ದಾವಣಗೆರೆ, ಮಾ. 21- ಪಕ್ಷದ ವರಿಷ್ಠರು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸದೇ ಹೋದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಬಿಜೆಪಿಯ ಬಂಡಾಯ ಬಣದ ಮುಖಂಡರು ಹೇಳಿದ್ದಾರೆ.
ನಗರದ ವಿದ್ಯಾನಗರದಲ್ಲಿರುವ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಅವರ ನಿವಾಸದಲ್ಲಿ ಗುರುವಾರ ಸಂಜೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ಮತ್ತೆ ಸಭೆ ನಡೆಸಿದ ಮುಖಂಡರು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಮಾತ ನಾಡಿ, ದೇಶದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಪ್ರಧಾನಿಯಾಗ ಬೇಕು ಎಂಬುದು ನಮ್ಮೆಲ್ಲರ ಒತ್ತಾಸೆಯಾಗಿದೆ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾಯಿಸಬೇಕು ಎಂಬುದು ನಮ್ಮ ಹಾಗೂ ಕ್ಷೇತ್ರದ ಮತದಾರರ ಒತ್ತಾಯವಾಗಿದೆ. ರಾಜಕೀಯದಲ್ಲಿ ಯಾವುದೇ ಕ್ಷಣದಲ್ಲಿ ಏನಾದರೂ ಆಗಬಹುದು ಆದ್ದರಿಂದ ವರಿಷ್ಠರು ಅಭ್ಯರ್ಥಿಯನ್ನು ಬದಲಿಸುವ ನಿರೀಕ್ಷೆಯೂ ಇದೆ ಎಂದರು.
ಒಂದು ವೇಳೆ ಅಭ್ಯರ್ಥಿಯನ್ನು ಬದಲಿಸದಿದ್ದರೆ ಮುಂದಿನ ವಾರ ಎಲ್ಲಾ ಮಠಾಧೀಶರನ್ನು ಭೇಟಿ ಮಾಡಿ, ಅವರ ಆಶೀರ್ವಾದ ಪಡೆದು, ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಳಿಸಿ ಗೆಲ್ಲಿಸುತ್ತೇವೆ ಎಂದು ಕರುಣಾಕರ ರೆಡ್ಡಿ ಹೇಳಿದರು.
ಅಭ್ಯರ್ಥಿ ಯಾರೆಂದು ಈಗಲೇ ಹೇಳುವುದಿಲ್ಲ: ರವೀಂದ್ರನಾಥ್
ಅರ್ಜಿ ಹಾಕುವ ಕೊನೆ ದಿನದವರೆಗೂ ಸಮಯವಿದೆ. ಅಲ್ಲಿಯವರೆಗೂ ಕಾಯುತ್ತೇವೆ ನಂತರ ಅರ್ಜಿ ಸಲ್ಲಿಸುತ್ತೇವೆ. ನಾವು 11 ಜನ ಸಮಿತಿಯಲ್ಲಿದ್ದೇವೆ. ಅದರಲ್ಲಿ ಒಬ್ಬರು ಅಭ್ಯರ್ಥಿಯಾಗಲಿದ್ದಾರೆ. ಆದರೆ ಈಗಲೇ ಯಾರೆಂದು ಹೇಳುವುದಿಲ್ಲ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದ್ದಾರೆ.
ಸಮಸ್ಯೆ ಸರಿಪಡಿಸುವ ಕುರಿತು ವರಿಷ್ಠರು ಕೇವಲ ಪೋನ್ನಲ್ಲಿ ಮಾತನಾಡುತ್ತಿದ್ದಾರೆ. ನೇರವಾಗಿ ಮಾತನಾಡಲಿ ಎಂದರು.
ನಮ್ಮದು ಬಂಡಾಯವಲ್ಲ ಎಂದ ರವೀಂದ್ರನಾಥ್, ಅಭ್ಯರ್ಥಿ ಬದಲಿಸದಿದ್ದರೆ ಬಿಜೆಪಿಯವರೇ ಅರ್ಜಿ ಸಲ್ಲಿಸಿ ಕಣಕ್ಕಿಳಿಯಲಿದ್ದಾರೆ. ಅವರನ್ನು ಗೆಲ್ಲಿಸುತ್ತೇವೆ ಎಂದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಹಲವು ಸಭೆಗಳ ನಂತರ ಇದೀಗ ಅಂತಿಮ ನಿರ್ಧಾರಕ್ಕೆ ಬಂದಿದ್ದೇವೆ. ಹೋಳಿ ಹಬ್ಬದ ನಂತರ ಜಿಲ್ಲೆಯ ಮಠಾಧೀಶರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು, ಅಭ್ಯರ್ಥಿ ಕಣಕ್ಕಳಿಸುತ್ತೇವೆ.
ದಾವಣಗೆರೆ ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ವಿಸ್ವಾಸವಿದೆ. ನಮ್ಮ ಅಭ್ಯರ್ಥಿ ಗೆಲ್ಲಿಸಿ, ನರೇಂದ್ರ ಮೋದಿ ಅವರ ಕೈ ಬಲಪಡಿಸುತ್ತೇವೆ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬ ಘೋಷಣೆಯಂತೆ ಮುನ್ನಡೆಯುತ್ತೇವೆ ಎಂದರು.
ದಾವಣಗೆಲೆ ಲೋಕಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಉಳಿಯಬೇಕು. ನೊಂದ ಕಾರ್ಯಕರ್ತರಿಗೆ ನ್ಯಾಯ ಕೊಡಬೇಕು. ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಯಾಗಬೇಕು ಎಂಬ ತೀರ್ಮಾನ ನಮ್ಮದು. ಈ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರವಾಸ ಮಾಡುತ್ತೇವೆ ಎಂದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಬಸವರಾಜ ನಾಯ್ಕ, ಮುಖಂಡರುಗಳಾದ ಮಾಡಾಳ್ ಮಲ್ಲಿಕಾರ್ಜುನ್, ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಕೆ.ಎಂ. ಸುರೇಶ್, ಡಾ.ರವಿಕುಮಾರ್, ಕಲ್ಲೇಶ್ ಇತರರು ಈ ಸಂದರ್ಭದಲ್ಲಿದ್ದರು.