ಭಾರತದ ಹೆಣ್ಣುಮಕ್ಕಳಿಗೆ ಪ್ರತಿ ದಿನವೂ ಮಹಿಳಾ ದಿನ

ಭಾರತದ ಹೆಣ್ಣುಮಕ್ಕಳಿಗೆ ಪ್ರತಿ ದಿನವೂ ಮಹಿಳಾ ದಿನ

 `ವನಿತಾ ಸೇವಾ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಡಾ.ರಶ್ಮಿ ಶೆಟ್ಟಿ

ದಾವಣಗೆರೆ, ಮಾ.13- ಭಾರತ ದೇಶದ ಹೆಣ್ಣು ಮಕ್ಕಳಿಗೆ ಪ್ರತಿ ದಿನವೂ ಮಹಿಳಾ ದಿನವೇ. ಹೀಗಾಗಿ ನಮ್ಮಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಗತ್ಯವೇ ಇಲ್ಲ ಎಂದು ಡಾ.ರಶ್ಮಿ ಶೆಟ್ಟಿ ಅಭಿಪ್ರಾಯಿಸಿದರು.

ವನಿತಾ ಸಮಾಜದಿಂದ  ಶ್ರೀ ಸತ್ಯಸಾಯಿ ಮಂದಿರದಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವನಿತಾ ಸಮಾಜದ ವಾರ್ಷಿಕೋತ್ಸವ ಸಮಾರಂಭದಲ್ಲಿ `ವನಿತಾ ಸೇವಾ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

ನಾವೆಲ್ಲಾ ನವರಾತ್ರಿ ಹಬ್ಬ ಆಚರಿಸುತ್ತೇವೆ. ಕೊನೆಯ ದಿನ ವಿಜಯ ದಶಮಿ ಆಚರಿಸುತ್ತೇವೆ. ನಮ್ಮ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿದೆ. ಬೇರೆ ದೇಶಗಳಲ್ಲಿ ಈ ಗೌರವ ಇಲ್ಲ. ಹೀಗಾಗಿ ವಿದೇಶಿಗರಿಗೆ ಅಂತರ್ ರಾಷ್ಟ್ರೀಯ ಮಹಿಳಾ ದಿನ ಆಚರಿಸುತ್ತಾರೆ ಎಂದರು.

ಪ್ರಸ್ತುತ ದಿನಗಳಲ್ಲಿ ಭಾರತೀಯ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಈ ಹಿಂದೆ ಶಾಲಾ-ಕಾಲೇಜುಗಳಿಗೆ ಹೋಗುವ  ಹೆಣ್ಣು ಮಕ್ಕಳಿಗೆ ತಾಯಂದಿರು `ಎಚ್ಚರ’ ಎಂದು ಹೇಳುತ್ತಿದ್ದ ಕಾಲ ಈಗ ಮರೆಯಾಗಿದೆ ಎಂದರು. ಪ್ರತಿ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಛಾಪು ಮೂಡಿಸಿದ್ದಾಳೆ. ಎಲ್ಲಾ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದಾಳೆ. ಹೀಗಾಗಿ ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಮಹಿಳಾ ದಿನವೇ. ಪ್ರಾಯಶಃ ಈ ಮಾತಿಗೆ ಎಲ್ಲಾ ಪುರುಷರ ಸಹಮತವೂ ಇರಲಿದೆ ಎಂದರು.

ತಮ್ಮ ಸಾಧನೆಯ ಹಿಂದೆ ತಾಯಿಯ ಶ್ರಮ ನೆನೆಸಿಕೊಂಡ ಡಾ.ರಶ್ಮಿ ಅವರು, ನಂತರ ತನ್ನ ಅತ್ತೆಯ ಸಹಕಾರ ಸ್ಮರಿಸಿದರು. ದಾವಣಗೆರೆಗೆ ಬಂದಾಗ ಆರಂಭಿಕ ದಿನಗಳಲ್ಲಿ ಸಾಕಷ್ಟು ಕಷ್ಟವಾಗಿತ್ತು. ಈಗ ಇಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ಋುಣಿಯಾಗಿದ್ದೇನೆ. `ನಾವು ಯಾರಿಂದಲೂ ಪ್ರೀತಿಯನ್ನು ನಿರೀಕ್ಷಿಸಬಾರದು. ನಾವು ಪ್ರೀತಿ ಕೊಟ್ಟರೆ, ಒಂದಲ್ಲಾ ಒಂದು ದಿನ ಅದು ದುಪ್ಪಟ್ಟಾಗಿ ಮರಳುತ್ತದೆ’ ಎಂಬ ನನ್ನ ಅತ್ತೆಯ ಮಾತು ಇಂದು ನಿಜವಾಗಿದೆ ಎಂದರು.

ಹಿರಿಯ ಲೇಖಕಿ ಬಿ.ಟಿ. ಜಾಹ್ನವಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಪದ್ಮ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುಷ್ಮ ಮೋಹನ್ ಉಪಸ್ಥಿತರಿದ್ದರು. 

ರೇಖಾ ಪದಕಿ ಪ್ರಾರ್ಥಿಸಿದರು. ನಾಗತ್ನ ಜಗದೀಶ್ ಸ್ವಾಗತಿಸಿದರೆ, ಡಾ.ಅನುರಾಧ ಬಕ್ಕಪ್ಪ ಅತಿಥಿಗಳನ್ನು ಪರಿಚಯಿಸಿದರು. ಸುಜಾತ ಕೃಷ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು.  ಇದೇ ಸಂದರ್ಭದಲ್ಲಿ ಸಂಸ್ಥೆಯ ವೆಬ್ ಸೈಟ್ ಅನಾವರಣಗೊಳಿಸಲಾಯಿತು. ಹಿರಿಯ ಸಾಹಿತಿ ಹೆಚ್.ಕೆ. ಸತ್ಯಭಾಮ ಮಂಜುನಾಥ್ ವನಿತಾ ವಾರ್ತಾ  ಬಿಡುಗಡೆ ಕಾರ್ಯಕ್ರಮ ನಡೆಸಿಕೊಟ್ಟರು. ರಮಾ ನಾಗರಾಜ್ ಕಾಸಲ್ ನಿರೂಪಿಸಿದರು. ಪ್ರಭಾ ರವೀಂದ್ರ ವಂದಿಸಿದರು. 

error: Content is protected !!