ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್
ದಾವಣಗೆರೆ, ಮಾ.22- ಸರಕು ಮತ್ತು ಸೇವೆಗಳ ಸೇವಾ ನ್ಯೂನತೆ ವಿರುದ್ಧ ರಕ್ಷಣೆ ಪಡೆಯುವ ಹಕ್ಕುಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಗ್ರಾಹಕರನ್ನು ರಕ್ಷಿಸಲು ಸರಕು ಮತ್ತು ಸೇವೆಯ ಗುಣಮಟ್ಟ, ಪ್ರಮಾಣ ಮತ್ತು ದರ ಕುರಿತು ಪ್ರಶ್ನಿಸಲು ಪ್ರತಿಯೊಬ್ಬ ಗ್ರಾಹಕರಿಗೂ ಸಂರಕ್ಷಣಾ ಹಕ್ಕುಗಳ ಅರಿವು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವಾಣಿಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ಇವರ ಸಂಯು ಕ್ತಾಶ್ರಯದಲ್ಲಿ ನಗರದ ಯುಬಿಡಿಟಿ ಇಂಜಿನಿ ಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರಿಗೆ ಸರಕು, ಸೇವೆಗಳ ಬಗ್ಗೆ ಜಾಗೃತಿ ಇರಬೇಕು. ಗ್ರಾಹಕರು ಸರಕುಗಳನ್ನು ಒದಗಿಸುವ ಮಾರಾಟಗಾರರ ಬಳಿ ಬಂದಾಗ ಆಯಾ ವಸ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕು ಹೊಂದಿರುತ್ತಾನೆ. ವ್ಯಾಪಾರದಾರರಿಂದ ಗ್ರಾಹಕರಿಗೆ ಒದಗಿಸಿದ ಸರಕುಗಳು ಗುಣಮಟ್ಟಕ್ಕೆ ಅನುಗುಣವಾಗಿಲ್ಲದಿದ್ದರೆ, ಖರೀದಿಸಿದ ವಸ್ತುಗಳ ಸಂಪೂರ್ಣ ದಾಖಲೆಗಳನ್ನಿಟ್ಟುಕೊಂಡು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಹೇಳಿದರು.
ಯಾವುದೇ ವಸ್ತುಗಳು ಕಳಪೆಯಿಂದ ಕೂಡಿವೆ, ಸೇವಾ ನ್ಯೂನತೆ ಹೊಂದಿದೆ ಎಂದಲ್ಲಿ ಅದನ್ನು ಗ್ರಾಹಕರ ನ್ಯಾಯಾಲಯದಲ್ಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬ ಗ್ರಾಹಕರು ಬೆಳೆಸಿಕೊಳ್ಳಬೇಕು ಎಂದರು.
ಯಾವುದೇ ವಸ್ತುಗಳನ್ನು ಖರೀದಿಸಿ ಅದಕ್ಕೆ ಸಂಬಂಧಿಸಿದ ಬಿಲ್ ಪಡೆದುಕೊಳ್ಳಬೇಕು. ಬಿಲ್ ಪಡೆದಾಗ ಮಾತ್ರ ನಾವು ಕಳಪೆ, ಸೇವಾ ನ್ಯೂನತೆಯ ವಿರುದ್ಧ ಹೋರಾಟ ಮಾಡಿ ಅದರಿಂದಾದ ನಷ್ಟಕ್ಕೆ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್ ಈರಪ್ಪ ಶಿಗ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ. ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರೂ ಗ್ರಾಹಕರೇ. ಗ್ರಾಹಕರಿಗೆ ನ್ಯಾಯಯುತ, ಯೋಗ್ಯ ಹಾಗೂ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ನೀಡುವ ಜವಾಬ್ದಾರಿ ವ್ಯಾಪಾರಸ್ಥರದ್ದು. ಯಾವುದೇ ವಸ್ತುಗಳನ್ನು ಕೊಡುವವನ ತೃಪ್ತಿಗಾಗಿ ಕೊಳ್ಳುವುದಲ್ಲ. ಅಲ್ಲಿ ಗ್ರಾಹಕರ ಸಂತೃಪ್ತಿಯೇ ಮುಖ್ಯ. ಸುರಕ್ಷತೆ, ಆಯ್ಕೆ ಹಾಗೂ ಆರೋಗ್ಯಪೂರ್ಣ ಪರಿಸರ ಹೊಂದುವ ಹಕ್ಕನ್ನು ಗ್ರಾಹಕರ ಸಂರಕ್ಷಣಾ ಕಾಯ್ದೆಯು ಎಲ್ಲ ಗ್ರಾಹಕರಿಗೂ ನೀಡಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ವ್ಯಾಪಾರಸ್ಥರು ವಸ್ತುಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ದರ ಪಡೆಯುವಂತಿಲ್ಲ. ವಸ್ತುಗಳು ದೋಷದಿಂದ ಕೂಡಿದ್ದರೆ ಪ್ರಶ್ನೆ ಮಾಡುವ ಹಕ್ಕು ಗ್ರಾಹಕರಿಗಿದೆ. ಅವಧಿ ಮೀರಿದ ಉತ್ಪನ್ನಗಳನ್ನು ನೀಡಿದರೆ ಅಂತಹವರ ಮೇಲೆ ಗ್ರಾಹಕರ ಆಯೋಗದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಪಡೆಯಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿಯಬೇಕು ಎಂದರು.
ಆಹಾರ ಇಲಾಖೆ ಉಪ ನಿರ್ದೇಶಕ ಸಿದ್ದರಾಮ್ ಮಾರಿಹಾಳ್ ಸ್ವಾಗತಿಸಿದರು. ಯುಬಿಡಿಟಿ ಕಾಲೇಜಿನ ಪ್ರಾಧ್ಯಾಪಕರಾದ ಮೊಹಮದ್ ರಫೀ ಉಪನ್ಯಾಸ ನೀಡಿದರು.
ಜಿಲ್ಲಾ ಗ್ರಾಹಕರ ವಾಣಿಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಸಿ ಎಸ್. ತ್ಯಾಗರಾಜನ್, ಬಿ.ವಿ. ಗೀತಾ, ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ಡಾ.ಡಿ.ಪಿ.ನಾಗರಾಜಪ್ಪ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಘದ ಡೀನ್ ಮಂಜಾನಾಯಕ್ ಎನ್, ಡಿಸಿಐಸಿ ಅಧ್ಯಕ್ಷರಾದ ಅನಿತಾ ಹೆಚ್, ಆಹಾರ ಇಲಾಖೆಯ ಸಹ ನಿರ್ದೇಶಕ ಶಿವಾಜಿ ಟಿ, ಆಹಾರ ನಿರೀಕ್ಷಕರು ಮಂಜುನಾಥ ಮತ್ತಿತರರು ಭಾಗವಹಿಸಿದ್ದರು.