ಹೆಚ್ಚಿದ ಬಿಸಿಲು: ದೇವನಗರಿ ಜನತೆಗೆ ದಿಗಿಲು

ಹೆಚ್ಚಿದ ಬಿಸಿಲು: ದೇವನಗರಿ ಜನತೆಗೆ ದಿಗಿಲು

ಇದಿನ್ನೂ ಬೇಸಿಗೆಯ ಆರಂಭಿಕ ದಿನಗಳು. ಆದರೆ ಈಗಲೇ ದಾವಣಗೆರೆ ಜನತೆ  ಬಿಸಿಲಿನ ಧಗೆಗೆ ಭಯ ಭೀತರಾಗಿದ್ದಾರೆ. `ಈಗಲೇ ಹೀಗೆ, ಮುಂದೆ ಹೆಂಗೋ?’ ಎಂಬ ಆತಂಕದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ದಾವಣಗೆರೆ ರಸ್ತೆಯಲ್ಲಿ ಮಹಿಳೆಯರು ವಾಹನ ಚಲಾಯಿಸುವಾಗ ಬಿಸಿಲಿನಿಂದ ತ್ವಚೆಯನ್ನು ರಕ್ಷಿಸಿಕೊಳ್ಳುತ್ತಿರುವ ಬಗೆ ಇದು. 

ದಾವಣಗೆರೆ, ಮಾ.1- ದಿನೇ ದಿನೇ ಹೆಚ್ಚಾಗುತ್ತಿರುವ ಬಿಸಿಲಿನ ತಾಪಕ್ಕೆ ದಾವಣಗೆರೆ ಜನತೆ ಕಂಗಾಲಾಗಿದೆ.  ಫೆಬ್ರ ವರಿಯ ಮಧ್ಯದಲ್ಲಿಯೇ ಬಿಸಿಲಿನ ತಾಪ ಹೆಚ್ಚಾಗಿದ್ದು, ಮಾರ್ಚ್ ಆರಂಭ ಜನತೆಗೆ ದಿಗಿಲು ಮೂಡಿಸಿದೆ. ಇನ್ನು ಮುಂದಿನ ಎರಡು ತಿಂಗಳ ಬಗ್ಗೆ ಆತಂಕವೂ ಇದೆ.

ಬಿಸಿಲಿನ ಪ್ರಖರತೆಯಿಂದ ಮಧ್ಯಾಹ್ನ ವೇಳೆಗೆ ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆಗೆ ಮಾರುಕಟ್ಟೆ ಸೇರಿದಂತೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಜನಸಂದಣಿ ಕಡಿಮೆಯಾಗುತ್ತಿದೆ.  ಈಗಲೇ ಇಷ್ಟೊಂದು ಬಿಸಿಲಿದ್ದರೆ, ಮುಂದಿನ ಏಪ್ರಿಲ್‌, ಮೇ ತಿಂಗಳ ಪರಿಸ್ಥಿತಿ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಪಾದಚಾರಿಗಳು ನೆತ್ತಿ ಸುಡುವ ಬಿಸಿಲಿ ನಿಂದ ರಕ್ಷಿಸಿಕೊಳ್ಳಲು ಕೊಡೆಗಳಿಗೆ, ಮರದ ನೆರಳಿಗೆ ಮೊರೆ ಹೋಗುತ್ತಿದ್ದಾರೆ. ಎಳನೀರು, ಕಬ್ಬಿನ ಹಾಲು, ಜ್ಯೂಸ್ ಮೊದಲಾದ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ.

ಇನ್ನು ದಾವಣಗೆರೆಯಲ್ಲಿ ಕುಡಿಯುವ ನೀರಿನ ತತ್ವಾರ ಆರಂಭವಾಗಿದೆ. ನಗರಕ್ಕೆ ನೀರು ಒದಗಿಸುವ ಕುಂದುವಾಡ ಹಾಗೂ ಟಿವಿ ಸ್ಟೇಷನ್‌ ಕೆರೆಗಳಲ್ಲಿರುವ ನೀರು ಏಪ್ರಿಲ್ ವರೆಗೆ ಲಭ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರಾದರೂ, ಸ್ವತಃ ಮಹಾನಗರ ಪಾಲಿಕೆ ಸದಸ್ಯರಿಗೂ ಈ ಬಗ್ಗೆ ನಂಬಿಕೆ ಇಲ್ಲ.  

ಕಳೆದ ಬಾರಿ ಇದೇ ರೀತಿ ಮಳೆ ಇಲ್ಲದೆ ಬರ ಆವರಿಸಿದ್ದಾಗ ನಗರದ ಬಡಾವಣೆ ಗಳಲ್ಲಿರುವ ಬೋರ್‌ಗಳು ಬತ್ತಿ ಹೋಗಿದ್ದವು. ಅದೇ ಪರಿಸ್ಥಿತಿ ಮರುಕಳಿಸಬಹುದು ಎಂಬ ಆತಂಕವೂ ಜನರಲ್ಲಿದೆ.

error: Content is protected !!