ಎಸ್.ಎಸ್. ಕೇರ್‌ ಟ್ರಸ್ಟ್ ದೇಶಕ್ಕೇ ಮಾದರಿ

ಎಸ್.ಎಸ್. ಕೇರ್‌ ಟ್ರಸ್ಟ್ ದೇಶಕ್ಕೇ ಮಾದರಿ

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್

ದಾವಣಗೆರೆ, ಮಾ.7- ಎಸ್.ಎಸ್. ಕೇರ್‌ ಟ್ರಸ್ಟ್‌ನ ಯೋಚನೆ, ಯೋಜನೆ ಹಾಗೂ ಅನುಷ್ಠಾನ ಕಾರ್ಯಗಳು ದೇಶಕ್ಕೆ ಮಾದರಿಯಾಗಬಲ್ಲವು ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯ ಮೂರ್ತಿ ಶಿವರಾಜ್ ವಿ. ಪಾಟೀಲ್ ಹೇಳಿದರು.

ನಗರದ ಬಿಐಇಟಿ ಕಾಲೇಜು ಆವರಣದಲ್ಲಿರುವ ಎಸ್.ಎಸ್. ಮಲ್ಲಿ ಕಾರ್ಜುನ್‌ ಸಾಂಸ್ಕೃತಿಕ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ `ಸಂಸಾಧನಾ’ಎಸ್.ಎಸ್. ಕೇರ್ ಟ್ರಸ್ಟ್ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್‌ನ ಜಾಲತಾಣ ಉದ್ಘಾಟಿಸಿ ಅವರು ಮಾತನಾಡಿದರು.

ಅವಕಾಶ ದೊರೆತರೆ ಎಷ್ಟು ಸೇವಾ ಕೆಲಸಗಳನ್ನು ಮಾಡಬಹುದು ಎಂಬುದನ್ನು ಎಸ್.ಎಸ್. ಸೇವಾ ಟ್ರಸ್ಟ್‌ ಕಳೆದ ಐದು ವರ್ಷಗಳಲ್ಲಿ ಮಾಡಿರುವ ಸಾಧನೆಯಿಂದಲೇ ತಿಳಿಯಬಹುದಾಗಿದೆ ಎಂದು ಹೇಳಿದರು.

ಶಿಕ್ಷಣ ಹಾಗೂ ಆರೋಗ್ಯ ಮೂಲ ಭೂತ ಹಕ್ಕುಗಳ ಜೊತೆ ಮಾನವೀಯ ಹಕ್ಕುಗಳೂ ಸಹ ಆಗಿವೆ. ದಾವಣಗೆರೆ ಯಲ್ಲಿ ಬಾಪೂಜಿ ಸಂಸ್ಥೆ ಇವೆರಡನ್ನೂ ಜನತೆಗೆ ನೀಡುತ್ತಿದೆ. ಒಂದು ಪಕ್ಷ ಇಲ್ಲಿ ಬಾಪೂಜಿ ಸಂಸ್ಥೆ ಇರದೇ ಇದ್ದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ಬೇರೆ ಊರುಗಳಿಗೆ ಹೋಗಬೇಕಾಗುತ್ತಿತ್ತು ಎಂದರು.

ಮಕ್ಕಳು ದೇಶದ ಬಹು ದೊಡ್ಡ ಸಂಪತ್ತು. ಮಹಿಳೆ ಆರೋಗ್ಯವಾಗಿದ್ದರೆ, ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಮಕ್ಕಳು ಹಾಗೂ ಮಹಿಳೆಯರ ಆರೋಗ್ಯದ ಕಡೆ ಹೆಚ್ಚು ಒತ್ತು ನೀಡುತ್ತಿರುವ ಟ್ರಸ್ಟ್‌ನ ಸೇವೆ ಶ್ಲ್ಯಾಘನೀಯ ಎಂದು ಶಿವರಾಜ್ ಪಾಟೀಲ್ ಹೇಳಿದರು.

ಕೆಲವು ಕಾರ್ಯಕ್ರಮಗಳಲ್ಲಿ ಕೆಲಸಗಳು ಕೇವಲ ಮಾತಿನಲ್ಲಿಯೇ ಇರುತ್ತವೆ. ಆದರೆ ಇಂದಿನ ಕಾರ್ಯಕ್ರಮದಲ್ಲಿ ಟ್ರಸ್ಟ್ ಮಾಡಿದ ಕೆಲಸಗಳೇ ಮಾತುಗಳಾಗಿವೆ. ಪ್ರಚಾರಕ್ಕಲ್ಲದೆ, ಪ್ರಯೋಜನಕ್ಕಾಗಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಶಾಮನೂರು ಶಿವಶಂಕರಪ್ಪ ಅವರ ಮುಂದಾಲೋಚನೆ, ಜನಪರ ಕಾಳಜಿ, ಕ್ರಿಯಾಶೀಲರಾಗಿರುವ ಮಲ್ಲಿಕಾರ್ಜುನ್ ಅವರ ಅನುಷ್ಠಾನ ಕಾರ್ಯಗಳು, ಡಾ.ಪ್ರಭಾ ಅವರ ಕಾರ್ಯಕ್ಷಮತೆಯ ಜೊತೆಗೆ ಸಿಬ್ಬಂದಿಗಳೂ ಕೈ ಜೋಡಿಸಿರುವುದರಿಂದ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಗಿದೆ. ಟ್ರಸ್ಟ್‌ ಇನ್ನೂ ಐದು ವರ್ಷದ ಕೂಸು. ಈಗಲೇ ಇಷ್ಟು ಸಾಧನೆ ಮಾಡಿದೆ ಎಂದರೆ, ಮುಂದಿನ ದಿನಗಳಲ್ಲಿ ಎಷ್ಟು ಸಾಧನೆ ಮಾಡಬಹೆಂದು ಊಹಿಸಿಕೊಳ್ಳಬೇಕು ಎಂದು ಹೇಳಿದರು.

ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರುಗಳಾದ ಕಿರುವಾಡಿ ಗಿರಿಜಮ್ಮ, ಅಥಣಿ ವೀರಣ್ಣ ಉಪಸ್ಥಿತರಿದ್ದರು.

ಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ್ ಸ್ವಾಗತಿಸಿದರು. ಅಖಿಲ್ ಮತ್ತು ಉದಯ್ ಪ್ರಾರ್ಥಿಸಿದರು.  ಇದೇ ವೇಳೆ ಟ್ರಸ್ಟ್‌ಗೆ ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ ಸಾಧನೆಯ ಕೈಪಿಡಿ ಲೋಕಾರ್ಪಣೆಗೊಳಿಸಲಾಯಿತು.

error: Content is protected !!