ದಾವಣಗೆರೆ, ಮಾ. 22- ಒಂದೇ ಮನೆಗೆ ಮೂರು – ಮೂರು ಅಧಿಕಾರ ಅಂದರೆ ಜನ ಒಪ್ಪೋದಿಲ್ಲ. ಶಾಮನೂರು ಮನೆಯಲ್ಲಿ ಈಗಾಗಲೇ ಇಬ್ಬರು ಅಧಿಕಾರದಲ್ಲಿದ್ದಾರೆ. ಈಗ ಮೂರನೇ ವ್ಯಕ್ತಿಗೆ ಅಧಿಕಾರ ಅಂದರೆ ಯಾರೂ ಒಪ್ಪೋದಿಲ್ಲ. ಹೀಗಾಗಿ ಈ ಬಾರಿ ದಿ.ಜಿ.ಮಲ್ಲಿಕಾರ್ಜುನಪ್ಪ ಅವರ ಸೊಸೆಯನ್ನು ಗೆಲ್ಲಿಸಬೇಕು ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನ ಪಡೆದ ಬಳಿಕ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ದೇವಿ ಆಶೀರ್ವಾದ ನಮ್ಮ ಮೇಲಿದೆ, ಗಾಯತ್ರಿ ಸಿದ್ದೇಶ್ವರ ಅವರು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು.
ಶಾಮನೂರು ಶಿವಶಂಕರಪ್ಪ ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕಾಂಗ್ರೆಸ್ ಟೆಕೆಟ್ ನೀಡಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದೇಶ್ವರ, ಎಲ್ಲಾ ಅಧಿಕಾರ ಅವರಿಗೆ ಬೇಕು ಅನ್ನೋ ಮನಸ್ಥಿತಿಯಲ್ಲಿದ್ದಾರೆ. ಯಾರಾದರೂ ಸಾಮಾನ್ಯ ಕಾರ್ಯಕರ್ತನಗೆ ಟಿಕೆಟ್ ಬಿಟ್ಟುಕೊಡಬಹುದಿತ್ತು. ಜಿ.ಮಲ್ಲಿಕಾರ್ಜುನಪ್ಪ ಅವರ ಫ್ಯಾಮಿಲಿಯಲ್ಲಿ ಯಾರೂ ಅಧಿಕಾರದಲ್ಲಿ ಇಲ್ಲ. ಹೀಗಾಗಿ ಜನ ಜಿ.ಎಂ. ಸೊಸೆಯನ್ನು ಗೆಲ್ಲಿಸಿ ಕಳುಹಿಸಲು ಸಿದ್ದರಾಗಿದ್ದಾರೆ ಎಂದು ಹೇಳಿದರು.
ರೇಣುಕಾಚಾರ್ಯ ಅಂಡ್ ಟೀಂ ರೆಬಲ್ ಸ್ಪರ್ಧೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದೇಶ್ವರ ಅವರು, ಕರುಣಾಕರ ರೆಡ್ಡಿ ನಮ್ಮ ಸ್ನೇಹಿತರು, ರವೀಂದ್ರನಾಥ್ ಅವರು ಹಿರಿಯರು, ಮಾರ್ಗದರ್ಶಕರು, ಮಾಡಾಳ್ ವಿರೂಪಾಕ್ಷಪ್ಪ, ರೇಣುಕಾಚಾರ್ಯ ಸೇರಿದಂತೆ ಎಲ್ಲರೂ ನನ್ನ ಮಿತ್ರರು. ನನ್ನ ಪತ್ನಿ ಎಲ್ಲರನ್ನೂ ಭೇಟಿಯಾಗಿ ಮಾತನಾಡಿದ್ದಾರೆ. ಅವರೆಲ್ಲರೂ ಬೆಂಬಲ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.