ಬಿಜೆಪಿಯವು ಜಾತಿ ಆಧಾರದ ಯೋಜನೆಗಳಲ್ಲ

ಬಿಜೆಪಿಯವು ಜಾತಿ ಆಧಾರದ ಯೋಜನೆಗಳಲ್ಲ

ಬಿಜೆಪಿ ಪ್ರಮುಖರ ಸಭೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌

ದಾವಣಗೆರೆ, ಮಾ.7- ಕಾಂಗ್ರೆಸ್ ಸರ್ಕಾರದಂತೆ ಬಿಜೆಪಿಯ ಮೋದಿ ಸರ್ಕಾರ ಜಾತಿ ಆಧಾರದ ಮೇಲೆ ಯೋಜನೆ ನೀಡಿಲ್ಲ. ಎಲ್ಲಾ ಜನರಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ನೀಡಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ ಹೇಳಿದರು.

ನಗರದ ದಾವಣಗೆರೆ-ಹರಿಹರ ಸಹಕಾರ ಭವನದಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆ ಸಿದ್ಧತೆಗಾಗಿ ಬಿಜೆಪಿಯ ಧಾರವಾಡ ಕ್ಲಸ್ಟರ್‌ನ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯದಲ್ಲಿ  ಮೂಲಭೂತ ಸೌಕರ್ಯಗಳು ಬಂದ್ ಆಗಿವೆ ಎಂದವರು ಟೀಕಿಸಿದರು.

ದೇಶದಲ್ಲಿ ಕಾಂಗ್ರೆಸ್ ಸರ್ಕಾರದ 10 ವರ್ಷ ಸಾಧನೆ ಹಾಗೂ ಬಿಜೆಪಿ ಸರ್ಕಾರದ 10 ವರ್ಷದ ಸಾಧನೆ ಬಗ್ಗೆ ಸಿಎಂ ಸಿದ್ದರಾಮಯ್ಯ  ಅವರು ಬಹಿರಂಗ ಚರ್ಚೆಗೆ ಬರಲಿ ಎಂದು  ಪ್ರಮೋದ್ ಸವಾಲು ಹಾಕಿದರು.

ದೇಶದಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರದ ಆಡಳಿತದಲ್ಲಿ 2ಜಿ ಹಗರಣ, ಮೈನಿಂಗ್ ಹಗರಣ ಸೇರಿದಂತೆ, ಅನೇಕ ಹಗರಣಗಳು ನಡೆದಿದ್ದು, ಅವರ ಅವಧಿಯಲ್ಲಿ ಜಾರಿಯಾದ ಒಂದು ಯೋಜ ನೆಯೂ ಕೂಡ ಜನರಿಗೆ ನೆನಪಿಲ್ಲ. ಆದರೆ ಅವರು ಮಾಡಿದ ಹಗರಣಗಳು ಮಾತ್ರ ನೆನಪಿವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯದ ಪರ ಕೆಲಸ ಮಾಡದೆ ಗಾಂಧಿ ಪರಿವಾರದ ಪರ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷ ರಾಜ್ಯವನ್ನು ಎಟಿಎಂ ಮಾಡಿಕೊಂಡಿದೆ. ಇಲ್ಲಿ ಲೂಟಿ ಮಾಡೋದೇ ಅವರಿಗೆ ಕೆಲಸವಾಗಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಲೋಕಸಭಾ ಚುನಾವಣೆಯ ಉಸ್ತುವಾರಿ ಭೈರತಿ ಬಸವರಾಜ್, ಶಾಸಕರಾದ ಮಹೇಶ್ ತೆಂಗಿನಕಾಯಿ, ಚಂದ್ರು ಲಮಾಣಿ, ಬಿ.ಪಿ.ಹರೀಶ್‌, ಚನ್ನಬಸಪ್ಪ, ಮಾಜಿ ಶಾಸಕ ರವೀಂದ್ರ ನಾಥ್, ಮಾಡಾಳ್‌ ವಿರೂಪಾಕ್ಷಪ್ಪ, ಕಳಕಪ್ಪ ಬಂಡಿ, ಪ್ರೊ.ಲಿಂಗಣ್ಣ, ತಿಪ್ಪಾರೆಡ್ಡಿ, ಅರುಣ್ ಕುಮಾರ್ ಪೂಜಾರಿ,  ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾಮಿ, ಬಿಜೆಪಿ ಧಾರವಾಡ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಿಗೆ, ಚಿತ್ರದುರ್ಗದ ಜಿಲ್ಲಾಧ್ಯಕ್ಷ ಮುರಳಿ, ಲಿಂಗರಾಜ ಪಾಟೀಲ್ ಸೇರಿದಂತೆ ಮತ್ತಿತರರಿದ್ದರು.

ದಾವಣಗೆರೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್  ಸ್ವಾಗತಿಸಿದರು. ಧಾರವಾಡ ಕ್ಲಸ್ಟರ್ ಸಂಚಾಲಕ ಹಾಗೂ ಎಂಎಲ್‌ಸಿ ನವೀನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

error: Content is protected !!