ಕೊನೆ ಭಾಗದ ರೈತರಿಗೆ ನೀರು ಹರಿಸಲು ಕ್ರಮಕ್ಕೆ ಡಿಸಿಗೆ ಸಚಿವ ಎಸ್ಸೆಸ್ಸೆಂ ಸೂಚನೆ
ದಾವಣಗೆರೆ, ಮಾ. 3- ಯಾವುದೇ ಮುಲಾಜಿಗೆ ಒಳಗಾಗದೇ ಭದ್ರಾ ನಾಲೆಗೆ ಅಳವಡಿಸಿರುವ ಅನಧಿಕೃತ ಪಂಪ್ಸೆಟ್ಗಳನ್ನು ತೆರವುಗೊಳಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಹರಿಸಲು ಬಿಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ದೊಡ್ಡಬಾತಿ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ದೊಡ್ಡಬಾತಿ ಮತ್ತು ಹಳೇಬಾತಿ ಗ್ರಾ.ಪಂ. ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಜನತಾ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಫೆ.16 ರಿಂದ 28 ರ ವರೆಗೆ ನೀರು ಹರಿಸಿದ ವೇಳೆ ಕಾಲುವೆಯಲ್ಲಿ ಅನಧಿಕೃತ ಪಂಪ್ಸೆಟ್ ಅಳವಡಿಸಿದ ಕಾರಣ ಕೊನೆ ಭಾಗದ ರೈತರಿಗೆ ನೀರು ತಲುಪಲು ಸಾಧ್ಯವಾಗಿಲ್ಲ, ಆದರೂ ಸಹ ಅಧಿಕಾರಿಗಳು ತೆರವು ಕಾರ್ಯಾಚರಣೆ ಮೂಲಕ ನೀರು ತಲುಪಿಸಲು ಕ್ರಮ ಕೈಗೊಂಡಿದ್ದಾರೆ ಎಂದರು.
ಅನಧಿಕೃತ ಪಂಪ್ಸೆಟ್ ತೆರವು ಕಾರ್ಯಾಚರಣೆಯಲ್ಲಿ ತಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ. ನೀರಿನ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಕೊನೆ ಭಾಗದ ರೈತರಿಗೆ ನೀರು ತಲುಪಿಸಲಾಗುತ್ತದೆ ಎಂದು ಹೇಳಿದರು.
ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ: ಜನಸ್ನೇಹಿ ಆಡಳಿತ ನೀಡುವ ಸದುದ್ದೇಶದಿಂದ `ಜನತಾ ದರ್ಶನ’ ಕಾರ್ಯಕ್ರಮದ ಮೂಲಕ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಪಂಚ ಗ್ಯಾರಂಟಿಗಳನ್ನು ಅರ್ಹರಿಗೆ ತಲುಪಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಜನಪ್ರತಿನಿಧಿಗಳ ಮೂಲಕ ಮಾಡಲಾಗುತ್ತಿದೆ ಎಂದರು.
ಇಡೀ ರಾಜ್ಯದಲ್ಲಿ ದಾವಣಗೆರೆಯಲ್ಲಿ ಮುಂಚೂಣಿಯಲ್ಲಿದೆ. ಅಧಿಕಾರಿಗಳ ಸ್ಪಂದನೆ ಕೂಡ ಸಕಾರಾತ್ಮಕವಾಗಿರುವ ಕಾರಣ ಯೋಜನೆಗಳ ಅನುಷ್ಠಾನದಲ್ಲಿ ಯಶಸ್ವಿಯಾಗುತ್ತಿವೆ. ಹೊಟ್ಟೆಗೆ ಹಿಟ್ಟು, ಇರಲು ಸೂರು, ಉತ್ತಮ ಆರೋಗ್ಯ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಇವು ಪ್ರತಿಯೊಬ್ಬರಿಗೂ ಇರಬೇಕಾದ ಅಗತ್ಯತೆಗಳು. ಸರ್ಕಾರದ ಆಶಯ ಕೂಡ ಇದೇ ಆಗಿದೆ ಎಂದು ಹೇಳಿದರು.
`ಜನತಾ ದರ್ಶನ’ದ ಅರ್ಜಿಗಳು ಶೇ. 98 ರಷ್ಟು ಇತ್ಯರ್ಥ : ಕಡ್ಲೇಬಾಳು ಗ್ರಾಮದಲ್ಲಿ ಮೊದಲ ಜನತಾ ದರ್ಶನ ಕಾರ್ಯಕ್ರಮ ಮಾಡಿದ್ದು, ಅಲ್ಲಿ ಸ್ವೀಕರಿಸಲಾದ ಅರ್ಜಿಗಳಲ್ಲಿ ಶೇ. 98 ರಷ್ಟು ವಿಲೇ ಮಾಡಲಾಗಿದೆ. ಕೆಲವು ಕೌಟುಂಬಿಕ ಸಮಸ್ಯೆ, ವ್ಯಾಜ್ಯಗಳ ಕಾರಣ ಕೆಲವೊಂದು ಅರ್ಜಿಗಳ ಇತ್ಯರ್ಥ ಮಾಡಲು ಸಾಧ್ಯವಾಗಿಲ್ಲ. ಅಮೃತ ನಗರದಲ್ಲಿ ಅನೇಕ ವರ್ಷಗಳಿಂದ ಮನೆಗಳಿಗೆ ಹಕ್ಕುಪತ್ರಗಳನ್ನು ಕೊಡಲು ಸಾಧ್ಯವಾಗಿರಲಿಲ್ಲ, ಆದರೆ ಈ ಜನತಾ ದರ್ಶನದಲ್ಲಿ ಇತ್ಯರ್ಥ ಮಾಡಿ ಎಲ್ಲಾ ಮನೆ ಮಾಲೀಕರಿಗೆ ಇ-ಸ್ವತ್ತು ದಾಖಲೆ ವಿತರಿಸಲಾಗಿದೆ ಎಂದರು.
ಅದರಂತೆ ದೊಡ್ಡಬಾತಿ ಮತ್ತು ಹಳೇಬಾತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 908 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಮನೆ, ನಿವೇಶನ, ಕುಡಿಯುವ ನೀರು, ಚರಂಡಿ, ರಸ್ತೆ ನಿರ್ಮಾಣಕ್ಕೆ ಸಂಬಂಧಿತ ಅರ್ಜಿಗಳಾಗಿದ್ದು, ಇವುಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೇ ಮತ್ತೆ ಉಳಿದವುಗಳನ್ನು ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ದೊಡ್ಡಬಾತಿ ಮತ್ತು ಹಳೇಬಾತಿ ಗ್ರಾ.ಪಂ. ವ್ಯಾಪ್ತಿಯ ಬಡ ಜನರಿಗೆ 155 ಮನೆಗಳಿಗೆ ಇ-ಸ್ವತ್ತು ಪ್ರಮಾಣ ಪತ್ರ ನೀಡಲಾಗಿದ್ದು, ಡಿಸಿಸಿ ಬ್ಯಾಂಕಿನಿಂದ ಸಾಲದ ರೂಪದಲ್ಲಿ ರೈತರಿಗೆ 89 ಹಸುಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
`ಜನತಾ ದರ್ಶನ’ ಕಾರ್ಯಕ್ರಮಕ್ಕೂ ಮೂರು ದಿನಗಳ ಮುಂಚೆಯೇ ಅಧಿಕಾರಿಗಳು ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ, ಜನರ ಅಹವಾಲುಗಳನ್ನು ಆಲಿಸಿ, ಜನರ ಮನೆ ಬಾಗಿಲಿಗೆ ಬಂದು ಅರ್ಜಿ ಪಡೆದು, ಸರ್ಕಾರದ ಸೌಲಭ್ಯ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಇನ್ನೂ ಯಾರಿಗಾದರೂ ತಲುಪದೇ ಇದ್ದಲ್ಲಿ ತಕ್ಷಣ ನಮಗೆ ತಿಳಿಸಿದರೆ ಅಂತವರಿಗೆ ತಲುಪಿಸಲಾಗುವುದು ಎಂದರು.
ಕಾಂಗ್ರೆಸ್ ಸರ್ಕಾರದಿಂದ ಜನಪರ, ಅಭಿವೃದ್ಧಿ ಪರ ಆಡಳಿತ : ಜನರಿಗೆ ಅಗತ್ಯವಾಗಿ ಬೇಕಾದ ಆಹಾರ ದವಸ, ಆರೋಗ್ಯ ರಕ್ಷಣೆ, ಕುಡಿಯುವ ನೀರು ಪೂರೈಕೆ, ವಸತಿ, ಶಿಕ್ಷಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಜನಪರ ಆಡಳಿತ ನಡೆಸುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಹೆಚ್ಚುವರಿಯಾಗಿ 100 ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಕಾಡಜ್ಜಿ ಮತ್ತು ಆವರಗೊಳ್ಳಕ್ಕೆ ಹೊಸದಾಗಿ ಪಶು ಆಸ್ಪತ್ರೆ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡಬಾತಿ ಕೆರೆ ಅಭಿವೃದ್ಧಿಪಡಿಸಿ, ಈ ಭಾಗದ ಹಾಗೂ ಸುತ್ತಮುತ್ತಲಿನ ಜನರಿಗೆ ಮತ್ತು ಗ್ರಾಮಗಳಿಗೆ ನೀರಿನ ಅನುಕೂಲ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಿ: ಮುಂಗಾರು, ಹಿಂಗಾರು ಮಳೆಯ ಕೊರತೆ ಮತ್ತು ಜಲಾಶಯದಲ್ಲಿ ನೀರಿನ ಸಂಗ್ರಹದ ಕೊರತೆಯ ಕಾರಣದಿಂದ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಅಗತ್ಯವಿದ್ದಲ್ಲಿ ಹೊಸ ಕೊಳವೆ ಬಾವಿ ಕೊರೆಯಿಸಲು ಮತ್ತು ಬಾಡಿಗೆ ಆಧಾರದ ಮೇಲೆ ಕೊಳವೆ ಬಾವಿಗಳನ್ನು ಪಡೆಯುವ ಮೂಲಕ ಬೇಸಿಗೆ ನಿರ್ವಹಣೆ ಮಾಡಬೇಕಾಗಿದೆ ಎಂದರು.
ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಅಭಾವ ಇದೆ ಎಂದು ದೂರು ಬರದಂತೆ ಕ್ರಮ ವಹಿಸಬೇಕು. ಚನ್ನಗಿರಿ, ಜಗಳೂರು ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಎಸ್ಸೆಸ್ಸೆಂ ಹೇಳಿದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿ, ದೊಡ್ಡಬಾತಿ, ಹಳೇಬಾತಿ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಮನೆ ಮನೆಗೆ ಭೇಟಿ ನೀಡಿ ಜನರ ಕುಂದುಕೊರತೆಯ ಅಹವಾಲು ಸ್ವೀಕರಿಸಲಾಗಿದೆ. ಎರಡು ಗ್ರಾಮಗಳಿಂದ 908 ಅರ್ಜಿಗಳು ಇಲ್ಲಿಯವರೆಗೆ ಸ್ವೀಕೃತವಾಗಿವೆ. ಜ್ವಲಂತ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಅಂಗನವಾಡಿ ಕೇಂದ್ರ ನಿರ್ಮಾಣ, ಖಾತರಿಯಡಿ ದನದ ಕೊಟ್ಟಿಗೆ ನಿರ್ಮಾಣ, ಸಚಿವರ ನಿರ್ದೇಶನದಂತೆ ದೊಡ್ಡಬಾತಿ ಗ್ರಾಮದಲ್ಲಿ ಎಲ್ಲಾ ಕಡೆ ಚರಂಡಿ ನಿರ್ಮಾಣ ಮಾಡಲು ಕ್ರಮ ವಹಿಸಲಾಗುತ್ತದೆ ಎಂದರು.
ದೊಡ್ಡಬಾತಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಹನುಮಂತಪ್ಪ, ಅಧ್ಯಕ್ಷತೆ ವಹಿಸಿದ್ದರು. ಹಳೇಬಾತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸೀತಾ ರಾಮಪ್ಪ, ದೊಡ್ಡಬಾತಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭಾನುವಳ್ಳಿ ಸಿದ್ದಪ್ಪ, ಹಳೇಬಾತಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪುಷ್ಪ ಎ, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಬೇತೂರು ಕರಿಬಸಪ್ಪ, ಮುದೇಗೌಡ್ರು ಗಿರೀಶ್, ಮುಖಂಡರಾದ ಬಿ.ಕೆ.ಪರಶುರಾಮ್, ಜೆಸಿಬಿ ಹನುಮಂತಪ್ಪ, ಕೆ.ಜಿ. ಉಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಪ್ರೇಮ, ಉಮಾ ಮತ್ತು ಸಂಗಡಿಗರು ನಾಡಗೀತೆ ಹಾಡಿದರು. ಉಪವಿಭಾಗಾಧಿಕಾರಿ ದುರ್ಗಾಶ್ರೀ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ನಿರೂಪಿಸಿದರು.
ಇದೇ ವೇಳೆ ಗರ್ಭಿಣಿಯರಿಗೆ ಸೀಮಂತ ಕಾರ್ಯ, ವಿಕಲಚೇತನರಿಗೆ ಸಾಧನಾ ಸಲಕರಣೆ, ಕಾರ್ಮಿಕ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ನಿವೇಶನ ಹಕ್ಕುಪತ್ತ ವಿತರಣೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು.