ದಾವಣಗೆರೆ, ಮಾ.4- ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸೋಮವಾರ ಚಾಲನೆ ನೀಡಿದರು.
ಎಂ.ಸಿ.ಸಿ. ಎ ಬ್ಲಾಕ್ ರಸ್ತೆ ಅಭಿವೃದ್ಧಿ ಕಾಮಗಾರಿ, 1.50 ಕೋಟಿ ರೂ.ಗಳಲ್ಲಿ ಮೋತಿ ವೀರಪ್ಪ ಜ್ಯೂನಿಯರ್ ಕಾಲೇಜು ಆವರಣದಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿ, ಜಿ.ಪಂ. ಅಧಿಕಾರಿಗಳ ವಸತಿ ಗೃಹ ಹಾಗೂ ದಾವಣಗೆರೆ ತಾ.ಪಂ. ಕಟ್ಟಡಗಳ ಉದ್ಘಾಟನೆ, ಶಿವಕುಮಾರಸ್ವಾಮಿ ಬಡಾವಣೆ ಮುಖ್ಯ ರಸ್ತೆಯ ಅಭಿವೃದ್ಧಿ ಕಾಮಗಾರಿ ಹಾಗೂ ಎವಿಕೆ ಕಾಲೇಜು ರಸ್ತೆಯ ಮಹಾತ್ಮ ಗಾಂಧಿ ವಿದ್ಯಾರ್ಥಿ ನಿಲಯ ಕೊಠಡಿ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡುತ್ತಿದೆ ಎಂದರು.
ಈಗಾಗಲೇ ಗ್ಯಾರಂಟಿಗಳ ಅನುಷ್ಠಾನ ಸಮರ್ಪಕವಾಗಿ ನಡೆದಿದ್ದು, ಜನರು ಐದೂ ಗ್ಯಾರಂಟಿಗಳ ಉಪ ಯೋಗ ಪಡೆದುಕೊಳ್ಳುತ್ತಿದ್ದಾರೆ. ಯಾರಾದರೂ ಗ್ಯಾರಂಟಿ ಯೋಜನೆಯಿಂದ ವಂಚಿತರಾದಲ್ಲಿ, ಸಂಬಂಧಿಸಿದ ಅಧಿಕಾರಿಗಳಿಗಾಗಲೀ ಅಥವಾ ತಮ್ಮ ಗಮನಕ್ಕಾಗಲೀ ತರುವಂತೆ ಸಚಿವರು ಹೇಳಿದರು.
ಎವಿಕೆ ಕಾಲೇಜು ರಸ್ತೆ ಬಳಿಯ ಆದಿ ಕರ್ನಾಟಕ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಸಚಿವ ಎಸ್ಸೆಸ್ಸೆಂ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಮಹಾತ್ಮ ಗಾಂಧೀಜಿ ಅವರು ಭೂಮಿ ಪೂಜೆ ಸಲ್ಲಿಸಿದ್ದ ಜಾಗವಿದು. ಇಲ್ಲಿನ ವಿದ್ಯಾರ್ಥಿ ನಿಲಯ ಕೊಠಡಿ ನಿರ್ಮಾಣಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ 92 ಲಕ್ಷ ರೂ. ಅನುದಾನ ನೀಡಿ ಕಾಮಗಾರಿ ಆರಂಭಿಸಲಾಗುತ್ತಿದೆ ಎಂದರು.
ರಾಜ್ಯಾದ್ಯಂತ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರು ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಈ ವಿಷಯ ಮುಖ್ಯಮಂತ್ರಿಗಳ ಗಮನಕ್ಕೂ ಬಂದಿದ್ದು, ಕ್ಯಾಬಿನೆಟ್‌ನಲ್ಲೂ ಸಿಬ್ಬಂದಿಗಳ ನೇಮಕದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ತಿಪ್ಪೇಸ್ವಾಮಿ ಕಾಲೇಜಿಗೂ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಾರ್ಚ್ ತಿಂಗಳ ನಂತರ ನಾನು, ನೀವೆಲ್ಲ ಆಡಳಿತ ಮಂಡಳಿಯವರೂ ಸೇರಿಕೊಂಡು, ಸಚಿವ ಡಾ.ಮಹದೇವಪ್ಪಗೆ ಭೇಟಿ ಮಾಡಿ, ಹೆಚ್ಚು ಅನುದಾನವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸೋಣ. ಈ ಶಾಲೆಯ ಸಮಗ್ರ ಅಭಿವೃದ್ಧಿಗೆ ತಮ್ಮ ಸಲಹೆ, ಸಹಕಾರ ಸದಾ ಇದ್ದೇ ಇರುತ್ತದೆ ಎಂದು ಭರವಸೆ ನೀಡಿದರು.
ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಅವರು ಒದಗಿಸಿರುವ 92 ಲಕ್ಷ ರೂ. ಅನುದಾನದಲ್ಲಿ ಹಾಸ್ಟೆಲ್‌ಗೆ ಅಡುಗೆ ಮನೆ, ಭೋಜನಾಲಯ ಹಾಗೂ ಐದು ಕೊಠಡಿ ನಿರ್ಮಿಸಲಾಗುವುದು ಎಂದರು.
1934ರಲ್ಲಿ ಮಹಾತ್ಮ ಗಾಂಧೀಜಿ ಅವರು ದಾವಣಗೆರೆಗೆ ಆಗಮಿಸಿದ್ದಾಗ ಸಮಾಜದ ಮುಖಂಡರು ನಮ್ಮ ಜನಾಂಗದ ಹಾಸ್ಟೆಲ್‌ಗೆ ಜಾಗ ಕೊಡಿಸುವಂತೆ ಮನವಿ ಮಾಡಿದ್ದರು. ಆಗ ಗಾಂಧೀಜಿ ಅವರು ಜಾಗ ಕೊಡಿಸಿ, ಶಂಕುಸ್ಥಾಪನೆ ನೆರವೇರಿಸಿದ್ದು. ಈಗ ಇಲ್ಲಿ ಪಿಯು ಕಾಲೇಜು, ಎಂಜಿಎಂಆರ್ ಪ್ರೌಢಶಾಲೆ, ಎಂಜಿಎಂ ಹಿರಿಯ ಪ್ರಾಥಮಿಕ ಶಾಲೆ, ಆದಿ ಕರ್ನಾಟಕ ವಿದ್ಯಾರ್ಥಿ ನಿಲಯ, ಪ್ಯಾರಾ ಮೆಡಿಕಲ್ ಕಾಲೇಜು ನಡೆಯುತ್ತಿದ್ದು, 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ ಮಾಹಿತಿ ನೀಡಿದರು.
ಪಾಲಿಕೆ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಬಿ.ಎಂ. ರಾಮಸ್ವಾಮಿ, ಕೆ. ಚಂದ್ರಣ್ಣ, ಬಿ.ಎಂ. ಈಶ್ವರ್, ಎಲ್.ಎಂ.ಎಚ್. ಸಾಗರ್ ಇತರರಿದ್ದರು.