ದಾವಣಗೆರೆ, ಮಾ.21- ಮಹಾಪಾಲಿಕೆಯ ಆಡಳಿತರೂಡ ಕಾಂಗ್ರೆಸ್ ಪಕ್ಷವು ನಗರದ ಜನರ ದಾಹ ತಣಿಸುವಲ್ಲಿ ವಿಫಲವಾಗಿದೆ ಎಂದು ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್ ಕಿಡಿಕಾರಿದ್ದಾರೆ.
ಕಳೆದ ಎರಡು ದಿನಗಳಿಂದ ನಗರದ 25ಕ್ಕೂ ಅಧಿಕ ವಾರ್ಡ್‌ಗಳಲ್ಲಿ ನೀರಿನ ಬರ ಹೆಚ್ಚಾಗಿದೆ. ಬೇಸಿಗೆಯಲ್ಲಿ ನೀರು ಪೂರೈಸುವ ದೃಷ್ಟಿಯಿಂದ 2ತಿಂಗಳ ಮುಂಚೆಯೇ ನೀರನ್ನು ಸಂಗ್ರಹಿಸಬೇಕಿತ್ತು ಎಂದು ದೂರಿದರು.
ಪ್ರತಿ ದಿನ ನಗರಕ್ಕೆ ಕನಿಷ್ಠ 60ಎಂಎಲ್‌ಡಿ ಪ್ರಮಾಣದ ನೀರಿನ ಅವಶ್ಯಕತೆ ಇದ್ದು, ಇಲ್ಲಿನ ರಾಜನಹಳ್ಳಿ ಕೆರೆ ಬರಿ ದಾಗಿದೆ. ಕುಂದವಾಡ ಕೆರೆ ಮತ್ತು ಟಿವಿ ಸ್ಟೇಷನ್ ಕೆರೆ ಯಲ್ಲೂ ನೀರಿನ ಮಟ್ಟ ಕಡಿಮೆಯಾಗಿದೆ ಇದಕ್ಕೆಲ್ಲ ಮುಖ್ಯ ಕಾರಣ ಆಡಳಿತ ಪಕ್ಷದ ಬೇಜವಾಬ್ದಾರಿ ಎಂದು ಟೀಕಿಸಿದರು.
ಬೇಸಿಗೆಗಾಗಿ ನೀರು ಸಂಗ್ರಹಿಸುವಂತೆ ಜನವರಿಯಲ್ಲಿ ಜಿಲ್ಲಾಡಳಿತಕ್ಕೆ ಎರಡು ಬಾರಿ ಮನವಿ ಸಲ್ಲಿಸಲಾಗಿತ್ತು. ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ದುರ್ಗಾಂಬಿಕಾ ಜಾತ್ರೆ ಮತ್ತು ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರೂ ಕಾಂಗ್ರೆಸ್ ಇಲ್ಲಿನ ಜನರಿಗೆ ಬರದ ಗ್ಯಾರಂಟಿ ನೀಡಿದೆ ಎಂದು ಹೇಳಿದರು.
ಈ ಕೂಡಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಈ ಕುರಿತು ಸರ್ಕಾರದ ಗಮನಕ್ಕೆ ತಂದು, ಮುಂದಿನ 45 ದಿನಗಳಿಗೆ ಡ್ಯಾಮ್‌ನಿಂದ ನೀರು ಹರಿಸುವಂತೆ ಕ್ರಮ ಕೈಗೊಳ್ಳುವ ಜತೆಗೆ ನೀರಿನ ವ್ಯತ್ಯಯ ಉಂಟಾದ ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಸಬೇಕು ಇಲ್ಲದಿದ್ದರೇ ಹೋರಾಟ ಮಾಡುವುದಾಗಿ ಎಚ್ಚರಿಸಿದರು.