ಹಿರಿಯ ಶಾಸಕಶಾಮನೂರು ಶಿವಶಂಕರಪ್ಪ ಅವರು ಬುಧವಾರ ಸಂಜೆ ದೇವಸ್ಥಾನಕ್ಕೆ ಆಗಮಿಸಿ ದುರ್ಗಾಂಬಿಕಾ ದೇವಿ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್, ಉದ್ಯಮಿ
ಎಸ್.ಎಸ್. ಗಣೇಶ್ ಹಾಗೂ ಕುಟುಂಬದವರು ಮಂಗಳವಾರವೇ ದೇವಿ ದರ್ಶನ ಪಡೆದಿದ್ದರು.
ದಾವಣಗೆರೆ, ಮಾ. 20- ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯು ಪ್ರತಿ ವರ್ಷದ ಸಂಪ್ರದಾಯದಂತೆ ಬುಧವಾರವೂ ನೆರವೇರಿತು. ನಸುಕಿನಲ್ಲಿ ದೇವಿಗೆ ಬಲಿಯ ಭಕ್ತಿ ಸಮರ್ಪಣೆ ನಡೆಯುತ್ತಿದ್ದಂತೆ ಚರಗ ಚೆಲ್ಲಲಾಯಿತು.
ಒಂದೆಡೆ ಶಾಸ್ತ್ರ, ಸಂಪ್ರದಾಯಗಳು ಎಂದಿನಂತೆ ಪೂಜಾ ಕಾರ್ಯಗಳು ನಡೆಯುತ್ತಿದ್ದರೆ, ದೇವಸ್ಥಾನದತ್ತ ಭಕ್ತರ ದಂಡೇ ಹರಿದು ಬರಲಾರಂಭಿಸಿತ್ತು. ಉಧೋ ಉಧೋ ದುಗ್ಗಮ್ಮ ಎಂದು ಭಕ್ತಿ ಪರವಶರಾಗಿ ಭಕ್ತರು ಕೂಗುತ್ತಿದ್ದರು. ತಾವು ಹೊತ್ತಿದ್ದ ಹರಕೆ ತೀರಿಸಿದರು.
ಜನರ ಭಕ್ತಿಯ ಮುಂದೆ ಬಿಸಿಲು ಲೆಕ್ಕಕ್ಕೇ ಇಲ್ಲವೆನ್ನುವಂತಾಗಿತ್ತು. ಮಕ್ಕಳು, ಮಹಿಳೆಯರು, ವೃದ್ದರು ಸರದಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಹಣವಿದ್ದವರು, ವಿಐಪಿ ಪಾಸ್ ಇದ್ದವರು ತುಸು ಹತ್ತಿರದ ಸಾಲಿನಲ್ಲಿ ನಿಲ್ಲುತ್ತಿದ್ದರು. ಜನರ ನಿಯಂತ್ರಣಕ್ಕೆ ಪೊಲೀಸರು ಹರ ಸಾಹಸ ಪಡುತ್ತಿದ್ದುದು ಕಂಡು ಬಂತು. ದೇವಸ್ಥಾನದ ಮುಂಭಾಗ ವಿವಿಧ ಆಭರಣ, ಆಟಿಕೆಗಳ ಖರೀದಿಯೂ ಜೋರಾಗಿತ್ತು.
ಇತ್ತ ದಾವಣಗೆರೆ ನಗರದಲ್ಲಿ ಮುಂಜಾನೆಯಿಂದ ಉಸಿರು ನಿಲ್ಲಿಸಿದ ಕೋಳಿ-ಕುರಿಗಳಿಗೆ ಲೆಕ್ಕವೇ ಇರಲಿಲ್ಲ. ಮನೆಗಳ ಮುಂದೆ ರಕ್ತದ ಹೋಳಿ. ಊರ ತುಂಬೆಲ್ಲಾ ಮಾಂಸದ ಘಾಟು.
ಮಾಂಸದ ಅಂಗಡಿಗಳ ಸುತ್ತವೂ ಜನವೋ ಜನ. ಮಾಂಸದ ಅಂಗಡಿಗಳಲ್ಲಿ ಕಟ್…ಕಟ್…ಸದ್ದು, ವ್ಯಾಪಾರಿಯ ಚಾಕುವಿಗೆ ಬಿಡುವೇ ಇರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಜನರ ಮುಖದಲ್ಲಿ ಬಾಡೂಟ ಉಂಡ ತೃಪ್ತಿ. ಸಸ್ಯಹಾರಿಗಳು ಮರುಗಿದರು, ಮಾಂಸಾಹಾರಿಗಳು ಸಂಭ್ರಮಿಸಿದರು.