ದುಗ್ಗಮ್ಮನ ಜಾತ್ರೆ: ಭಕ್ತಿ, ಸಡಗರ-ಸಂಭ್ರಮ

ದುಗ್ಗಮ್ಮನ ಜಾತ್ರೆ: ಭಕ್ತಿ, ಸಡಗರ-ಸಂಭ್ರಮ

ದಾವಣಗೆರೆ, ಮಾ. 19- ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆ ಆರಂಭಗೊಂಡಿದ್ದು,  ನಗರದಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಸೋಮವಾರ ರಾತ್ರಿಯಿಂದಲೇ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವಿಗೆ ಹೋಳಿಗೆ, ಅನ್ನ- ಮೊಸರು ಎಡೆ ಅರ್ಪಿಸಿ, ದೇವಿಯ ದರ್ಶನ ಪಡೆದು ಧನ್ಯತಾಭಾವ ಹೊಂದಿದರು.

ಮಹಿಳೆಯರು ಕಳಸದಾರತಿ ಹಿಡಿದುಕೊಂಡು, `ದುಗ್ಗಮ್ಮ ನಿನ್ನಾಲ್ಕುದೋ, ಉದೋ’ ಎಂದು  ದೇವಿಯ ನಾಮಸ್ಮರಣೆ ಮಾಡುತ್ತಾ ದೇವಸ್ಥಾನದ ಬಳಿ ತೆರಳಿ ದೀಡು ನಮಸ್ಕಾರ ಮೊದಲಾದ ಹರಕೆ ಸಲ್ಲಿಸುವ ದೃಶ್ಯ ಕಂಡು ಬಂತು.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ವಾಹನ ಪಾರ್ಕಿಂಗ್ ನಿಷೇಧಿಸಲಾಗಿತ್ತು. ದೇವಸ್ಥಾನದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಇಂದು ಮಾಂಸದ್ದೇ ಘಾಟು: ಬೆಣ್ಣೆ ನಗರಿಯಲ್ಲಿ ಇಂದು ಬುಧವಾರ ಬೆಣ್ಣೆ ವಾಸನೆಗಿಂತ ಮಟನ್ ಮಸಾಲೆ ವಾಸನೆಯೇ ಹೆಚ್ಚು.  ಕಳೆದ ಕೆಲ ದಿನಗಳಿಂದ ಮನೆಯ ಮುಂದೆ ಹುಲ್ಲು ತಿನ್ನು ತ್ತಿದ್ದ ಕುರಿಗಳು ಇಂದು ದೇವಿಗೆ ಅರ್ಪಿತವಾಗುವ ಸಮಯ. ನಂತರ ಬಾಡೂಟದ ಸಂಭ್ರಮ. ಮನೆಗಳ ಮುಂದೆ, ತಾರಸಿ ಮೇಲೆ ಎಲ್ಲೆಲ್ಲೂ ಪೆಂಡಾಲ್‌ಗಳನ್ನು ಅಳವಡಿಸಿದ್ದು, ಬೆಳಗಿನ ಜಾವ ಚರಗ ಚೆಲ್ಲುತ್ತಿದ್ದಂತೆ ಸಾವಿರಾರು ಕುರಿ-ಕೋಳಿಗಳ ಬಲಿಗೆ ನಗರ ಸಾಕ್ಷಿಯಾಗಲಿದೆ.

ಕುರಿಗಳ ಚರ್ಮ ಖರೀದಿಸಲು ಚರ್ಮ ವ್ಯಾಪಾರಿಗಳು ನಗರದಲ್ಲಿ ಬೀಡು ಬಿಟ್ಟಿದ್ದಾರೆ. ಪ್ರಾಣಿಗಳ ಬಲಿ ನಡೆಯುತ್ತಿದ್ದಂತೆ ಅವರ ವ್ಯಾಪಾರ ಗರಿಗೆದರುತ್ತದೆ. ಅಂದಾಜಿನ ಪ್ರಕಾರ 300 ರಿಂದ 500 ರೂ.ಗಳ ವರೆಗೆ ಒಂದು ಕುರಿಯ ಚರ್ಮ ಮಾರಾಟವಾಗುತ್ತದೆ.

error: Content is protected !!