ಜಿಲ್ಲಾ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ಜಿಲ್ಲಾ ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ

ರವಿಂದ್ರನಾಥ್ ಮನೆಯಲ್ಲಿ ಸಭೆ, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಬದಲಾವಣೆಗೆ ಒತ್ತಾಯ

ದಾವಣಗೆರೆ, ಮಾ.14- ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಣೆಯಾಗುತ್ತಿದ್ದಂ ತೆಯೇ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ.

ಗುರುವಾರ ಶಿರಮ ಗೊಂಡಹಳ್ಳಿ ಯಲ್ಲಿರುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ನಿವಾಸದಲ್ಲಿ ಬಂಡಾಯದ ಬಣ ಸಭೆ ನಡೆಸಿದ್ದು,  ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ನೀಡಿದ್ದನ್ನು ತೀವ್ರವಾಗಿ ವಿರೋಧಿಸಿ, ದಾವಣ ಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಲು ವರಿಷ್ಠರ ಮೇಲೆ ಒತ್ತಾಯ ಹೇರಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಆರೈಕೆ ಆಸ್ಪತ್ರೆಯ ರವಿಕುಮಾರ್, ಮಾಜಿ ಶಾಸಕ ಬಸವರಾಜ ನಾಯ್ಕ, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್  ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಿದ್ದೇಶ್ವರ ಅವರು ಪಕ್ಷದ ವರಿಷ್ಠರಿಗೆ ತಪ್ಪು ಮಾಹಿತಿ ನೀಡಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕರ್ತರು `ಗೋ ಬ್ಯಾಕ್ ಸಿದ್ದೇಶ್ವರ್’, `ಸಿದ್ದೇಶ್ವರ್ ಹಠಾವೋ ದಾವಣಗೆರೆ ಬಚಾವೋ’ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.  ಏತನ್ಮಧ್ಯೆ ಓರ್ವ ಕಾರ್ಯಕರ್ತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೂ ಯತ್ನಿಸಿದ ಘಟನೆ ನಡೆಯಿತು.

ಜಿ.ಎಂ. ಸಿದ್ದೇಶ್ವರ ಅವರು ತಮ್ಮ ಕುಟುಂಬದಲ್ಲೇ ಅಧಿಕಾರ ಇರಬೇಕು ಅನ್ನುವ ಉದ್ದೇಶದಿಂದ ಅವರ ಪತ್ನಿಗೆ ಟಿಕೆಟ್ ಕೊಡಿಸಿದ್ದಾರೆ. ಈ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕು. ಹೀಗಾಗಿ, ಈಗ ಕೊಟ್ಟಿರುವ ಟಿಕೆಟ್ ಹಿಂಪಡೆಯಬೇಕು ಎಂದು ಕಾರ್ಯಕರ್ತರು ಘೋಷಣೆ ಹಾಕಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನನ್ನನ್ನು ಬಿಟ್ರೆ ದಾವಣಗೆರೆಯಲ್ಲಿ ಶಾಮನೂರು ಮನೆತನದವರ ವಿರುದ್ಧ ಹೋರಾಟ ಮಾಡುವವರು ಯಾರೂ ಇಲ್ಲ ಎಂದು ಸಿದ್ದೇಶ್ವರ ಅವರು ಪಕ್ಷದ ಮುಖಂಡರ ಬಳಿ ಅವರನ್ನು ಅವರೇ ವೈಭವೀಕರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯಲ್ಲಿ ಟಿಕೆಟ್ ರಾಜಕಾರಣಕ್ಕೆ ಅವಕಾಶ ಇಲ್ಲ. ಆದರೆ, ಸಂಸದ ಜಿ.ಎಂ. ಸಿದ್ದೇಶ್ವರ ಅವರ ದುರಹಂಕಾರದಿಂದ ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದಾರೆ. ಆ ಮೂಲಕ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಅವರು ಸದ್ದಾಂ ಹುಸೇನ್‌ನಂತಹ ಮನೋಭಾವನೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಜಿಲ್ಲೆಯ ಎಲ್ಲಾ ನಾಯಕರನ್ನು ಕಡೆಗಣಿಸಿ, ತಾನೇ ದೊಡ್ಡ ನಾಯಕ ಎಂಬಂತೆ ಬಿಂಬಿಸಿಕೊಂಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಅದಕ್ಕಾಗಿ ದಾವಣಗೆರೆ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿ ಎಂದು ವರಿಷ್ಠರಲ್ಲಿ ಮನವಿ ಮಾಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.

ಸಿದ್ದೇಶ್ವರ ಅವರು ಜಿಲ್ಲೆಗೆ ಯಾವುದೇ ವಿಶೇಷ ಯೋಜನೆಗಳನ್ನು ತಂದಿಲ್ಲ, ಅಭಿವೃದ್ಧಿಯನ್ನೂ ಮಾಡಲ್ಲ. ಪಕ್ಷದ ಸಂಘಟನೆಯಲ್ಲೂ ಅವರ ಪಾತ್ರ ಶೂನ್ಯ. ಬಿಜೆಪಿಯನ್ನು ತಮ್ಮ ಕುಟುಂಬಕ್ಕೆ ಅಥವಾ ಜಿಎಂಐಟಿಗೆ ಸ್ಥಳಾಂತರಿಸ ಹೊರಟಿದ್ದಾರೆ ಎಂದರು.

ಲೋಕಸಭಾ ಆಕಾಂಕ್ಷಿ ಟಿ.ಜಿ. ರವಿಕುಮಾರ್ ಮಾತನಾಡಿ, ಕುಟುಂಬ ರಾಜಕಾರಣ, ಸರ್ವಾಧಿಕಾರಿ ಆಡಳಿತ ಮತ್ತು ಹೊಂದಾಣಿಕೆ ರಾಜಕಾರಣ ಮಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಈಗ ಪತ್ನಿಗೆ ಲೋಕಸಭೆಗೆ ಟಿಕೆಟ್ ಕೊಡಿಸಿದ್ದಾರೆ. ಇದನ್ನು ನೋಡಿದರೆ ಪ್ರಜಾಪ್ರಭುತ್ವ ಇಲ್ಲವಾಗಿದೆ ಎಂದರು.

ಮೋದಿ ಆವರು ಆಶಯ,  ಬಿಜೆಪಿ ಸಿದ್ಧಾಂತದಂತೆ ಕೆಲಸ ಮಾಡುವ ಯಾರಿಗೇ ಟಿಕೆಟ್ ನೀಡಲಿ ಅವರಿಗೆ ತನು, ಮನ, ಧನ ಅರ್ಪಿಸಿ ಅವರ ಪರ ಕೆಲಸ ಮಾಡುತ್ತೇವೆ ಎಂದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್ ಬಿ.ಜೆ. ಅಜಯ್ ಕುಮಾರ್ ಮಾತನಾಡಿ, ಸಿದ್ದೇಶ್ವರ ಅವರು ಜಿಲ್ಲೆಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಾಯಕರನ್ನೆಲ್ಲ ದೂರವಿಟ್ಟು  ತಮ್ಮ ಪತ್ನಿಗೆ ಟಿಕೆಟ್ ಕೊಡಿಸಿದ್ದಾರೆ. ಅದಲ್ಲದೇ ಸರ್ವೆಗಳು ಸಿದ್ದೇಶ್ವರಗೆ ವಿರುದ್ಧ ಇದ್ದವು. ಅದನ್ನೆಲ್ಲಾ ಕಡೆಗಣಿಸಿ ಸಿದ್ದೇಶ್ವರ್ ಕುಟುಂಬ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು.

ಲೋಕಿಕರೆ ನಾಗರಾಜ್ ಮಾತನಾಡಿ, ಸಾಕಷ್ಟು ಕಾರ್ಯಕರ್ತರಿದ್ದರೂ ಹೊಸ ಮುಖಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದೆವು. ಇದು ಇಡೀ ಕ್ಷೇತ್ರದ ಮತದಾರರ, ಕಾರ್ಯಕರ್ತರ, ಮುಖಂಡರ ಭಾವನೆಯೂ ಆಗಿತ್ತು. ಬಿಜೆಪಿಯಲ್ಲಿ ಬಾವುಟ ಹಿಡಿದ ಮಹಿಳೆಯರೂ ಬಹಳಷ್ಟು ಜನರಿದ್ದಾರೆ. ಅವರಿಗಾದರೂ ಟಿಕೆಟ್ ಕೊಡಬಹುದಿತ್ತು ಎಂದು ಮತದಾರರೇ ಹೇಳುತ್ತಾರೆ. ಆದರೆ ಪಕ್ಷದಲ್ಲಿ ತೊಡಗಿಸಿಕೊಳ್ಳದವರಿಗೆ ಟಿಕೆಟ್ ನೀಡಲಾಗಿದೆ.

ಅವರೇ ಅಭ್ಯರ್ಥಿಯಾಗಿ ಮುಂದುವರೆದರೆ, ಮನಸ್ಸಿನಲ್ಲಿ ಮೋದಿಯವರಿಗೆ ಕ್ಷಮೆ ಕೇಳಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮತದಾರರು, ಕಾರ್ಯಕರ್ತರು ಹೇಳುತ್ತಿದ್ದಾರೆ. ಆದ್ದರಿಂದ ಇನ್ನೂ ಸಮಯವಿದೆ. ರಾಜ್ಯ ಹಾಗೂ ರಾಷ್ಟ್ರದ ವರಿಷ್ಠರು ಕ್ಷೇತ್ರದ ಅಭ್ಯರ್ಥಿ ಬದಲಿಸಬೇಕು ಎಂದು ಹೇಳಿದರು.

ವಿಧಾನಸಭಾ ಚುನಾವಣಾ ವೇಳೆ ಶಾಸಕರನ್ನು ಗೆಲ್ಲಿಸಿಕೊಂಡು ಹೋಗುವುದು ಸಂಸದರ ಕರ್ತವ್ಯ. ಆದರೆ ಅದನ್ನು ಅವರು ಮನಗಾಣಲಿಲ್ಲ. ಎಂಟೂ ಕ್ಷೇತ್ರಗಳ ಅಭ್ಯರ್ಥಿಗಳು ಚಿಂತನೆ ನಡೆಸಿ, ವರಿಷ್ಠರಿಗೆ ಸಂದೇಶ ರವಾನಿಸುತ್ತೇವೆ ಎಂದು ಮಾಜಿ ಶಾಸಕ ಬಸವರಾಜ ನಾಯ್ಕ ಹೇಳಿದರು.

ರೈತ ಮುಖಂಡ ಶಾಮನೂರು ಲಿಂಗರಾಜ್, ಕೆ.ಎಂ. ಸುರೇಶ್ ಸೇರಿದಂತೆ, ಹಲವರು ಈ ಸಂದರ್ಭದಲ್ಲಿದ್ದರು.

error: Content is protected !!