24 ರಂದು ಇಂಡಿಯಾ ಒಕ್ಕೂಟ ಪಕ್ಷಗಳ ಬೃಹತ್ ಸಮಾವೇಶ ತೀರ್ಮಾನ

24 ರಂದು ಇಂಡಿಯಾ ಒಕ್ಕೂಟ ಪಕ್ಷಗಳ ಬೃಹತ್ ಸಮಾವೇಶ ತೀರ್ಮಾನ

ದಾವಣಗೆರೆ, ಮಾ. 5 – ಕೇಂದ್ರ ಸರ್ಕಾರದ ಹಿಟ್ಲರ್ ಆಡಳಿತವನ್ನು ಖಂಡಿಸಿ ನಗರದಲ್ಲಿ ಇದೇ ದಿನಾಂಕ 24ರಂದು ಇಂಡಿಯಾ ಒಕ್ಕೂಟದ ಪಕ್ಷಗಳು, ಸಂಘಟನೆಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲು ಜಿಲ್ಲಾ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಇಂಡಿಯಾ ಒಕ್ಕೂಟದ ಪಕ್ಷಗಳು, ಸಂಘಟನೆಗಳ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಇದೇ ವೇಳೆ ಕೆಪಿಸಿಸಿ ಸಂಯೋಜಕ ಎಸ್.ಎಲ್. ಆನಂದಪ್ಪ ಮಾತನಾಡಿ, ಕೇಂದ್ರದಲ್ಲಿನ ಸರ್ವಾಧಿಕಾರಿ ಧೋರಣೆಯಿಂದಾಗಿ ದೇಶದ ಯುವ ಜನಾಂಗ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಿಜೆಪಿ ಸರ್ಕಾರದ ದುರಾಡಳಿತವನ್ನು ಅಂತ್ಯಗೊಳಿಸಲು ಯುವ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಸರ್ಕಾರ ಸ್ವತಂತ್ರವಾಗಿ ಅಧಿಕಾರ ನಡೆಸುವ ಬದಲು ಸರ್ವಾಧಿಕಾರಿ ಆಡಳಿತ ಮಾಡುತ್ತಾ ಬಂದಿದ್ದು, ಬಿಜೆಪಿ ಸರ್ಕಾರ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಪಿಎಂಎವೈ ಯೋಜನೆಯಡಿ ಸರ್ವರಿಗೂ ಸೂರು ಕಲ್ಪಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ಸರಿಯಾದ ಮಾಹಿತಿ ನೀಡದೇ ಕೇಂದ್ರ, ರಾಜ್ಯ ಸರ್ಕಾರಗಳ ಪಾಲಿನ ಜೊತೆಗೆ ಫಲಾನುಭವಿಗಳಿಂದ ವಂತಿಗೆ ಸ್ವೀಕರಿಸಿ ಸೂರು ಕಲ್ಪಿಸುವ ಉದ್ದೇಶವಿದೆ. ಆದರೆ ಜಿಎಸ್‌ಟಿ ಹೇರುತ್ತಿರುವುದು ಯಾವ ನ್ಯಾಯ ?  ಎಂದು ಪ್ರಶ್ನಿಸಿದರು.

ಬಿಜೆಪಿ ಜನ ವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿ-ಜೆಡಿಎಸ್ ಹೊರತುಪಡಿಸಿ ಇಂಡಿಯಾ ಒಕ್ಕೂಟ ಪಕ್ಷಗಳ, ಸಂಘಟನೆಗಳ ಕಾರ್ಯಕರ್ತರ  ಸಮಾವೇಶ ನಡೆಸಲಾಗುವುದು ಎಂದರು.

 ಸಿಪಿಐ ಮುಖಂಡ ಆವರಗೆರೆ ಹೆಚ್.ಜಿ. ಉಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಕೃಷಿಗೆ ಮಾರಕವಾಗಿರುವ ಮೂರು ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿತು. ಜಿಎಸ್‌ಟಿ, ಹಣದುಬ್ಬರ ವಿಚಾರದಲ್ಲಿ ವೈಫಲ್ಯ ಅನುಭವಿಸಿದೆ. ಆದರೆ ಕೇವಲ ಜನರಿಗೆ ಮಂಕುಬೂದಿ ಎರಚುತ್ತಿದೆ. ಈ ಬಗ್ಗೆ ಜನಜಾಗೃತಿ ಅತ್ಯವಶ್ಯ. ಹಾಗಾಗಿ ರಾಜಕೀಯ ಪಕ್ಷಗಳು ಒಗ್ಗೂಡಿ, ಜಾತ್ಯತೀತ ನಿಲುವು ಗಳನ್ನು ಲೋಕಸಭಾ ಚುನಾವಣೆಯಲ್ಲಿ ಹೊಂದಿರುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯಾದರೂ ಅಭಿವೃದ್ಧಿಗಿಂತ ಪ್ರಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ರಾಜ್ಯದಲ್ಲೂ ಈ ಹಿಂದೆ ಅಧಿಕಾರದಲ್ಲಿದ್ದಾಗ ಅಶಾಂತಿ ವಾತಾವರಣ ಸೃಷ್ಠಿಸುವ ಕೆಲಸ ಮಾಡಿತ್ತು. ಧರ್ಮದ ವಿಚಾರದಲ್ಲಿ ಜನರನ್ನು ತೊಂದರೆಗೀಡು ಮಾಡಿದ ಬಿಜೆಪಿಯನ್ನು ಈ ಬಾರಿ ಸೋಲಿಸಲೇ ಬೇಕಾಗಿದೆ ಎಂದರು.

ಜಾತ್ಯತೀತ ಪಕ್ಷಗಳೆಲ್ಲವೂ ಒಟ್ಟಾದರೆ ಗೆಲುವು ಕಷ್ಟವಾಗದು. ಬಿಜೆಪಿ ದುರಾಡಳಿತ, ಭ್ರಷ್ಟಚಾರ, ಬೆಲೆಯೇರಿಕೆ ಸೇರಿದಂತೆ ಅನೇಕ ವೈಫಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು. 

ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರ ಮಹಾರಾಷ್ಟ್ರದ ಅಜಿತ್ ಪವಾರ್ ಸೇರಿದಂತೆ ಹಲವು ವಿಪಕ್ಷಗಳ ನಾಯಕರ ಮೇಲೆ ಇಡಿ, ಐಟಿ ಮೂಲಕ ಪ್ರಕರಣ ದಾಖಲಿಸಿ ಬೆದರಿಸಿ ತಮ್ಮ ಪಕ್ಷ ಸೇರಿಕೊಂಡು ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಿದೆ. ಆದರೆ ಅವರದೇ ಪಕ್ಷದ ಜಿ.ಎಂ.ಸಿದ್ದೇಶ್ವರ ಮಾಡಿದ ಅದಿರು ಪ್ರಕರಣ ಮತ್ತು ಹವಾಲಾ ಪ್ರಕರಣಗಳನ್ನು ಮುಚ್ಚಿಹಾಕಿದೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡರಾದ ಸೈಯ್ಯದ್ ಸೈಫುಲ್ಲಾ, ಅಯೂಬ್, ಎಸ್. ಮಲ್ಲಿಕಾರ್ಜುನ್, ಎ. ನಾಗರಾಜ್, ಪರಮೇಶ್ ಆವರಗೆರೆ, ಅನಿತಾಬಾಯಿ ಮಾಲತೇಶರಾವ್ ಜಾಧವ್, ಡೋಲಿ ಚಂದ್ರು, ಎಲ್‌.ಎಂ.ಹೆಚ್. ಸಾಗರ್, ಮಂಗಳಮ್ಮ, ಮಂಜಮ್ಮ, ರೆಹಮಾನ್, ಖಾಲಿದ್ ಅಹ್ಮದ್, ಜಮ್ನಳ್ಳಿ ನಾಗರಾಜ್, ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಆನಂದರಾಜ್, ಆವರಗೆರೆ ಚಂದ್ರು, ಗುಡಿಹಳ್ಳಿ ನಾಗರಾಜ್‌, ಟಿ.ಎಸ್. ನಾಗರಾಜ್,  ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಶಿವಕುಮಾರ್, ವಕೀಲರಾದ ಅನಿಸ್ ಪಾಷ,  ರೈತ ಸಂಘದ ಪರಶುರಾಮ್ ಮತ್ತಿತರರು ಭಾಗವಹಿಸಿದ್ದರು.

error: Content is protected !!