲಿಯವರೆಗೆ 16,79,746 ಮತದಾರರಿದ್ದಾರೆ. ಪ್ರಸ್ತುತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನದ ಹಿಂದಿನ 10 ದಿನಗಳವರೆಗೆ ತಿದ್ದುಪಡಿ, ಸೇರ್ಪಡೆಗೆ ಅವಕಾಶ ಇರುತ್ತದೆ. ಏಪ್ರಿಲ್ 1 ಕ್ಕೆ 18 ವರ್ಷ ತುಂಬುವವರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಸ್ವೀಪ್ ಕಾರ್ಯಕ್ರಮಗಳ ಮೂಲಕ ಹೊಸದಾಗಿ ನೋಂದಾಯಿಸಲಾಗಿದೆ. ನಾಮಪತ್ರ ಸಲ್ಲಿಕೆಯು ಏಪ್ರಿಲ್ 12 ರಿಂದ 19, ಏ.20 ಪರಿಶೀಲನೆ, ಏ.22 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದು, ಮೇ 7 ರಂದು ಮತದಾನ ಮತ್ತು ಎಣಿಕೆಯು ಜೂನ್ 4 ರಂದು ನಡೆಯಲಿದೆ ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿದರು. 

ಮೊದಲ ರಾಂಡಮೈಜೇಷನ್ : ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡುತ್ತಿದ್ದು, ಕ್ಷೇತ್ರದಲ್ಲಿ ಎಂ.3 ಮೇಕ್ 2023 ಮಾದರಿಯ ಮತಯಂತ್ರಗಳ ಬಳಕೆ ಮಾಡಲಾಗುತ್ತಿದೆ. ಇವುಗಳಿಗೆ ಇವಿಎಂ ಟ್ರ್ಯಾಕಿಂಗ್ ಸಾಫ್ಟ್‍ವೇರ್ ಅಳವಡಿಸಲು ಮೊದಲ ರಾಂಡೋಮೈ ಜೇಷನ್ ಮಾರ್ಚ್ 22 ರಂದು ನಡೆಸ ಲಾಗುತ್ತಿದೆ. ಬೆಮೆಲ್ ಕಂಪನಿಯ 2826 ಬ್ಯಾಲೆಟ್ ಯುನಿಟ್, 2339 ಕಂಟ್ರೋಲ್ ಯುನಿಟ್, 2534 ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಿ ಮೊದಲ
ರಾಂಡಮೈಜೇಷನ್ ನಡೆಸಲಾಯಿತು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೈಯದಾ ಅಫ್ರಿನ್ ಬಾನು ಎಸ್.ಬಳ್ಳಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

error: Content is protected !!