ಸಿ.ಜಿ. ಆಸ್ಪತ್ರೆಯಲ್ಲಿ ಪಾವತಿಯಾಗದ ವೇತನ ಹೊರಗುತ್ತಿಗೆ ಸಂಸ್ಥೆಯಿಂದ ದೌರ್ಜನ್ಯದ ಆರೋಪ
ದಾವಣಗೆರೆ, ಫೆ. 28 – ನಗರದ ಸಿ.ಜಿ. ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಉದ್ಯೋಗಿಗಳಲ್ಲಿ ಪರಿಶಿಷ್ಟರೇ ಹೆಚ್ಚಾಗಿದ್ದಾರೆ. ಅವರಿಗೆ ಐದಾರು ತಿಂಗಳಿನಿಂದ ವೇತನವಾಗಿಲ್ಲ ಎಂಬ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಅವರ ಬಳಿ ದೂರು ದಾಖಲಿಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪಂಗಡ ದವರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ನೀಲಗಿರಿ, ಸಿ.ಜಿ. ಜಿಲ್ಲಾ ಆಸ್ಪತ್ರೆಯಲ್ಲಿ ರಾಯಚೂರಿನ ದೀಕ್ಷಾ ಖಾಸಗಿ ಸಂಸ್ಥೆಯ ಮೂಲಕ 200 ಉದ್ಯೋಗಿಗಳು ಹೊರಗುತ್ತಿಗೆಯಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ. ಇವರಿಗೆ ಆರು ತಿಂಗಳಿನಿಂದ ವೇತನವಾಗಿಲ್ಲ ಎಂದರು.
ಅಲ್ಲದೇ, ಖಾಸಗಿ ಸಂಸ್ಥೆಯ ಮೂಲಕ ಬೆಳಿಗ್ಗೆ ಹಾಜರಿ ಪಡೆದುಕೊಳ್ಳುವವರು ರೌಡಿಗಳ ರೀತಿ ವರ್ತಿಸುತ್ತಿದ್ದಾರೆ. ಐದು ನಿಮಿಷ ತಡವಾದರೂ ವಾಪಸ್ ಮನೆಗೆ ಕಳಿಸುತ್ತಿದ್ದಾರೆ. ಈ ಬಗ್ಗೆ ವಿರೋಧಿಸಿದರೆ, ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಆ ಜಾಗಕ್ಕೆ ಬೇರೆಯವರನ್ನು 50-60 ಸಾವಿರ ರೂ. ಲಂಚ ಪಡೆದು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಜಿ. ಆಸ್ಪತ್ರೆ ಉದ್ಯೋಗಿ ಕಮಲಮ್ಮ, 23 ವರ್ಷದಿಂದ ಕೆಲಸ ಮಾಡುತ್ತಿದ್ದೇವೆ. ಆದರೂ, ಸಮಸ್ಯೆ ಮಾಡುತ್ತಿದ್ದಾರೆ. ಐದು ನಿಮಿಷ ತಡವಾದರೂ ವಾಪಸ್ ಕಳಿಸುತ್ತಾರೆ. ಕಣ್ಣೀರಿಟ್ಟು ಮನೆಗೆ ಮರಳುವಂತಾಗಿದೆ ಎಂದರು.
ಈ ಬಗ್ಗೆ ಮಾತನಾಡಿದ ಎಸ್ಪಿ ಉಮಾ ಪ್ರಶಾಂತ್, ಲಿಖಿತ ದೂರು ಪಡೆದುಕೊಳ್ಳುತ್ತೇವೆ. ಖಾಸಗಿ ಸಂಸ್ಥೆಯ ತಪ್ಪಿದ್ದರೆ ಎಫ್.ಐ.ಆರ್. ದಾಖಲಿಸುತ್ತೇವೆ ಎಂದರು.
ಪತಿಯ ಸಾಲಕ್ಕೆ ವಿಧವಾ ಪತ್ನಿಗೆ ಪೀಡನೆ
ಫೈನಾನ್ಸ್ ಕಂಪನಿಗಳು ಸಾಲ ನೀಡುವಾಗ ಜೀವ ವಿಮೆ ಮಾಡಿಸಬೇಕಾಗುತ್ತದೆ. ಸಾಲ ಪಡೆದ ವ್ಯಕ್ತಿ ತೀರಿಕೊಂಡರೆ, ಆ ವಿಮೆಯಿಂದ ಹಣ ಪಡೆಯಬೇಕು. ಆದರೆ, ಕೆಲ ಫೈನಾನ್ಸ್ ಕಂಪನಿಗಳು ಈ ವಿಮಾ ಕಂತು ಪಾವತಿಸುತ್ತಿಲ್ಲ. ಗಂಡ ಮೃತಪಟ್ಟ ನಂತರ ಪತ್ನಿಯನ್ನು ಸಾಲಕ್ಕಾಗಿ ಪೀಡಿಸುತ್ತಿವೆ ಎಂದು ಸಂದೇಶ್ ನಾಯ್ಕ್ ಎಂಬುವವರು ದೂರಿದರು. ಗಂಡ ತೀರಿಕೊಂಡ ದುಃಖದಲ್ಲಿರುವ ಪತ್ನಿ ಜ್ಯೋತಿ ಎಂಬುವವರಿಗೆ ಪ್ರತಿದಿನ ಮನೆಗೆ ಬಂದು ಸಾಲ ಮರು ಪಾವತಿಗೆ ಕಾಡುತ್ತಿದ್ದಾರೆ ಎಂದರು. ಇದೇ ರೀತಿಯ ಇನ್ನೂ ಎರಡು ಪ್ರಕರಣಗಳಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಅಂಬೇಡ್ಕರ್ ಭವನಕ್ಕಾಗಿ ಆಗ್ರಹ
ನಗರದ ಪ್ರಮುಖ ಭಾಗದಲ್ಲೇ ಅಂಬೇಡ್ಕರ್ ಭವನ ನಿರ್ಮಿಸಬೇಕು ಎಂದು ಸಭೆಯಲ್ಲಿ ಹಲ ವಾರು ದಲಿತ ಮುಖಂಡರು ಒತ್ತಾಯಿಸಿದರು. ಅಗ್ನಿಶಾಮಕ ದಳ ಹಾಗೂ ಹೆದ್ದಾರಿಯ ಐ.ಬಿ. ಬಳಿ ಎರಡು ಜಾಗಗಳನ್ನು ಗುರುತಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್ ಹೇಳಿದರು. ಇದಕ್ಕೆ ಒಪ್ಪದ ಮುಖಂಡರು, ನಗರದ ಹೊರ ವಲಯದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿದರೆ ನಿರ್ವಹಣೆ ಕಷ್ಟವಾಗುತ್ತದೆ. ನಗರದ ಪ್ರಮುಖ ಭಾಗದಲ್ಲೇ ಭವನ ನಿರ್ಮಿಸಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಸಿದರು.
ನಿಂಗಪ್ಪ ಬನ್ನಿಹಟ್ಟಿ ಎಂಬುವವರು ಮಾತನಾಡಿ, ಹದಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶಿಷ್ಟರ ಕುಂದು ಕೊರತೆ ಸಭೆ ಕರೆದಿಲ್ಲ. ದಲಿತ ಮುಖಂಡರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾತನಾಡಲು ಠಾಣೆಗೆ ತೆರಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ದೂರಿದರು. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಹೆಗ್ಗೆರೆ ರಂಗಪ್ಪ ಮಾತನಾಡಿ, ಬೇಡ ಜಂಗಮರಲ್ಲದವರೂ ಸಹ ಇದೇ ಜಾತಿಯ ಹೆಸರಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ. ಶಾಲಾ ಹಂತದಲ್ಲಿಯೇ ನಕಲಿ ಜಾತಿ ದಾಖಲಾತಿಯ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಿಂದ ಪರಿಶಿಷ್ಟರ ಕುಂದು ಕೊರತೆ ಸಭೆ ಕರೆದಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಡಿ.ಎಸ್.ಎಸ್. ಮುಖಂಡ ದುಗ್ಗಪ್ಪ ಸೇರಿದಂತೆ ಹಲವರು ದೂರಿದರು. ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯುವುದಾಗಿ ಎಸ್ಪಿ ಉಮಾ ಪ್ರಶಾಂತ್ ತಿಳಿಸಿದರು.
ಪೌರ ಕಾರ್ಮಿಕರ ಕ್ವಾರ್ಟರ್ಸ್‌ಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಉಚ್ಚಂಗೆಪ್ಪ ಒತ್ತಾಯಿಸಿದರು.
ಆದಿ ಜಾಂಬವ ಅಭಿವೃದ್ಧಿ ನಿಗಮ, ಎಸ್.ಟಿ. ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮಗಳ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಎರಡು ಹಾಗೂ ಮೂರನೇ ಮಹಡಿಯಲ್ಲಿ ಇವೆ. ಇದರಿಂದಾಗಿ ವೃದ್ಧರಿಗೆ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ದೂರಲಾಯಿತು.
ಸಭೆಯಲ್ಲಿ ಎ.ಎಸ್.ಪಿ. ವಿಜಯ ಕುಮಾರ್ ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಾಗರಾಜ್, ಆರ್.ಟಿ.ಒ. ಪ್ರಮುತೇಶ್ ಮತ್ತಿತರರು ಉಪಸ್ಥಿತರಿದ್ದರು.