ಕೇಂದ್ರದ ಯೋಜನೆಗಳಿಂದ ದೇಶ ಸುಭಿಕ್ಷ

ಕೇಂದ್ರದ ಯೋಜನೆಗಳಿಂದ ದೇಶ ಸುಭಿಕ್ಷ

ಭಾರತ್ ರೈಸ್ ವಿತರಣೆಗೆ ಚಾಲನೆ ನೀಡಿದ ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ, ಮಾ.7-  ಕೇಂದ್ರದ ಹಲವಾರು ಯೋಜನೆಗಳಿಂದ ದೇಶ ಇಂದು ಸುಭಿಕ್ಷವಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಗುರುವಾರ ಕೇಂದ್ರ ಸರ್ಕಾರದ ಭಾರತ್ ರೈಸ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸೋವಿ ದರದಲ್ಲಿ 29 ರೂ.ಗೆ ಒಂದು ಕೆಜಿ ಗುಣಮಟ್ಟದ ಅಕ್ಕಿ ಮಾರಾಟ ಮಾಡುವ ಯೋಜನೆ ಜಾರಿಗೆ ತಂದಿದೆ. ಇದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದರು.

ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ `ಭಾರತ್ ರೈಸ್’ ಕೊಡುತ್ತಿರುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಗ್ಯಾರಂಟಿಯಾಗಿದೆ ಎಂದ ಅವರು, ಎಲ್ಲೆಲ್ಲಿ ಬೇಡಿಕೆ ಬರುತ್ತದಯೋ ಅಲ್ಲೆಲ್ಲಾ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಪ್ರದೇಶದಲ್ಲೂ ನಾಲ್ಕು ವಾಹನಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುವುದು ಎಂದರು.

ದಾವಣಗೆರೆಯ ಕೆಲ ವಾರ್ಡುಗಳಲ್ಲಿ 24 ಗಂಟೆ ನೀರು ಪೂರೈಕೆಯಾಗುತ್ತಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲಾ ವಾರ್ಡ್‌ಗಳಿಗೂ ನಿರಂತರ ನೀರು ಸರಬರಾಜು ಮಾಡಲಾಗುವುದು. ಪಾಲಿಕೆ ವ್ಯಾಪ್ತಿ ಜಲಸಿರಿ ಯೋಜನೆಯಡಿ, ಗ್ರಾಮೀಣ ಪ್ರದೇಶದಲ್ಲಿ ಜಲ ಜೀವನ್ ಮಿಷನ್‌ನಿಂದ 24 ಗಂಟೆ ಕುಡಿಯುವ ನೀರು ತಲುಪಿಸುವ ಕಾಮಗಾರಿ ನಡೆಯುತ್ತಿದೆ ಎಂದು ಸಿದ್ದೇಶ್ವರ್ ಹೇಳಿದರು.

ಗುರುವಾರ ಜಿಲ್ಲೆಗೆ 25 ಟನ್ ಭಾರತ್ ರೈಸ್ ಬಂದಿದ್ದು, 10 ಕೆಜಿ ಬ್ಯಾಗ್ ಅನ್ನು 290 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್ ಹೇಳಿದರು.

ಪ್ರತಿ ಮನೆಯ ಮೂವರು ಅವರವರ ಮೊಬೈಲ್ ಸಂಖ್ಯೆ ನೀಡಿ, ತಲಾ ಒಂದು ಬ್ಯಾಗ್ ಅಕ್ಕಿ ಪಡೆಯಲು ಅವಕಾಶವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮಹಾನಗರ ಪಾಲಿಕೆ ಉಪ ಮೇಯರ್ ಯಶೋಧ ಯಗ್ಗಪ್ಪ, ಪ್ರತಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಸದಸ್ಯ ಆರ್.ಎಲ್. ಶಿವಪ್ರಕಾಶ್, ಮುಖಂಡರಾದ ಬಿ.ಟಿ. ಸಿದ್ದಪ್ಪ, ಶಿವನಗೌಡ ಪಾಟೀಲ್, ಜಿ.ಎಸ್. ಶ್ಯಾಮ್, ಅತಿಥ್ ಅಂಬರ್‌ಕರ್, ಬಿ.ಎಂ. ಸತೀಶ್ ಕೊಳೇನಹಳ್ಳಿ, ಎಂ.ವಿ. ಜಯಪ್ರಕಾಶ್ ಮಾಗಿ ಮತ್ತಿತರರಿದ್ದರು.

error: Content is protected !!