ತಾಂಡಾ ನಿಗಮಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನ : ಎಸ್ಸೆಸ್ಸೆಂ

ತಾಂಡಾ ನಿಗಮಕ್ಕೆ ಹೆಚ್ಚಿನ ಅನುದಾನಕ್ಕೆ ಪ್ರಯತ್ನ : ಎಸ್ಸೆಸ್ಸೆಂ

ನಗರದಲ್ಲಿ ಜಿಲ್ಲಾ ಬಂಜಾರ ಭವನ ಉದ್ಘಾಟನೆ

ದಾವಣಗೆರೆ, ಮಾ. 10 – ತಾಂಡಾ ಅಭಿವೃದ್ಧಿ ನಿಗಮವನ್ನು ಇನ್ನಷ್ಟು ಬಲಪಡಿಸಿ ಬಂಜಾರ ಸಮುದಾಯದವರಿಗೆ ಹೆಚ್ಚಿನ ನೆರವು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

ನಗರದಲ್ಲಿ ನಿರ್ಮಿಸಲಾಗಿರುವ ಜಿಲ್ಲಾ ಬಂಜಾರ ಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತ ಹಾಗೂ ರಾಜ್ಯ ತಾಂಡಾ ಅಭಿವೃದ್ಧಿ ನಿಗಮಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ನಾನು ಹಾಗೂ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಜೊತೆಗೂಡಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತಾಂಡಾ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಲು ಮುಂದಾಗುತ್ತೇವೆ ಎಂದವರು ಭರವಸೆ ನೀಡಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ದಿಸೆಯಲ್ಲಿ ನಾನು ಹಾಗೂ ಆಗಿನ ಶಾಸಕ ಶಿವಮೂರ್ತಿ ನಾಯ್ಕ ಅವರು ಜೊತೆಯಾಗಿ ಶ್ರಮಿಸಿದ್ದೆವು ಎಂದು ಹೇಳಿದರು.

ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ದೂಡಾ ವತಿಯಿಂದ ಬಂಜಾರ ಸಮುದಾ ಯಕ್ಕೆ 2 ಎಕರೆ ಜಮೀನು ಕೊಡಲಾಗಿದೆ. ಅದನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂದೂ ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮಕ್ಕೆ ಜಯದೇವನಾಯ್ಕ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ನಗರದ ಹೃದಯ ಭಾಗದಲ್ಲಿ ಬಂಜಾರ ಭವನ ರೂಪುಗೊಂಡಿರುವುದರಿಂದ ಸಮುದಾಯದವರಿಗೆ ಅನುಕೂಲವಾಗಲಿದೆ. ಆದರೆ, ಮದುವೆಯಂತಹ ಸಮಾರಂಭ ನಡೆಸಲು ಬೃಹತ್ ಭವನದ ಅಗತ್ಯವಿದೆ. ಸರ್ಕಾರದಿಂದ 1-2 ಎಕರೆ ಜಾಗ ಹಾಗೂ ಭವನಕ್ಕೆ ಅನುದಾನ ಒದಗಿಸಲು ಸರ್ಕಾರದ ಹಂತದಲ್ಲಿ ಪ್ರಯತ್ನಕ್ಕೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು.

ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಅಂಬೇಡ್ಕರ್ ಅವರ ಮಂತ್ರ ಗಳಾದ ಶಿಕ್ಷಣ, ಸಂಘಟನೆ ಹಾಗೂ ಹೋರಾ ಟದಿಂದ ಮಾತ್ರ ಯಾವುದೇ ಸಮುದಾಯ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಮುಖಂಡ ರಾಘವೇಂದ್ರ ನಾಯ್ಕ, ಬಂಜಾರ ಸಮುದಾಯದವರಿಗೆ ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯಿಂದ ನೆರವು ಸಿಗುತ್ತಿತ್ತು. ಈಗ ತಾಂಡಾ ಅಭಿವೃದ್ಧಿ ನಿಗಮದಲ್ಲೇ ನೆರವು ಪಡೆಯಬೇಕು ಎಂದು ನಿರ್ಬಂಧಿಸಲಾಗುತ್ತಿದೆ. ತಾಂಡಾ ಅಭಿವೃದ್ಧಿ ನಿಗಮ ಇರುವುದು ಮೂಲಭೂತ ಸೌಕರ್ಯಕ್ಕೆ ಮಾತ್ರ. ಹೀಗಾಗಿ ಬಂಜಾರ ಸಮುದಾದವರು ಸಮಾಜ ಕಲ್ಯಾಣ ಇಲಾಖೆಯಿಂದ ವೈಯಕ್ತಿಕ ನೆರವು ಪಡೆಯಲು ಅವಕಾಶ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಮೇಲೆ ಪಾಲಿಕೆ ಸದಸ್ಯರಾದ ಶಿಲ್ಪ ಜಯಪ್ರಕಾಶ್, ಆರ್.ಎಲ್. ಶಿವಪ್ರಕಾಶ್, ಸಮಾಜದ ಮುಖಂಡರಾದ ಮಂಜುನಾಥ ಶಂಕರ್  ಸಿಂಗ್, ಎನ್. ಜಯದೇವನಾಯ್ಕ, ರಾಘವೇಂದ್ರ ನಾಯ್ಕ, ಎನ್. ಹನುಮಂತನಾಯ್ಕ, ಜಿ.ಬಿ. ಮಾರುತಿ ನಾಯ್ಕ, ಪರಮೇಶ್ವರ ನಾಯ್ಕ, ಗೋಪಿ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ ನಾಯ್ಕ, ಜಿ.ಪಂ. ಉಪ ಕಾರ್ಯದರ್ಶಿ ಡಿ.ಎಸ್. ಕೃಷ್ಣಾ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: Content is protected !!