ತೆರವು ವೇಳೆ ಪ್ರತಿರೋಧ : ಬಂಧನ – ಬಿಡುಗಡೆ, ಮಲೇಬೆನ್ನೂರು ಪೊಲೀಸ್ ಠಾಣೆ ಬಳಿ ಜನ ಜಮಾವಣೆ : ಪ್ರತಿಭಟನೆ
ಮಲೇಬೆನ್ನೂರು, ಮಾ. 11 – ಭಾನುವಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾಡಳಿತದಿಂದ ಮದಕರಿ ನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತದ ನಾಮಫಲಕ ಸೇರಿದಂತೆ ವಿವಿಧ ಸಮಾಜಗಳ ಒಟ್ಟು ಆರು ನಾಮಫಲಕಗಳನ್ನು ತೆರವುಗೊಳಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಾರ್ಚ್ 15ರ ರಾತ್ರಿ 12 ಗಂಟೆಯವರೆಗೆ 144ನೇ ಸೆಕ್ಷನ್ ಜಾರಿಗೊಳಿಸಲಾಗಿದ್ದು, ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಗ್ರಾಮದ ಮೊದಲ ಬಸ್ ನಿಲ್ದಾಣದ ಬಳಿ ಇರುವ ಅಂಬಿಗರ ಚೌಡಯ್ಯ ವೃತ್ತದಲ್ಲಿ ಹಾಕಿದ್ದ ನಾಮಫಲಕ ಮತ್ತು ಮುಸ್ಲಿಂ ಸಮಾಜದ ಆಜಾದ್‌ನಗರ ಎಂಬ ನಾಮಫಲಕ ಹಾಗೂ ಎ.ಕೆ. ಕಾಲೋನಿಯಲ್ಲಿದ್ದ ಡಾ. ಬಿ.ಆರ್. ಅಂಬೇಡ್ಕರ್ ನಾಮಫಲಕ ಮತ್ತು ಭಗತ್‌ಸಿಂಗ್ ವೃತ್ತದ ನಾಮಫಲಕಗಳನ್ನು ಜಿಲ್ಲಾಡಳಿತದಿಂದ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿದ ಸತ್ಯಶೋಧನಾ ಸಮಿತಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಮತ್ತು ವರದಿಯಲ್ಲಿ ಸೋಮವಾರ ತೆರವುಗೊಳಿಸಿರುವ ಮಹಾದ್ವಾರ ಹಾಗೂ ನಾಮಫಲಕಗಳು ಅನಧಿಕೃತವಾಗಿವೆ ಎಂದು ತಿಳಿಸಿದ್ದಾರೆ.
ಪ್ರತಿರೋಧ – ಬಂಧನ : ಮದಕರಿ ನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ವೃತ್ತದ ನಾಮಫಲಕವನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ಮಾಡಲು ಮುಂದಾದ ವಾಲ್ಮೀಕಿ ನಾಯಕ ಸಮಾಜದ 25 ಜನರನ್ನು ಪೊಲೀಸರು ಬಂಧಿಸಿ, ಮಲೇಬೆನ್ನೂರು ಪೊಲೀಸ್ ಠಾಣೆಗೆ ಕರೆತಂದರು.
ಇದರಲ್ಲಿ ಮಹಿಳೆಯರು ಹೆಚ್ಚಾಗಿದ್ದು, ಪೊಲೀಸ್ ವಾಹನದಲ್ಲಿ ಕರೆ ತರುವ ವೇಳೆ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಬಂಧಿತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ, ತಿಂಡಿ-ಊಟವನ್ನು ನಿರಾಕರಿಸಿದರು.
ಪೊಲೀಸ್ ಠಾಣೆ ಬಳಿ ಜಮಾ ಜಮಾವಣೆ :
ಭಾನುವಳ್ಳಿಯಲ್ಲಿ 25 ವರ್ಷಗಳ ಹಿಂದೆ ನಿರ್ಮಿಸಿದ್ದ ಮದಕರಿ ನಾಯಕ ಮಹಾದ್ವಾರವನ್ನು ಮತ್ತು ವಾಲ್ಮೀಕಿ ವೃತ್ತವನ್ನು ಜಿಲ್ಲಾಡಳಿತ ಏಕಾಏಕಿ ತೆರವು ಗೊಳಿಸಿರುವ ಮತ್ತು ಗ್ರಾಮದ ಮಹಿಳೆಯರನ್ನು ಬಂಧಿಸಿರುವ ವಿಷಯ ತಿಳಿದ ದಾವಣಗೆರೆ ಜಿಲ್ಲೆಯ ವಾಲ್ಮೀಕಿ ನಾಯಕ ಸಮಾಜದವರು ಮಲೇಬೆನ್ನೂರು ಪೊಲೀಸ್ ಠಾಣೆ ಬಳಿ ಜಮಾವಣೆಗೊಂಡು ಕೆಲಹೊತ್ತು ಪ್ರತಿಭಟನೆ ನಡೆಸಿದರು.
ಭಾನುವಳ್ಳಿ ಗ್ರಾಮದಲ್ಲಿ 1999ರಲ್ಲಿ ಶ್ರೀ ಪುಣ್ಯಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಶಿವಪ್ಪ ಅವರು ಮದಕರಿ ನಾಯಕ ವೃತ್ತವನ್ನು ಸರ್ಕಾರದಿಂದಲೇ ನಿರ್ಮಿಸಿ ಉದ್ಘಾಟಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಅದರ ಅಭಿವೃದ್ಧಿಗೆ ಸರ್ಕಾರದ ಅನುದಾನವನ್ನು ಬಳಸಲಾಗಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ, ಸ್ವಾಮೀಜಿಯೊಬ್ಬರ ಒತ್ತಡಕ್ಕೆ ಮಣಿದು, ಜಿಲ್ಲಾಡಳಿತ ನಮ್ಮ ಮಹಾದ್ವಾರವನ್ನು ನಮಗೆ ಯಾವುದೇ ಸೂಚನೆ ನೀಡದೇ ಏಕಾಏಕಿ ತೆರವು ಗೊಳಿಸಿರುವುದನ್ನು ಖಂಡಿಸುತ್ತೇವೆ. ಅಹಿಂದ ಎಂದು ಹೇಳುವವರಿಂದಲೇ ದಲಿತರ ಮೇಲೆ ದಬ್ಬಾಳಿಕೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ನೀಡುತ್ತೇವೆ ಎಂದು ಗ್ರಾಮದ ನಿವೃತ್ತ ಶಿಕ್ಷಕ ಟಿ. ಪುಟ್ಟಪ್ಪ ತಿಳಿಸಿದರು.
ಖಂಡನೆ : ಭಾನುವಳ್ಳಿ ಗ್ರಾಮದಲ್ಲಿ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತವನ್ನು ಅನಧಿಕೃತ ಎಂದು ದಿಢೀರ್ ತೆರವುಗೊಳಿಸಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸುವುದಾಗಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಿ. ವೀರಣ್ಣ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತೆರವುಗೊಳಿಸಿರುವ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತವನ್ನು ಜಿಲ್ಲಾಡಳಿತ ಅಧಿಕೃತವಾಗಿ ಸರ್ಕಾರದಿಂದಲೇ ಪುನರ್‌ನಿರ್ಮಿಸಿ ಕೊಡಬೇಕು. ಇಲ್ಲದಿದ್ದರೆ ಜಿಲ್ಲೆಯಲ್ಲಿ ಹೋರಾಟ ಆರಂಭಿಸುವುದಾಗಿ ಬಿ. ವೀರಣ್ಣ ಎಚ್ಚರಿಕೆ ನೀಡಿದ್ದಾರೆ.
ಗಂಗಾಮತ ಸಮಾಜದ ಬೇಸರ : ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಇದ್ದ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ನಾಮಫಲಕ ಸೇರಿದಂತೆ ಎಸ್ಸಿ-ಎಸ್ಟಿ ಸಮಾಜಕ್ಕೆ ಸೇರಿದ ಮಹಾದ್ವಾರ ಮತ್ತು ವೃತ್ತಗಳ ನಾಮಫಲಕಗಳನ್ನು ಕಾರಣ ನೀಡದೇ ಏಕಾಏಕಿ ತೆರವುಗೊಳಿಸಿರುವುದು ಬಹಳ ಬೇಸರ ತಂದಿದೆ ಎಂದು ಗಂಗಾಮತಸ್ಥ ಸಮಾಜದ ಸಂಕಲಾಪುರ ಮಂಜಪ್ಪ, ಕಂಪನಿ ಹನುಮಂತಪ್ಪ, ಮಾರುತಿ, ಕೃಷ್ಣಮೂರ್ತಿ ಅವರುಗಳು ಪತ್ರಕರ್ತರಿಗೆ ತಿಳಿಸಿದರು.
ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಕೆ.ಬಿ. ಮಂಜುನಾಥ್ ಮಾತನಾಡಿ, ರಾಜನಹಳ್ಳಿ ಶ್ರೀಗಳು ಮಠಕ್ಕೆ ಬಂದ ನಂತರ ಅವರೊಂದಿಗೆ ಚರ್ಚಿಸಿ ಮುಂದಿನ ಹೋರಾಟ ರೂಪಿಸುವುದಾಗಿ ತಿಳಿಸಿದರು.
ದಾವಣಗೆರೆ ತಾ.ಪಂ. ಮಾಜಿ ಅಧ್ಯಕ್ಷ ಕುಕ್ಕುವಾಡ ಮಂಜಣ್ಣ, ವಕೀಲ ಎನ್.ಎಂ. ಆಂಜನೇಯ ಗುರೂಜಿ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಹರಿಹರ ತಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ಹೊನ್ನಾಳಿ ತಾ. ಕಾಂಗ್ರೆಸ್ ಎಸ್ಟಿ ವಿಭಾಗದ ಅಧ್ಯಕ್ಷ ತಿಮ್ಮೇನಹಳ್ಳಿ ರಾಜಣ್ಣ, ಜಿಗಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಂ. ದೇವೇಂದ್ರಪ್ಪ, ಜಿ.ಆರ್. ಹಾಲೇಶಪ್ಪ, ಬೆಣ್ಣೇರ್ ನಂದ್ಯಪ್ಪ, ಕೆ.ಆರ್. ನಂದ್ಯಪ್ಪ, ದೇವರಬೆಳಕೆರೆ ಮಹೇಶ್ವರಪ್ಪ, ರೈತ ಸಂಘದ ಬೇವಿನಹಳ್ಳಿ ಮಹೇಶ್, ಶ್ಯಾಗಲೆ ಮಂಜುನಾಥ್, ಹನಗವಾಡಿ ಹನುಮಂತಪ್ಪ, ಬೂದಿಹಾಳ್ ಮಲ್ಲೇಶಪ್ಪ, ಹರಿಹರದ ಪಾರ್ವತಿ ಬೋರಯ್ಯ, ಮಕರಿ ಪಾಲಾಕ್ಷಪ್ಪ, ಮುದೇನೂರು ಭರತ್, ಬಸವರಾಜ್ ದೊಡ್ಮನಿ, ಉಕ್ಕಡಗಾತ್ರಿ ಮಂಜು, ಹರಳಹಳ್ಳಿ ಮಂಜು ಸೇರಿದಂತೆ ಮತ್ತಿತರರು ಈ ವೇಳೆ ಹಾಜರಿದ್ದರು.
ದೂರು-ಪ್ರತಿದೂರು : ಭಾನುವಳ್ಳಿಯಲ್ಲಿ ಪ್ರತಿಮೆಗಳನ್ನು ತೆರವುಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕ ಮತ್ತು ಕುರುಬ ಸಮಾಜದವರಿಂದ ದೂರು-ಪ್ರತಿದೂರು ದಾಖಲಾಗಿವೆ ಎಂದು ಹೇಳಲಾಗಿದೆ.
ಬಿಗಿ-ಭದ್ರತೆ : ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಎಎಸ್ಪಿ ವಿಜಯಕುಮಾರ್, ಸಂತೋಷ್ ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ತಹಶೀಲ್ದಾರ್ ಭೇಟಿ : ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಭಾನುವಳ್ಳಿ ಗ್ರಾಮದ ವಾಲ್ಮೀಕಿ ನಾಯಕ ಸಮಾಜದವರು ಮಹಾದ್ವಾರ ಹಾಗೂ ವೃತ್ತದ ನಾಮಫಲಕ ಪುನರ್ ಸ್ಥಾಪಿಸುವ ಬಗ್ಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗುರುಬಸವರಾಜ್ ಅವರು ನಿಮ್ಮ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ತಿಳಿಸುತ್ತೇವೆ. ಶಾಂತಿ ಕಾಪಾಡಿ ಎಂದರು.
ಉಪತಹಶೀಲ್ದಾರ್ ಆರ್. ರವಿ, ಪಿಎಸ್‌ಐ ಪ್ರಭು ಕೆಳಗಿನಮನಿ, ಮಂಜುನಾಥ ಕುಪ್ಪೇಲೂರು ಈ ವೇಳೆ ಇದ್ದರು.
ಸಂಜೆ ಬಂಧಿತರನ್ನು ಬಿಡುಗಡೆ ಮಾಡಲಾಯಿತು.