`ಬಸವಣ್ಣ ಸಾಂಸ್ಕೃತಿಕ ನಾಯಕ’ ಘೋಷಣೆ ಅರ್ಥಪೂರ್ಣ

`ಬಸವಣ್ಣ ಸಾಂಸ್ಕೃತಿಕ ನಾಯಕ’ ಘೋಷಣೆ ಅರ್ಥಪೂರ್ಣ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ವಾಮೀಜಿಗಳ ಅಭಿಮತ

ಹರಿಹರ, ಮಾ. 19 – ಕರ್ನಾಟಕ ಸರ್ಕಾರವು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ವಿವಿಧ ಸ್ವಾಮೀಜಿಗಳು ಹೇಳಿದರು.

ನಗರದ ಸಿದ್ದೇಶ್ವರ ಪ್ಯಾಲೇಸ್‍ನಲ್ಲಿ ನಡೆದ ಸಾಂಸ್ಕೃತಿಕ ನಾಯಕರಾಗಿ ವಿಶ್ವಗುರು ಬಸವಣ್ಣ – ಮಠಾಧೀಶರ ವಿಶೇಷ ಚಿಂತನ ಮಂಥನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವೀರಶೈವ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಶ್ರೀಗಳು ಮಾತನಾಡಿ, ಅಸಮಾನತೆ ವಿರುದ್ಧ ಹೋರಾಡಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಬಣ್ಣಿಸಿರುವುದು ಅರ್ಥಪೂರ್ಣವಾಗಿದೆ ಎಂದರು. 

ಶೂದ್ರರಿಗೆ ದೇವಸ್ಥಾನ ಒಳಗೆ ಪ್ರವೇಶವಿರಲಿಲ್ಲ. ಊರೊಳಗೆ ಬಂದರೆ ಮುಖಕ್ಕೆ ಮಡಿಕೆಯನ್ನು ಹಾಕಿಕೊಂಡು, ಸೊಂಟಕ್ಕೆ ಪೊರಕೆಯನ್ನು ಕಟ್ಟಿಕೊಂಡು ಬರಬೇಕಿತ್ತು. ಮಂತ್ರ ಪಠಿಸಿದರೆ ನಾಲಿಗೆ ಸೀಳುವಂತಹ ಕಾಲಘಟ್ಟದಲ್ಲಿ ಕಾರ್ತಿಕದ ಕತ್ತಲಲ್ಲಿ ಚಂದ್ರ ಉದಯವಾದಂತೆ ಈ ಎಲ್ಲಾ ಅಸಮಾನತೆಗಳನ್ನು ಹೋಗಲಾಡಿಸಲು ಬಸವಣ್ಣನವರು ತಮ್ಮ ವಚನಗಳ ಮೂಲಕ ಪ್ರಯತ್ನಿಸಿದರು ಎಂದರು.

ಬಸವಣ್ಣನವರ ಜಯಂತಿಯನ್ನು ಮೊಟ್ಟ ಮೊದಲು ಆಚರಣೆಗೆ ತಂದಿದ್ದು ಮಹಾ ರಾಷ್ಟ್ರದಲ್ಲಿ. ದಾವಣಗೆರೆಯ ಹರ್ಡೇಕರ್ ಮಂಜಪ್ಪ ಹಾಗೂ ಮೃತ್ಯುಂಜಯ ಅವರು ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ದಾವಣಗೆರೆ ನಗರದಲ್ಲಿ ಬಸವ ಜಯಂತಿ ಆಚರಿಸಿದ್ದರು ಎಂದರು.

ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ, ಜಾತಿಗೊಂದು ದೇವರನ್ನು ಗುರುತಿಸುವ ಈ ಸಮಾಜದಲ್ಲಿ ಬಸವಣ್ಣ ನವರು ದೇವನೊಬ್ಬ ನಾಮ ಹಲವು ಎಂದು ಬಣ್ಣಿಸಿ, ವಿವಿಧತೆಯಲ್ಲಿ ಏಕತೆ ಸಾರಿದರು ಎಂದರು.

ತಮ್ಮ ವಚನಗಳ ಮೂಲಕ ಸಮಾಜ ದಲ್ಲಿರುವ ಹಲವಾರು ನ್ಯೂನತೆಗಳನ್ನು ತೊಡೆದು ಹಾಕಲು ಧ್ವನಿ ಎತ್ತಿದ ಬಸವಣ್ಣನವರನ್ನು ಸರ್ಕಾರವು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಹರ್ಷ ಮೂಡಿಸಿದೆ ಎಂದರು.

ಯಲವಟ್ಟಿ ಶ್ರೀ ಗುರು ಸಿದ್ದಾಶ್ರಮದ ಶ್ರೀ ಯೋಗಾನಂದ ಶ್ರೀಗಳು ಮಾತನಾಡಿ, ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾಯಕ ಮಾಡಿದ್ದು ಇಂದಿಗೂ ಕೂಡ ಪ್ರಸ್ತುತ ಎಂದರು ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಸಿ.ವಿ ಪಾಟೀಲ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಗದೀಶ ಕೂಲಂಬಿ, ತಾಲ್ಲೂಕು ಗೌರವ ಕಾರ್ಯದರ್ಶಿ ಚಿದಾನಂದ ಕಂಚಿಕೆರೆ ಮತ್ತು ಬಿ.ಬಿ. ರೇವಣನಾಯಕ್ ಉಪಸ್ಥಿತರಿದ್ದರು ಸ್ವಾಗತ ಎಂ. ಎ ಚೆನ್ನಬಸಪ್ಪ, ನಿರೂಪಣೆ ಎಲ್. ಜಿ ಮಧು ಕುಮಾರ್, ವಂದನಾರ್ಪಣೆ ಬಸನಗೌಡ ಎಂ.ಎಸ್. ನೆರವೇರಿಸಿದರು.

error: Content is protected !!