ರಾಣೇಬೆನ್ನೂರಿನ ಬಿಜೆಪಿ ಪ್ರಚಾರ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ವ್ಯಂಗ್ಯ
ರಾಣೇಬೆನ್ನೂರು,ಮಾ.15- ಕೊಳವೆ ಬಾವಿಗಳು ಖಾಲಿ, ಸರ್ಕಾರದ ಟ್ರಜರಿ ಖಾಲಿ, ವರ್ಷವಾಗುತ್ತಾ ಬಂದರೂ ಒಂದೇ ಒಂದು ಅಭಿವೃದ್ಧಿ ಕೆಲಸ ಇಲ್ಲ. ಸಿದ್ರಾಮಣ್ಣನ ಮಾತುಗಳು ಮಾತ್ರ ಫುಲ್. ಜನರಿಗೆ ಕುಡಿಯುವ ನೀರು ಕೊಡಲಾಗದ ದರಿದ್ರ ಸರ್ಕಾರ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರಿ ಬಸ್ ಕೆಟ್ಟು ನಿಂತಿವೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಬಸ್‌ಗಳಲ್ಲಿ ಸೀಟ್‌ಗಳಿಲ್ಲ, 200 ಯುನಿಟ್ ವಿದ್ಯುತ್ ರಾಜ್ಯದಲ್ಲಿ ಒಬ್ಬರಿಗೂ ಕೊಟ್ಟಿಲ್ಲ, ಯಜಮಾನಿಯ ಎರಡು ಸಾವಿರ ಹಾಗೂ ಯುವನಿಧಿ ಬರುತ್ತಿಲ್ಲ. ಒಟ್ಟಾರೆ ಕಾಂಗ್ರೆಸ್‌ನವರ ಒಂದೂ ಗ್ಯಾರಂಟಿ ಫಲಕಾರಿಯಾಗಿಲ್ಲ. ಒಂದು ಲಕ್ಷ ಕೋಟಿ ಸಾಲ ಮಾಡಿರುವ ಸಿದ್ರಾಮಯ್ಯ ಅವರು ರಾಜ್ಯದ ಜನರ ಮೇಲೆ ಸಾಲದ ಹೊರೆ ಹೊರಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್ ಸರ್ಕಾರ ಇದ್ದಾಗ ನಮ್ಮ ಉದ್ದಾರ ಆಗಲ್ಲ ಎನ್ನುವ ಮನೋಭಾವನೆ ಜನರಲ್ಲಿತ್ತು. ಯಾರು ಬಂದರೂ ಏನು ಮಾಡಲ್ಲಾ ಎಂದು ಬದುಕಿನಲ್ಲಿ ಬೆಳಕು ಕಾಣುವುದನ್ನೇ ಬಿಟ್ಟಿದ್ದ ಈ ಸಮಯದಲ್ಲಿ ನರೇಂದ್ರ ಮೋದಿ ಬಂದು 15 ಕೋಟಿ ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲೆತ್ತಿದರು. 12 ಕೋಟಿ ಕುಟುಂಬಗಳಿಗೆ ಗ್ಯಾಸ್ ಕೊಡಲಾಯಿತು. ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಹೀಗೆ ವಿವಿಧ ಕಾರ್ಯಗಳಿಂದ ದೇಶದ ಬಡವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದರು.
ನಾವು ರಾಜ್ಯದಲ್ಲಿ ಆಡಳಿತ ನಡೆಸಿದಾಗ ಎಪಿಎಂಸಿ ಹೊಸ ಮೆಗಾ ಮಾರ್ಕೆಟ್ ಸೇರಿದಂತೆ ಸಾವಿರಾರು ಕೋಟಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ. ನಾನು ಎಂಪಿ ಆದರೆ ಕೇಂದ್ರದ ಎಲ್ಲ ಯೋಜನೆಗಳನ್ನು ತರುತ್ತೇನೆ. ನಗರವನ್ನು ಸ್ಮಾರ್ಟ್ ಸಿಟಿ ಮಾಡುತ್ತೇನೆ. ನಮ್ಮ ಮಾತುಗಳಿಗಿಂತ ನಮ್ಮ ಕೆಲಸಗಳು ಮಾತುಗಳಾಗಲಿವೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಮಾಜಿ ಸಚಿವ ಸಿ.ಸಿ.ಪಾಟೀಲ, ಶಾಸಕ ಅರವಿಂದ ಬೆಲ್ಲದ, ಪಕ್ಷದ ವಿವಿಧ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಜಿಲ್ಲಾಧ್ಯಕ್ಷ ಅರುಣಕುಮಾರ ಪುಜಾರ ಸ್ವಾಗತಿಸಿದರು.